ತುಮಕೂರು:
ಪರಿಶ್ರಮ, ಪ್ರಾಮಾಣಿಕ ಕೆಲಸದಿಂದ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ನಾಗಣ್ಣನವರೇ ಕಣ್ಣೆದುರಿನ ಸಾಕ್ಷಿ, ಮುಂದೆ ಸಾಗುವವರಿಗೆ ಇವರ ಸಾಧನೆಯೇ ಪ್ರೇರಣೆ ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಪ್ರಜಾಪ್ರಗತಿ ಪತ್ರಿಕೆ ಸಂಪಾದಕರಾದ ಎಸ್.ನಾಗಣ್ಣನವರ ಸಾಧನೆ ಶ್ಲಾಘಿಸಿದರು.
ನಗರದ ಸಿದ್ಧಿವಿನಾಯಕ ಸಮುದಾಯಭವನದಲ್ಲಿ ಎಸ್. ನಾಗಣ್ಣನವರ ಅಭಿನಂದನಾ ಸಮಾರಂಭ ಉದ್ಘಾಟಿಸಿದ ಅವರು, ಸಣ್ಣದಾಗಿ ಆರಂಭಿಸಿದ ಪತ್ರಿಕೆ ಈ ಮಟ್ಟಕ್ಕೆ ದೊಡ್ಡದಾಗಿ ಬೆಳೆದು, ಜನಪ್ರಿಯತೆ ಪಡೆದ ಯಶಸ್ಸಿನ ಹಿಂದೆ ನಾಗಣ್ಣನವರ ಶ್ರಮ, ವೃತ್ತಿಬದ್ದತೆ, ಎದುರಾಗುವ ಕಷ್ಟಗಳನ್ನ ಎದುರಿಸಿ ಗೆಲ್ಲುವ ಛಲಗಾರಿಕೆ ಕಾರಣವಾಗಿದೆ. ಇಂತಹುದೊಂದು ಪತ್ರಿಕೆಯನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ನಾಗಣ್ಣನವರನ್ನು ಅಭಿನಂದಿಸಿ, ಗೌರವಿಸುವುದು ಸಮಾಜದ ಸತ್ಸಂಪ್ರದಾಯ, ಅಂತಹ ಶ್ಲಾಘನೀಯ ಕಾರ್ಯ ಇಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ನಾಗಣ್ಣನವರ ಸಾಧನೆ ಸಾಮಾನ್ಯವಲ್ಲ, ಸಮಾನ್ಯ ಪತ್ರಿಕೆ ಪ್ರಾರಂಭ ಮಾಡಿ, 1988ರಲ್ಲಿ ಪ್ರಜಾಪ್ರಗತಿಯನ್ನು ದಿನ ಪತ್ರಿಕೆಯಾಗಿ ಮಾಡುವ ಮೂಲಕ ನಾಗಣ್ಣನವರು ಜನರಿಗೆ ಕೊಡುಗೆ ನೀಡಿದರು. ಆ ದಿನ ನಾಗಣ್ಣನವರೂ ಊಹೆ ಮಾಡಿರಲು ಸಾಧ್ಯವಿಲ್ಲ, ಪತ್ರಿಕೆ ಈ ಮಟ್ಟದಲ್ಲಿ ಬೆಳೆಯುತ್ತದೆ ಎಂದು, ತಾವು ಪ್ರಗತಿ ಟಿವಿ ಆರಣಭಿಸುವುದಾಗಿಯೂ ಊಹಿಸಿರಲಿಲ್ಲ. ನಾಗಣ್ಣನವರ ಪರಿಶ್ರಮ, ಪ್ರಾಮಾಣಿಕತೆ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಇಲ್ಲಿಯವರೆಗೆ ತಣದಿದೆ ಎಂದು ಭಾವಿಸುತ್ತೇನೆ. ಈ ಸಾಧನೆ ನಾಗಣ್ಣರ ಜೀವಮಾನದ ಸಾಧನೆ, ಈ ಸಾಧನೆಗೆ ನಾವೂ ಸಂತೋಷಪಡುತ್ತೇವೆ ಎಂದರು.
