ತುಮಕೂರು
ನಗರದ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಕಚೇರಿಯಲ್ಲಿ ಪಿಯುಸಿಎಲ್ ಜಿಲ್ಲಾ ಘಟಕದ ಸಭೆ ಅಧ್ಯಕ್ಷ ಪ್ರೊ.ಕೆ.ದೊರೈರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಯುಸಿಎಲ್ ಅಧ್ಯಕ್ಷ ದೊರೈರಾಜ್, ಪಿಯುಸಿಎಲ್ ನಿರಂತರವಾಗಿ ಮಾನವ ಹಕ್ಕುಗಳ ರಕ್ಷಣೆಗಾಗಿ ಶ್ರಮಿಸುತ್ತಾ ಬರುತ್ತಿದೆ. ಆನ ಸಾಮಾನ್ಯರ ಆಹಾರದ ಹಕ್ಕು, ಯುವಜನರಿಗೆ ಮಾನವಹಕ್ಕು ಕುರಿತು ತಿಳುವಳಿಕೆ ಮೂಡಿಸುವುದು, ಮಾನವ ಘನತೆಯ ಹೋರಾಟಗಳನ್ನು ಪ್ರೇರೇಪಿಸುವುದು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ಮತ್ತು ಮಾನವ ಹಕ್ಕುಗಳ ವಿರೋಧಿ ನಿಲುವುಗಳನ್ನು ಬಹಿರಂಗಗೊಳಿಸುವುದು ಮಾಡುತ್ತ ಬಂದಿದೆ ಎಂದರು.
ಸಮಾಜದಲ್ಲಿ ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಮಾನವ ಹಕ್ಕುಗಳ ದಮನ ನಡೆಯುತ್ತಲೇ ಇದೆ. ದಲಿತರು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿದ್ದು, ಇದರ ವಿರುದ್ಧ ಯುವಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ದುರ್ಬಲ ವರ್ಗದ ಜನತೆ ಘನತೆಯಿಂದ ಸ್ವತಂತ್ರವಾಗಿ ಬದುಕುವುದಕ್ಕೆ ಎಲ್ಲರೂ ಅವಕಾಶ ನೀಡಬೇಕು. ನಮ್ಮಂತೆ ಇತರರು ಎಂಬುದನ್ನು ಅರ್ಥ ಮಾಡಿಕೊಂಡು ಬದುಕಿದರೆ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಮಾನವ ಹಕ್ಕುಗಳ ಬಗ್ಗೆ ಯುವಜನರು ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಆ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ದೌರ್ಜನ್ಯಗಳನ್ನು ತಡೆಯಲು ಹೋರಾಟಕ್ಕೆ ಸಜ್ಜುಗೊಳಿಸಬೇಕು. ಮಾನವ ಹಕ್ಕುಗಳ ರಕ್ಷಣೆಗೆ ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪಿಯುಸಿಎಲ್ ಅಧ್ಯಕ್ಷರಾಗಿ ಕೆ.ದೊರೈರಾಜ್, ಉಪಧ್ಯಕ್ಷರಾಗಿ ಡಾ.ಅರುಂಧತಿ, ಲಕ್ಷ್ಮೀರಂಗಯ್ಯ, ಕಾರ್ಯದರ್ಶಿಯಾಗಿ ಕೆಂಪರಾಜು, ಖಜಾಂಚಿಯಾಗಿ ಶೆಟ್ಟಾಳಯ್ಯ ಆಯ್ಕೆ ಮಾಡಲಾಯಿತು.
ರಾಜ್ಯ ಸಮಿತಿ ಸದಸ್ಯರಾಗಿ ತಾಜುದ್ದೀನ್, ದೀಪಿಕ, ಎ.ನರಸಿಂಹಮೂರ್ತಿ ಹಾಗೂ ಜಿಲ್ಲಾ ಸಮಿತಿ ಸದಸ್ಯರಾಗಿ ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಬಾ.ಹ.ರಮಾಕುಮಾರಿ, ಸೈಯದ್ ಮುಜೀಬ್, ಬಿ.ಉಮೇಶ್, ಎಸ್.ರಮೇಶ್, ಮಲ್ಲಿಕಾರ್ಜುನ್, ಡಾ.ಬಸವರಾಜು, ಸಿ.ಯತಿರಾಜ್, ರಾಮಚಂದ್ರಪ್ಪ, ಕೆ.ಈ.ಸಿದ್ದಯ್ಯ, ಬಾಬಾ, ಅನಿಲ್ ಕುಮಾರ್ ಚಿಕ್ಕದಾಳವಟ್ಟ ಆಯ್ಕೆಯಾಗಿದ್ದಾರೆ.