ತುಮಕೂರು:
ತುಮಕೂರು ಮಹಾನಗರ ಪಾಲಿಕೆಗೆ ಇದೇ ಆಗಸ್ಟ್ 31 ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್-ಬಿಜೆಪಿ ಮತ್ತು ಜೆಡಿಎಸ್ ಈ ಮೂರೂ ಪಕ್ಷಗಳಿಗೂ ಬಂಡಾಯದ ಬಿಸಿ ತಟ್ಟಲಿದೆಯೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೂ ನಾಮಪತ್ರ ವಾಪಸ್ ಪಡೆಯಲು ಆಗಸ್ಟ್ 23 ಕೊನೆಯ ದಿನ ಆಗಿದ್ದು, ಆ ಬಳಿಕ ಕಣದಲ್ಲಿ ಉಳಿದುಕೊಂಡು ಬಂಡಾಯದ ಬಾವುಟ ಹಾರಿಸುವವರು ಯಾರು ಎಂಬ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.
ಈ ಬಾರಿ ಟಿಕೆಟ್ ಖಚಿತ ಎಂದು ಭಾವಿಸಿದ್ದ ಹಲವು ವ್ಯಕ್ತಿಗಳಿಗೆ ಪಕ್ಷದ ವರಿಷ್ಟರು ‘ಶಾಕ್ ಟ್ರೀಟ್‍ಮೇಂಟ್’ ಕೊಟ್ಟಿದ್ದಾರೆ. ಅನೇಕರು ಟಿಕೆಟ್ ವಂಚಿತರಾಗಿದ್ದಾರೆ. ಹಾಲಿ ಪಾಲಿಕೆಯ ಅನೇಕ ಸದಸ್ಯರಿಗೇ ಈ ಬಾರಿ ಟಿಕೆಟ್ ಲಭಿಸಿಲ್ಲ. ಮೀಸಲಾತಿ ಹೊರತುಪಡಿಸಿ, ಸ್ಪರ್ಧಿಸಲು ಅವಕಾಶವಿದ್ದ ಹಳಬರಿಗೇ ಈ ಬಾರಿ ಟಿಕೆಟ್ ಕೊಟ್ಟಿಲ್ಲ. ಇನ್ನು ಕೊನೆ ಗಳಿಗೆಯಲ್ಲಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಿಗಿದು ಹಠಾತ್ತನೆ ಟಿಕೆಟ್ ಗಿಟ್ಟಿಸಿಕೊಂಡವರೂ ಇದ್ದಾರೆ. ಇಂಥ ವಾರ್ಡ್‍ಗಳಲ್ಲಿ ಸ್ಥಳೀಯ ಕಾರ್ಯಕರ್ತರ ಅಸಮಾಧಾನ ವ್ಯಕ್ತವಾಗುತ್ತಿದೆ. ಅನೇಕ ವ್ಯಕ್ತಿಗಳು ಆಕ್ರೋಶದಿಂದ ಸ್ವತಂತ್ರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದೆಲ್ಲ ಈವರೆಗಿನ ರಾಜಕೀಯ ಸಹಜ ಬೆಳವಣಿಗೆಗಳು.
ಇಂದೇನು ಎಂಬುದೇ ಕುತೂಹಲಕರ..!?
