ಚಿತ್ರದುರ್ಗ:
ದೇಶದ ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ರಾಷ್ಟ್ರ ಅಭಿವೃದ್ದಿಯಾಗಲು ಸಾಧ್ಯ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ನರೇನಹಳ್ಳಿ ಅರುಣ್‍ಕುಮಾರ್ ಅಭಿಪ್ರಾಯಪಟ್ಟರು.
ಅಸರ್ ಸಂಸ್ಥೆ ಮೈಸೂರು, ಸ್ವಾಭಿಮಾನಿ ಮೈನಾರಿಟಿಸ್ ವುಮೆನ್ಸ್ ವೆಲ್‍ಫೇರ್ ಅಸೋಸಿಯೇಷನ್ ಚಿತ್ರದುರ್ಗ ಇವರ ಸಹಯೋಗದೊಂದಿಗೆ ಬಂಜಾರ ಭವನದಲ್ಲಿ 2018-19 ನೇ ಸಾಲಿನ ಜಿಲ್ಲಾ ಮಕ್ಕಳ ಶೈಕ್ಷಣಿಕ ಸಮೀಕ್ಷಾ ಅಂಗವಾಗಿ ಏರ್ಪಡಿಸಲಾಗಿರುವ ಮೂರು ದಿನಗಳ ಕಾರ್ಯಾಗಾರವನ್ನು ಸಮಗ್ರ ಮಾಹಿತಿಯುಳ್ಳ ಪರೀಕ್ಷಾ ಸಾಧನೆಗಳ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದರಿಂದ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಹಾಗಾಗಿ ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆ ತರಲು ಮೈಸೂರಿನ ಅಸರ್ ಸಂಸ್ಥೆ ಪ್ರತಿ ವರ್ಷವೂ ಮಕ್ಕಳ ಶಿಕ್ಷಣ ಯಾವ ಹಂತದಲ್ಲಿದೆ ಎಂಬುದನ್ನು ಸಮೀಕ್ಷೆ ಮಾಡುತ್ತಿದೆ. ಸಾಕಷ್ಟು ಪದವಿ ಪಡೆದು ಸರ್ಟಿಫಿಕೇಟ್‍ಗಳನ್ನು ಇಟ್ಟುಕೊಂಡಿರುವವರಿಗೆ ಸರಿಯಾಗಿ ವ್ಯಾಕರಣ ಬರೆಯಲು ಓದಲು ಬರುವುದಿಲ್ಲ.ಶೈಕ್ಷಣಿಕ ವ್ಯವಸ್ಥೆ ಸುಧಾರಣೆಯಾದಾಗ ಮಾತ್ರ ಪ್ರಧಾನಿ ಮೋದಿರವರ ಆಸೆಯಂತೆ ಅಚ್ಚೆ ದಿನ್ ಬರುತ್ತದೆ ಎಂದು ಹೇಳಿದರು.
ಸ್ವಾಭಿಮಾನಿ ಮೈನಾರಿಟಿಸ್ ವುಮೆನ್ಸ್ ವೆಲ್‍ಫೇರ್ ಅಸೋಸಿಯೇಷನ್‍ನ ಬೀಬಿಜಾನ್ ಮಾತನಾಡಿ ಶಿಕ್ಷಣಕ್ಕಾಗಿ ಸರ್ಕಾರ ಶೇ.ಏಳರಷ್ಟು ಹಣ ವಿನಿಯೋಗಿಸುತ್ತಿದೆ. ಆದರೆ ಮಕ್ಕಳ ಶೈಕ್ಷಣಿಕ ಮಟ್ಟ ಇನ್ನು ಸುಧಾರಣೆಯಾಗಿಲ್ಲ. ಶಿಕ್ಷಣದ ಗುಣಮಟ್ಟ ಎತ್ತ ಸಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕಾಗಿ ಪ್ರತಿ ವರ್ಷವೂ ಹನ್ನೆರಡು ಸಾವಿರ ಹಳ್ಳಿಗಳಲ್ಲಿ ಸುಮಾರು ಆರು ಲಕ್ಷ ಮಕ್ಕಳ ಸಮೀಕ್ಷೆ ನಡೆಸಲಾಗುವುದು. 25 ಸಾವಿರ ಸ್ವಯಂ ಸೇವಕರು ಸಮೀಕ್ಷೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಮಕ್ಕಳ ಶಿಕ್ಷಣ ಕುರಿತು ಸಮೀಕ್ಷೆ ನಡೆಸಿದ ನಂತರ ಸಮಗ್ರ ಬುಕ್ ಬಿಡುಗಡೆ ಮಾಡಿ ಪ್ರಧಾನಿ ಬಳಿಗೆ ಕೊಂಡೊಯ್ಯಲಾಗುವುದು. ನಂತರ ಅವರು ಶಿಕ್ಷಣಕ್ಕೆ ಬೇಕಾದ ಅಗತ್ಯ ನೆರವು ನೀಡಲಿದ್ದಾರೆ ಎಂದು ತಿಳಿಸಿದರು.
ಶಿಕ್ಷಣದ ಗುಣಮಟ್ಟ ಕಡಿಮೆಯಾಗಿರುವುದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಇಂತಹ ತರಬೇತಿಗಳು ಅತಿ ಮುಖ್ಯ. ಇದರಿಂದ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಹೋಗಬಹುದು ಎಂದು ತರಬೇತಿಯ ಮಹತ್ವವನ್ನು ವಿವರಿಸಿದರು.
ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನದ ಸಂಚಾಲಕ ಗಣೇಶ್‍ನಾಯ್ಕ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ರಮೇಶ್‍ನಾಯ್ಕ, ಇಸ್ಮಾಯಿಲ್ ವೇದಿಕೆಯಲ್ಲಿದ್ದರು.