ತುಮಕೂರು:
‘‘ತುಮಕೂರು ಮಹಾನಗರ ಪಾಲಿಕೆಗೆ ಈಗ ನಡೆಯಲಿರುವ ಮೊದಲನೇ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಕ್ರಿಮಿನಲ್ ಹಿನ್ನೆಲೆ ಉಳ್ಳವರಿಗೆ ಮಣೆ ಹಾಕುವುದೇ? ಕ್ರಿಮಿನಲ್ ಹಿನ್ನೆಲೆ ಉಳ್ಳವರಿಗೆ, ರೌಡಿಶೀಟರ್ಗಳಿಗೆ ಟಿಕೆಟ್ ಕೊಡುವುದೇ?’’ ಎಂಬ ಆತಂಕ ತುಮಕೂರು ನಗರದ ಪ್ರಜ್ಞಾವಂತ ನಾಗರಿಕ ವಲಯದಲ್ಲಿ ಕಾಡಲಾರಂಭಿಸಿದೆ.
ಮಹಾನಗರ ಪಾಲಿಕೆಗೆ ಇದೇ ಆಗಸ್ಟ್ 31 ರಂದು ಚುನಾವಣೆ ಜರುಗಲಿದೆ. ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈಗಾಗಲೇ ಕಸರತ್ತು ನಡೆಸುತ್ತಿವೆ. ಅಂತೆಯೇ ಟಿಕೆಟ್ಗಾಗಿ ಸ್ಪರ್ಧಾಕಾಂಕ್ಷಿಗಳೂ ‘‘ಸರ್ವ ಪ್ರಯತ್ನ’’ ನಡೆಸ ತೊಡಗಿದ್ದಾರೆ. ಪಾಲಿಕೆಯ ಹಾಲಿ ಸದಸ್ಯರು, ಹಿಂದಿನ ನಗರಸಭೆಯ ಮಾಜಿ ಸದಸ್ಯರುಗಳು, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರಷ್ಟೇ ಅಲ್ಲದೆ ಅಸಂಖ್ಯಾತ ಹೊಸಬರು ಮೈಕೊಡವಿಕೊಂಡು ಟಿಕೆಟ್ಗಾಗಿ ವಿವಿಧ ಪಕ್ಷಗಳ ಮುಖಂಡರುಗಳ ಹಿಂದೆ-ಮುಂದೆ ಲಾಗ ಹಾಕುತ್ತಿದ್ದಾರೆ. ಮಹಾನಗರ ಪಾಲಿಕೆ ಕಚೇರಿ, ರಾಜಕೀಯ ಪಕ್ಷಗಳ ಕಚೇರಿ, ಮುಖಂಡರುಗಳ ಮನೆಗಳಲ್ಲಿ ಒಂದೇ ಸಮನೆ ಕಾಣಿಸಲಾರಂಭಿಸಿದ್ದಾರೆ. ಆಯಾ ಬಡಾವಣೆಗಳ ಹೋಟೆಲ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಬೆಂಬಲಿಗರೊಡನೆ ಗುಂಪು ಗುಂಪುಗಳಲ್ಲಿ ಸೇರುತ್ತಿರುವುದು ಸಾರ್ವಜನಿಕರ ಕಣ್ಣಿಗೆ ರಾಚುತ್ತಿದೆ.
ಇದಲ್ಲದೆ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್ ಆಪ್ಗಳಲ್ಲಿ ತಮ್ಮ ಫೋಟೋ ಸಹಿತ ಪ್ರಕಟಣೆಗಳನ್ನು ಹರಿಬಿಡುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷ ಈವರೆಗೆ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸದಿದ್ದರೂ, ‘‘ಇಂತಹ ವಾರ್ಡ್ನಿಂದ ಇಂತಹ ಪಕ್ಷದಿಂದ ತಾವು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದಾಗಿ’’ ಈ ಸ್ಪರ್ಧಾಕಾಂಕ್ಷಿಗಳು ಸ್ವಯಂಘೋಷಣೆ ಮಾಡಿಕೊಳ್ಳುತ್ತಿದ್ದಾರೆ.
ತಮ್ಮ ಜಾತಿಯ ಮುಖಂಡರುಗಳನ್ನು, ತಮಗೆ ಬೇಕಾದ ಸಂಘ ಸಂಸ್ಥೆಗಳ ಪ್ರಮುಖರನ್ನು ಸ್ಪರ್ಧಾಕಾಂಕ್ಷಿಗಳು ರಾಜಕೀಯ ಪಕ್ಷಗಳ ಮುಖಂಡರ ಬಳಿಗೆ ಕರೆದೊಯ್ದು ಟಿಕೆಟ್ಗಾಗಿ ಅವರ ಮೂಲಕ ಒತ್ತಡ ಹೇರಿಸುತ್ತಿದ್ದಾರೆ.
ಆತಂಕಕಾರಿ ವಿಷಯ…
ಟಿಕೆಟ್ ಪಡೆಯಲು ಸ್ಪರ್ಧಾಕಾಂಕ್ಷಿಗಳು ನಡೆಸುತ್ತಿರುವ ಇವೆಲ್ಲ ಬೆಳವಣಿಗೆಗಳ ನಡುವೆ ಅನೇಕ ವಾರ್ಡ್ಗಳಲ್ಲಿ ಕ್ರಿಮಿನಲ್ ಹಿನ್ನೆಲೆ ಉಳ್ಳವರು, ರೌಡಿಶೀಟರ್ಗಳು ಸಹ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತ ‘‘ಸೇವೆ’’ ಮಾಡಲು ಮುಂದೆ ಬರುತ್ತಿದ್ದಾರೆಂಬುದು ಸಹಜವಾಗಿಯೇ ಪ್ರಜ್ಞಾವಂತರಲ್ಲಿ ಆತಂಕ ಮೂಡಿಸತೊಡಗಿದ್ದು, ನಾಲ್ಕಾರು ಪ್ರಜ್ಞಾವಂತರು ಸೇರಿದ ಕಡೆ ಇದು ಚರ್ಚೆಗೊಳ್ಳುತ್ತಿದೆ.