ಆದರೆ ಆಗಸ್ಟ್ 23 ನಾಮಪತ್ರ ವಾಪಸ್ ಪಡೆಯಲು ಕೊನೆಯದಿನ. ಮಧ್ಯಾನ 3 ಗಂಟೆಯವರೆಗೂ ಕಾಲಾವಕಾಶ ಇರುತ್ತದೆ. ಈ ಹೊತ್ತಿನವರೆಗೆ ತೆರೆಮರೆಯಲ್ಲಿ ನಡೆಯುವ ರಾಜಕೀಯ ಒತ್ತಡಗಳು, ರಾಜಕೀಯ ತಂತ್ರಗಾರಿಕೆಗಳು, ಆಮಿಷಗಳು ಹೇಗೆ ಕೆಲಸ ಮಾಡುತ್ತವೆ? ಯಾರೆಲ್ಲ ಇದಕ್ಕೆ ಶಿರಬಾಗುತ್ತಾರೆ? ಯಾರೆಲ್ಲ ಇದಕ್ಕೆ ಬಗ್ಗದೆ ಸೆಡ್ಡು ಹೊಡೆಯುತ್ತಾರೆ? ಎಂಬುದು ಪಾಲಿಕೆಯಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ನಾಮಪತ್ರ ಸಲ್ಲಿಕೆಗೂ ಮೊದಲೇ ಯಾರ್ಯಾರಿಂದಲೋ ಟಿಕೆಟ್‍ಗೆ ಶಿಫಾರಸು ನಡೆಯುತ್ತಿದೆ ಎಂಬ ಸುದ್ದಿ ಹುಬ್ಬೇರಿಸುವಂತೆ ಮಾಡಿತ್ತು. ಕೆಲವರ ಹೆಸರುಗಳೂ ಚಾಲ್ತಿಗೆ ಬಂದವು. ಆದರೆ ಅಷ್ಟೇ ವೇಗದಲ್ಲಿ ಅವು ಕಣ್ಮರೆಯೂ ಆದವು. ಓರ್ವ ಪ್ರಭಾವಿ ರಾಜಕಾರಣಿಯು ಟಿಕೆಟ್‍ಗೆ ಶಿಫಾರಸು ಮಾಡಿದ್ದ ಆಕಾಂಕ್ಷಿಗೆ “ನೀನು ಟಿಕೆಟ್‍ಗೆ ಒತ್ತಾಯಿಸಬೇಡ. ಟಿಕೆಟ್ ಬದಲು ನಿನಗೆ ಮುಂದಿನ ದಿನಗಳಲ್ಲಿ 10 ಕೋಟಿ ರೂ. ಮೌಲ್ಯದ ಗುತ್ತಿಗೆಯೊಂದನ್ನು ನಿನಗೆ ಕೊಡಿಸಿಕೊಡುತ್ತೇವೆ. ಈಗ ಸುಮ್ಮನಿದ್ದುಬಿಡು” ಎಂದು ಸ್ಥಳೀಯ ಮುಖಂಡರು ಹೇಳಿದರಂತೆ. ಅಷ್ಟಕ್ಕೇ ಆ ಆಕಾಂಕ್ಷಿ ತಣ್ಣಗಾಗಿಬಿಟ್ಟರೆಂಬ ಸಂಗತಿ ವರ್ಣರಂಜಿತವಾಗಿ ಹರಿದಾಡಿತು.
ನಂತರದಲ್ಲಿ ಪಕ್ಷಗಳಿಂದ ಟಿಕೆಟ್ ಸಿಗದಿದ್ದಾಗ ಯಾವುದೋ ಆವೇಶದಲ್ಲಿ ಸ್ವತಂತ್ರ ಅಭ್ಯರ್ಥಿಯೆಂದು ಅನೇಕ ಜನ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ತಮಗೆ ಅನ್ಯಾಯವಾಗಿದೆಯೆಂದು ತಮ್ಮ ಪಕ್ಷಗಳ ಮುಖಂಡರುಗಳನ್ನು ವಾಚಾಮಗೋಚರವಾಗಿ ಟೀಕಿಸಿದ್ದಾರೆ. “ನಾವು ಬಂಡಾಯವಾಗಿ ಸ್ಪರ್ಧಿಸುವುದು ಖಚಿತ. ಇದರಲ್ಲಿ ಬದಲಾವಣೆ ಇಲ್ಲ, ಇಂಥವರನ್ನು ನಾವು ಸೋಲಿಸಿಯೇ ತೀರುತ್ತೇವೆ” ಎಂದು ಎಲ್ಲರೆದುರು ಎಲ್ಲ ಪಕ್ಷಗಳವರು ಹೇಳಿಕೊಂಡಿದ್ದಾರೆ. ಆದರೆ ಇವರ ಆಕ್ರೋಶ, ಆವೇಶ ಶಾಶ್ವತವಾದುದೇ? ತಾತ್ಕಾಲಿಕವಾದುದೇ? ಎಂಬುದು ನಾಮಪತ್ರ ವಾಪಸ್ ಬಳಿಕ ಸ್ಪಷ್ಟವಾಗಲಿದೆ.