ಈ ಯಶಸ್ಸಿನ ಹಿಂದೆ ನಾಗಣ್ಣನವರ ಪತ್ನಿ ಶಾರದಮ್ಮನವರ ಕೊಡುಗೆಯು ಅಪಾರವಾಗಿದೆ. ನಾಗಣ್ಣರ ರೀತಿ ನೀತಿ, ಸಿಟ್ಟು ಸಂತೋಚ ಎಲ್ಲವನ್ನೂ ಜೊತೆಜೊತೆಯಾಗಿ ಅನುಭವಿಸಿಕೊಂಡು ಸಹಕರಿಸಿದ್ದಾರೆ, ಪ್ರೋತ್ಸಾಹಿಸಿದ್ದಾರೆ ಅವರಿಗೂ ಅಭಿನಂದನೆ ಎಂದು ಹೇಳಿದರು.
ಇಂದು ವಿಶ್ವ ಮಟ್ಟದಲ್ಲಿ ಸುದ್ದಿಮಾಧ್ಯಮ ಬಹಳಷ್ಟು ಬದಲಾಗಿದೆ. ಆ ದಿನದ ಕಾಲದಲ್ಲಿ ನಾಗಣ್ಣನವರು ಮೊಳೆ ಜೋಡಿಸಿ ಹೊರ ತರುತ್ತಿದ್ದ ಪತ್ರಿಕೆ ಇಂದು ಐದು ಜಿಲ್ಲೆಗಳಲ್ಲಿ ಪ್ರಸಾರ ಹೊಂದಿದೆ. ಜೊತೆಗೆ ಪತ್ರಿಕೆಗೆ ಆಧುನಿಕ ತಂತ್ರಜ್ಞಾನ ಏನೇನು ಬೇಕಿದೆ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಹಳ್ಳಿಯ ಸಾಮಾನ್ಯ ಕುಟುಂಬದ, ಸಣ್ಣ ಪ್ರಮಾಣದ ಶಿಕ್ಷಣ ಪಡೆದು, ಹೆಚ್ಚು ಪ್ರಾಪಂಚಿಕ ಜ್ಞಾನ ಇರದ, ಆಧುನಿಕ ಜಗತ್ತಿನ ಪರಿಚಯ ಇರದ ಹಿನ್ನೆಲೆಯಲ್ಲಿ ಬಂದ ಇವರು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮ ಆಯ್ಕೆ ಮಾಡಿಕೊಂಡು ಅದರಲ್ಲಿ ಯಶಸ್ಸು ಪಡೆದು ಮಾಡಿದ ಸಾಧನೆ ಸಾಮಾನ್ಯವಾದುದಲ್ಲ ಎಂದು ಡಾ. ಪರಮೇಶ್ವರ್ ಅಭಿನಂದಿಸಿದರು.
ಇಂದು ವಿಶ್ವದ ಮಾಧ್ಯಮಗಳು ನೈಜ ಸ್ಥಿತಿಯಿಂದ ದೂರಹೋಗುತ್ತಿವೆ ಎಂಬ ಭಾವನೆ ವ್ಯಕ್ತವಾಗಿದೆ. ಒಂದು ಪತ್ರಿಕೆಯಲ್ಲಿ ಬರೆದಿರುವುದೇ ಒಂದು ಎಂದು ಓದುಗರಿಗೆ ಅರ್ಥವಾಗುತ್ತದೆ. ಅದರಲ್ಲೂ ನಮ್ಮಂತಾ ರಾಜಕಾರಣಿಗಳಿಗೆ ಹಗೆ ಅನಿಸುತ್ತದೆ. ನೈಜಸ್ಥಿತಿಯಿಂದ ಮಾಧ್ಯಮಗಳು ದೂರ ಹೋದರೆ ಅಪಾಯ, ತುಂಬಾ ದೂರ ಹೋಗಬೇಡಿ ವಾಪಸ್ ಬನ್ನಿ, ಮಾಧ್ಯಮಗಳಲ್ಲಿ ನೈಜತೆ ಇಲ್ಲದಿದ್ದರೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮವನ್ನು ಪ್ರಶ್ನೆ ಮಾಡುವಂತಾಗುತ್ತದೆ ಎಂದು ಡಾ. ಪರಮೇಶ್ವರ್ ಎಚ್ಚರಿಸಿದರು.
