ತುಮಕೂರು:
ಪರಿಚಯಸ್ತರಿಂದಲೇ ಸ್ತ್ರೀ ದೌರ್ಜನ್ಯ ಹೆಚ್ಚು ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಸಿ.ಎನ್.ಸುಗುಣಾದೇವಿ ಅಭಿಪ್ರಾಯಪಟ್ಟರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು ಇವರ ವತಿಯಿಂದ ಸಮಾಜ ಶಾಸ್ತ್ರ ವಿಭಾಗದಿಂದ ಏರ್ಪಡಿಸಲಾಗಿದ್ದ ಮಹಿಳಾ ದೌರ್ಜನ್ಯ ಮತ್ತು ಸವಾಲುಗಳು ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಸ್ತ್ರೀಯ ಮೇಲಿನ ದೌರ್ಜನ್ಯವನು ದೌರ್ಜನ್ಯವೆಂದು ಪರಿಗಣಿಸದೆ ಇರುವುದು ಸಮಾಜದಲ್ಲಿ ಸ್ತ್ರೀ ದೌರ್ಜನ್ಯ ಹೆಚ್ಚಾಗಲು ಕಾರಣವಾಗಿದೆ. ಹೆಣ್ಣು ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಸುಧಾರಣೆಯಾದರೆ ಸಾಲದು. ಗಂಡು ಮಕ್ಕಳನ್ನು ಬೆಳೆಸುವಲ್ಲಿಯೂ ಸಾಕಷ್ಟು ಬದಲಾವಣೆಯಾಗಬೇಕು. ಹೆಣ್ಣು ಮಕ್ಕಳಿಗೆ ಗೌರವ ನೀಡುವುದನ್ನು ಗಂಡು ಮಕ್ಕಳಿಗೆ ಕಲಿಸದಿದ್ದರೆ ಮುಂದೆ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಹಲವು ರೀತಿಯ ದೌರ್ಜನ್ಯವೆಸಗುವ ಅಪಾಯವಿರುತ್ತದೆ ಎಂದರು.
ಇಂದಿನ ಸ್ತ್ರೀ ದೌರ್ಜನ್ಯ ಅಂಕಿ ಅಂಶಗಳನ್ನು ಗಮನಿಸಿದರೆ ಸ್ತ್ರೀಯರ ವಿರುದ್ಧದ ಹಿಂಸಾಚಾರ ಹೆಚ್ಚಳಗೊಂಡಿರುವುದು ವ್ಯಕ್ತವಾಗುತ್ತದೆ ಮತ್ತು ಭಯ ಹುಟ್ಟಿಸುವಂತಾಗಿದೆ. ಇಂದು ಪ್ರಾಚೀನ ಕಾಲದ ಸ್ತ್ರೀ ಸಮಸ್ಯೆಗಳು ಇಂದು ಪರಿವರ್ತಿತ ರೂಪ ಪಡೆಯುತ್ತಿದೆ. ಇಂದು ಸ್ತ್ರೀಯರು ಹಲವು ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಅವುಗಳಿಗೆ ಸಾಮೂಹಿಕ ಅತ್ಯಾಚಾರ, ಸ್ತ್ರೀ ಅಪಹರಣ, ವಿಧವೆಯರ ಮೇಲಿನ ದೌರ್ಜನ್ಯ, ಆ್ಯಸಿಡ್ ದಾಳಿ, ಭ್ರೂಣ ಹತ್ಯೆ, ವರದಕ್ಷಿಣೆ ಸಾವು ಮುಂತಾದ ಬಹುವಿಧವಾದ ಸ್ತ್ರೀ ದೌರ್ಜನ್ಯಗಳು ಸಮಾಜದಲ್ಲಿ ವ್ಯಾಪಕವಾಗಿ ಕಂಡುಬರುತ್ತಿದ್ದು, ಆಧುನಿಕ ಸಮಾಜವನ್ನು ನಾಚಿಕೆಗೀಡು ಮಾಡುತ್ತಿದೆ ಎಂದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎ. ಅಶ್ವಾಖ್ ಅಹಮದ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಸಾಮಾಜಿಕ ಸಮಸ್ಯೆಗಳಲ್ಲೊಂದಾದ ಸ್ತ್ರೀಯರ ವಿರುದ್ಧದ ದೌರ್ಜನ್ಯಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಸದ್ಯದ ಅವಶ್ಯಕತೆಯಾಗಿದೆ. ಸಮಾಜದ ವಿವಿಧ ಸ್ತರಗಳಲ್ಲಿ ಸಮಸ್ಯೆಯ ಅರಿವು ಮೂಡಿಸುವ ಜವಾಬ್ದಾರಿ ಹೊಂದಿದ್ದಾರೆ. ಅದರ್ಲೂ ಸಮಾಜಶಾಸ್ತ್ರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಸ್ತ್ರೀ ಶೋಷಿತ ಸಮಸ್ಯೆಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಎಸ್.ಜಗದೀಶ್ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಇಂತಹ ವಿಶೇಷ ಕಾರ್ಯಕ್ರಮಗಳ ಮುಖಾಂತರ ಸ್ತ್ರೀ ಶೋಷಣೆಯ ವಿವಿಧ ರೂಪಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ನ್ಯಾಕ ಸಂಚಾಲಕ ಡಾ.ಜಿ.ತಿಪ್ಪೇಸ್ವಾಮಿ, ಐಕ್ಯೂಎಸಿ ಸಂಚಾಲಕ ಡಾ.ಜಿ.ಕೆ.ನಾಗರಾಜು, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ್ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಪ್ರಥಮ ಪದವಿ-ಹೆಚ್.ಇ.ಎಸ್. ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಮೂಡಿಬಂದವು. ಅಂಬಿಕ ಪ್ರಾರ್ಥಿಸಿದರೆ, ಸಮಯಬಾನು ಸ್ವಾಗತಿಸಿ, ದಿಲೀಪ್ ಕುಮಾರ್ ವಂದಿಸಿದರು. ನಿವೇದಿತ ಕಾರ್ಯಕ್ರಮ ನಿರೂಪಿಸಿದರು.