ಏಕೆಂದರೆ ನಾಮಪತ್ರ ವಾಪಸ್ಸಿಗೆ ಬಗೆ ಬಗೆಯ ಆಮಿಷಗಳು ಹರಿದುಬರಲಿವೆ. ಅದು ಹಣದ ರೂಪದಲ್ಲಿರಬಹುದು ಅಥವಾ ಬೇರಾವುದೋ ಸ್ಥಾನಮಾನದ ರೂಪದಲ್ಲಿರಬಹುದು. ಜಾತಿ-ಧರ್ಮಗಳ ಮುಖಂಡರುಗಳ ಮೂಲಕ ಹಿತವಚನವೂ ಇರಬಹುದು. ಕೊನೆಗೆ ಬೆದರಿಕೆಯೂ ಆಗಬಹುದು. ಆದರೆ ಇವಾವುದಕ್ಕೂ ಬಗ್ಗದೆ, ಸ್ಪರ್ಧಿಸುವವರು ಯಾರೆಂಬುದು ಅಂತಿಮವಾಗಿ ಗೊತ್ತಾಗಲಿದೆ.
ಕಾರಣ ಇದಕ್ಕೂ ಮುನ್ನ ಟಿಕೆಟ್ ಆಕಾಂಕ್ಷಿಗಳಿಗೂ ಇದೇ ರೀತಿಯ “ಹಿತವಚನ”ವನ್ನು ಮುಖಂಡರುಗಳು ಕೊಟ್ಟಿದ್ದ ನಿದರ್ಶನಗಳಿವೆ. “ಅವರಿಗೆ ಏಕೆ ಚುನಾವಣೆ? ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳಲಿ ಸಾಕು” ಎಂದವರೂ ಇದ್ದಾರೆ. “ಅವರಿಗೆ ಹೇಳಿ. ಅವರ ಬಳಿ ಈಗ ಜೀವನೋಪಾಯಕ್ಕೆ ಅಷ್ಟಿಷ್ಟು ಹಣ ಇದೆ. ಚುನಾವಣೆಗೆ ನಿಂತು ಅದನ್ನೇಕೆ ಕಳೆದುಕೊಳ್ಳಬೇಕು?” ಎಂದು ಉಪದೇಶವನ್ನೂ ಮುಖಂಡರು ಮಾಡಿದ್ದಾರೆ. ಈಗಲೂ ಬಂಡಾಯಗಾರರಿಗೆ ಇಂತಹುದೇ ಪ್ರತಿಕ್ರಿಯೆ ಮುಖಂಡರುಗಳಿಂದ ಹಾಗೂ ಈಗಾಗಲೇ ಟಿಕೆಟ್ ಪಡೆದಿರುವವರಿಂದ ಬರಬಹುದು. ಒಳಒಪ್ಪಂದಗಳೂ ಆಗಬಹುದು. ಅಂತಿಮವಾಗಿ ಬದಲಾವಣೆಗಳೂ ಆಗಬಹುದು ಎಂದು ಹೇಳಲಾಗುತ್ತಿದೆ.
ಕೆಲವರು ನಾಮಪತ್ರ ವಾಪಸ್ ಪಡೆಯಬಹುದು. ಆದರೆ ಮತ್ತೆ ಕೆಲವರು ಸ್ಪರ್ಧಾಕಣದಲ್ಲಿ ಉಳಿಯಬಹುದು. ಆದರೆ ಅವರಲ್ಲಿ ಎಷ್ಟು ಜನರು ಸೀರಿಯಸ್ ಆಗಿ ಸ್ಪರ್ಧಿಸುತ್ತಾರೆ ಎಂಬುದೂ ಚರ್ಚೆಗೊಳ್ಳುತ್ತಿದೆ. ಆಯಾ ವಾರ್ಡಿನ ಪ್ರಬಲ ಅಭ್ಯರ್ಥಿ ಇಂಥವರಿಗೆ ಒಂದಿಷ್ಟು “ಪ್ರಸಾದ” ಕೊಟ್ಟರೆ ಅವರು ನೆಪಕ್ಕಷ್ಟೇ ಕಣದಲ್ಲಿರುವಂತಾಗುತ್ತದೆ ಎನ್ನಲಾಗುತ್ತಿದೆ.