ಮಾಧ್ಯಮವು ಸೇವೆಯೇ ಆಗಿದ್ದರೂ, ಕಾರ್ಪೊರೇಟ್ ಕಂಪನಿಗಳ ಒಡೆತನಕ್ಕೆ ಸಿಕ್ಕಿ ವಾಣಿಜ್ಯಕರಣಗೊಂಡಿದೆ, ಬರೀ ಸೇವೆ ಆಗಿ ಉಳಿಯದೆ, ಲಾಭ ಮಾಡುವುದೂ ಉದ್ದೇಶವಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಪ್ರಜಾಪ್ರಗತಿಯಂತಹ ಪತ್ರಿಕೆಗಳು ಪತ್ರಿಕಾ ಧರ್ಮ ಕಾಪಾಡಿಕೊಂಡು ಜನ ಮನ್ನಣೆ ಗಳಿಸುತ್ತಿರುವುದು ಸಮಾಧಾನಕರ ವಿಚಾರ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್ ಜಿ ಸಿದ್ದರಾಮಯ್ಯ ಮಾತನಾಡಿ, ನಾಗಣ್ಣವರ ಅಭಿನಂದನಾ ಸಮಾರಂಭ ಮಾಧ್ಯಮ ಕೂಡಾ ಆತ್ಮಾವಲೋಕನ ಮಾಡಿಕೊಳ್ಳುವ ವೇದಿಕೆ ಕೂಡಾ ಆಗಿದೆ ಎಂದು ಹೇಳಿ, ಪತ್ರಿಕೆಯಲ್ಲಿ ತಾಂತ್ರಿಕ ಬ್ಲಾವಣೆಯೂ ಒಂದು, ಇದರಜೊತೆ ದರ ಸಮರ. ರಾಜ್ಯ ಮಟ್ಟದ ಪತ್ರಿಕೆ ಒಂದು ರೂಪಾಯಿ ಬೆಲೆ ನಿಗದೀ ಮಾಡಿದಾಗ ರಾಜ್ಯ ಮಟ್ಟದ ಪತ್ರಿಕೆಗಳು ತಲ್ಲಣಿಸಿದವು, ಎಷ್ಟೋ ಸ್ಥಳೀಯ ಪತ್ರಿಕೆಗಳು ಕಳೆದೇ ಹೋದವು. ಅಂತಹ ಪರಿಸ್ಥಿತಿಯನ್ನೂ ಎದುರಿಸಿದ್ದು ಪ್ರಗತಿಯ ಬೆರಗು ಎಂದರು
ಪತ್ರಿಕಾ ಧರ್ಮ, ಹೊಣೆಗಾರಿಕೆ ವಿರುದ್ದ ಹೋದರೆ ಜನ ಮನ್ನಣೆ ದೊರೆಯುವುದಿಲ್ಲ, ಜನಾಭಿಪ್ರಾಯ ಬಹಳ ದೊಡ್ಡದು, ಜನಕೋಟಿ ಒಪ್ಪಿಸುವುದು ವೃತ್ತಿ ಬದ್ದತೆ ಇದ್ದರೆ ಮಾತ್ರ ಒಪ್ಪಿಸಬಹುದು ಅದನ್ನು ನಾಗಣ್ಣ ಮಾಡಿದರು ಎಂದು ಹೇಳಿದರು.