ಮತ್ತೆ ಕೆಲವರ ಪ್ರಕಾರ, ಕೆಲವು ವಾರ್ಡ್‍ಗಳಲ್ಲಿ ಪ್ರಬಲ ಅಭ್ಯರ್ಥಿಗಳೇ ನಿರ್ದಿಷ್ಟ ಜಾತಿಗಳವರನ್ನು ಸ್ವತಂತ್ರ ಅಭ್ಯರ್ಥಿಗಳನ್ನಾಗಿ ನಿಲ್ಲಿಸಿ, ಅವರಿಗೆ ಪ್ರೋತ್ಸಾಹಿಸುತ್ತಾರಂತೆ. ಇದರಿಂದ ಮತಗಳು ವಿಭಜನೆ ಹೊಂದಿ ಇವರಿಗೆ ಗೆಲುವು ಸುಲಭವಾಗುತ್ತದೆಂಬ ಲೆಕ್ಕಾಚಾರ ಇರುತ್ತದಂತೆ.
ಇವೆಲ್ಲ ಕಾರಣಗಳ ಹಿನ್ನೆಲೆಯಲ್ಲಿ ನಾಮಪತ್ರ ವಾಪಸ್ ಬಳಿಕ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಈ ಮೂರು ಪ್ರಮುಖ ಪಕ್ಷಗಳಲ್ಲದೆ, ಕಣದಲ್ಲಿ ಉಳಿಯುವ ಸ್ವತಂತ್ರ ಅಭ್ಯರ್ಥಿಗಳ ವಿವರ ಸ್ಪಷ್ಟವಾಗಲಿದೆ.
ಹಾರಿಹೋದ ಟೋಪಿ! ಅಭ್ಯರ್ಥಿಗೆ ಮುಜುಗರ!
ತುಮಕೂರು ನಗರದ ಎಸ್.ಐ.ಟಿ. ಬಳಿ ಬಿ.ಎಚ್.ರಸ್ತೆ ಪಕ್ಕ ಚುನಾವಣಾ ಪ್ರಚಾರ ನಡೆದಿತ್ತು. ಪ್ರಬಲ ಅಭ್ಯರ್ಥಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ಬರುತ್ತಿದ್ದಾಗ ಅವರು ಧರಿಸಿದ್ದ ಪಕ್ಷದ ಟೋಪಿ ಗಾಳಿಯ ರಭಸಕ್ಕೆ ಅವರ ತಲೆಯಿಂದ ಹಾರಿಹೋಯಿತು! ಇದರಿಂದ ಆ ಅಭ್ಯರ್ಥಿಗೆ ತೀವ್ರ ಮುಜುಗರ ಆದರೆ, ಅದನ್ನು ನೋಡಿದವರ ಮುಖದಲ್ಲಿ ನಗೆ ಉಕ್ಕಿತು. ಆದರೆ ಅಲ್ಲೇ ಪಕ್ಕ ಟೀ ಕುಡಿಯುತ್ತ ನಿಂತಿದ್ದವರು ಇದನ್ನು ನೋಡಿ “ಅಪಶಕುನ… ಅಪಶಕುನ” ಎಂದು ಬಿಡಬೇಕೇ?!
ನನ್ನ ವಿರುದ್ಧ ಇವರಿಂದಲೇ ಅಪಪ್ರಚಾರ:
“ಸರ್ ನೋಡಿ, ಈವರೆಗೆ ಇವರು ಪಾಲಿಕೆಯ ನಮ್ಮ ಪಕ್ಷದ ಸದಸ್ಯರೇ ಆಗಿದ್ದವರು. ಇಂಥವರೇ ಈಗ ನನ್ನ ವಿರುದ್ಧ ನಮ್ಮ ವಾರ್ಡ್‍ನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಏನು ಮಾಡುವುದು?” ಎಂದು ಜೆಡಿಎಸ್ ಅಭ್ಯರ್ಥಿಯೊಬ್ಬರು ನೋವಿನಿಂದ ಹೇಳಿಕೊಂಡಿರುವುದು ಈಗ ಬಹುಚರ್ಚೆಗೆ ಎಡೆಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