ನಾಗಣ್ಣನವರು ಪತ್ರಿಕೋದ್ಯನದ ಪದವಿ ಪಡೆದವರಲ್ಲ, ಅನುಭವ ಗಳಿಸಿಕೊಂಡು ನಿಷ್ಠೆ, ಪ್ರಾಮಾಣಿಕತೆ, ಬದ್ದತೆಯಿಂದ ಗೆಲುವು ಕಂಡವರು ಎಂದು ಪ್ರೊ. ಸಿದ್ದರಾಮಯ್ಯ ಹೇಳಿದರು.
ಯಾವುದೇ ಹಿನ್ನೆಲೆಯಿಲ್ಲದೆ ಬಂದ ಇಬ್ಬರು ತುಮಕೂರಿನ ಸಾಧನೆ ಮಾಡಿದ್ದಾರೆ. ಸಣ್ಣ ಹಳ್ಳಿಯಿಂದ ಬಂದ ಹೆಚ್ ಎಂ ಗಂಗಾಧರಯ್ಯನವರು ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿ ಶಿಕ್ಷಣದ ಬೆಳಕು ಕೊಟ್ಟರು, ಅದೇ ರೀರಿ ಸಾಮಾನ್ಯ ಕುಟುಂಬದಿಂದ ಬಂದ ನಾಗಣ್ಣನವರು ಪತ್ರಿಕೆ ಬೆಳೆಸಿ, ಮನೆಮಾತಾದರು ಇಬ್ಬರೂ ಸಮಾಜಕ್ಕೆ ಸಾರ್ಥಕ ಕೊಡುಗೆ ನೀಡಿದವರು ಎಂದು ಶ್ಲಾಘಿಸಿದರು.
ಆಹ್ವಾನಿತರಾಗಿದ್ದ ಸಂಸದ ಎಸ್.ಪಿ.ಮುದ್ದಹನುಮೆಗೌಡ ಮಾತನಾಡಿ, ನಾಗಣ್ಣನವರು ನನ್ನನ್ನೂ ಸೇರಿದಂತೆ ಸಾರ್ವಜನಿಕ ವ್ಯಕ್ತಿಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ತಮ್ಮ ಪತ್ರಿಕೆಯಲ್ಲಿ ಬರೆದಿದ್ದಾರೆ. ವಿಶೇಷವಾಗಿ ನನಗೆ ಮಾರ್ಗದರ್ಶಿಯಾಗಿ,ಹಿತೈಷಿಯಾಗಿ ನಾನು ಸಾರ್ವಜನಿಕ ವ್ಯಕ್ತಿಯಾಗಿ ಮುಂದುವರೆಯಲು ಬಹಳಷ್ಟು ಉತ್ತೇಜನ, ಪ್ರೋತ್ಸಾಹ ನೀಡಿದ್ದಾರೆ. ವೈಯಕ್ತಿಕ ಕಷ್ಟಗಳನ್ನು ಮೆಟ್ಟಿ ನಿಂತು, ಮುಲಾಜಿಗೆ ಒಳಗಾಗದೆ ಪ್ರಜಾಪ್ರಗತಿಯನ್ನು ಜನ ಮೆಚ್ಚಿದ ಪತ್ರಿಕೆಯಾಗಿ ರೂಪಿಸಿದ್ದಾರೆ ಎಂದು ತಿಳಿಸಿದರು. ಭೂಮಿ ಬಳಗದ ಜಿ.ಎಸ್.ಸೋಮಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೂಜ್ಯ ಮೋಹನ್ ಪ್ರಾರ್ಥಿಸಿ, ಕೋಟೆ ಕುಮಾರ್ ಸ್ವಾಗತಿಸಿ, ಎಂ.ಬಿ.ನಾಗಣ್ಣ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