‘‘ನೋಡಿ ಸರ್, …. ಅವನು ಸಾರ್ವಜನಿಕ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ್ದವನು. ರೌಡಿಯಂತೆ ವರ್ತಿಸುತ್ತಾನೆ. ಅವನು ಈ ಚುನಾವಣೆಯಲ್ಲಿ … ವಾರ್ಡ್ ನಿಂದ …. ಪಕ್ಷದಿಂದ ಟಿಕೆಟ್ ಕೇಳುತ್ತಿದ್ದಾನೆ. ಇಂಥವನಿಗೆ ಶಿಫಾರಸು ಮಾಡುವಂಥವರೂ ಇರುವುದೇ ಆಶ್ಚರ್ಯ. ಶಿಫಾರಸು ಮಾಡುವವರು ರಾಜಕೀಯ ಮುಖಂಡರೊಬ್ಬರ ಬಳಿ ಹೋಗಿ ಶಿಾರಸು ಮಾಡಿದ್ದಷ್ಟೇ ಅಲ್ಲದೆ, ಟಿಕೆಟ್ಗೆ ಭರವಸೆ ಸಿಗದಿದ್ದ ಕಾರಣ ಆ ರಾಜಕೀಯ ಮುಖಂಡರಿಗೇ ಬೈದು ಬಂದರಂತೆ.. ಚುನಾವಣೆಗೆ ನಿಲ್ಲುವ ಮೊದಲೇ ಹೀಗಿದೆ. ಇನ್ನು ನಾಳೆ ಇಂಥವರು ಗೆದ್ದು ಬಂದರೆ ಜನಸಾಮಾನ್ಯರ ಗತಿ ಏನು?’’ ಎಂದು ಹೋಟೆಲ್ ಒಂದರಲ್ಲಿ ಚರ್ಚೆ ನಡೆದಿದ್ದುದು ಸಾರ್ವಜನಿಕರ ಆತಂಕಕ್ಕೆ ಒಂದು ಉದಾಹರಣೆಯಾಗಿದೆ.
‘‘ಅವನೊಬ್ಬ ರೌಡಿ.. ಕ್ರಿಮಿನಲ್ ಹಿನ್ನೆಲೆ ಉಳ್ಳವನು. ಅವನು ಸ್ಪರ್ಧಿಸುವ ವಾರ್ಡ್ನಲ್ಲಿ ಸದಸ್ಯರು ಸ್ಪರ್ಧಿಸಿ ಮತಯಾಚನೆ ಮಾಡುವುದೇ ಕಷ್ಟ. ಅಂತಹ ಭೀತಿ ಇರುತ್ತದೆ. ಇಂಥ ಕ್ರಿಮಿನಲ್ಗಳು ಆಯಾ ವಾರ್ಡ್ನ ತೀರಾ ಬಡವರಿಗೆ ಹಣ ಹಂಚಿ, ಗಿಫ್ಟ್ ಕೊಟ್ಟು ಹೆದರಿಸಿ ಓಟು ಹಾಕಿಸಿಕೊಳ್ಳುತ್ತಾರೆ. ಇಂಥವರನ್ನು ಎದುರಿಸುವುದು ಹೇಗೆ? ಇಂಥವರಿಗೂ ರಾಜಕೀಯ ಪಕ್ಷಗಳು ಟಿಕೆಟ್ ಕೊಡುತ್ತವೆಂದರೆ ಏನರ್ಥ?’’ ಎಂದು ಪ್ರಜ್ಞಾವಂತರೊಬ್ಬರು ಹೇಳಿಕೊಂಡಿದ್ದು ಆತಂಕಕ್ಕೆ ಮತ್ತೊಂದು ನಿದರ್ಶನದಂತಿದೆ.
ಗೆದ್ದು ಹತ್ಯೆಯಾದ ರೌಡಿ
‘‘ಈ ಹಿಂದಿನ ತುಮಕೂರು ನಗರಸಭೆಗೆ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ವ್ಯಕ್ತಿ ಜೈಲಿನಲ್ಲಿದ್ದುಕೊಂಡೇ ಗೆದ್ದುಬಂದಿದ್ದ ಹಾಗೂ ನಗರಸಭೆಯ ಸದಸ್ಯನಾಗಿದ್ದಾಗಲೇ ಹತ್ಯೆಗೊಳಗಾದ ಉದಾಹರಣೆ ಇದೆ. ಅದೇ ರೀತಿ ರೌಡಿಶೀಟರ್ನಲ್ಲಿ ಹೆಸರಿದ್ದು ಅಪಖ್ಯಾತಿ ಹೊಂದಿದವರೂ ನಗರಸಭೆಗೆ ಹಾಗೂ ಪಾಲಿಕೆಗೆ ಗೆದ್ದುಬಂದಿದ್ದಾರೆ’’ ಎಂದು ಅನೇಕ ಪ್ರಜ್ಞಾವಂತರು ಹಳೆಯದನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಟಿಕೆಟ್ ಕೊಡಬಾರದು, ಕೊಟ್ಟರೂ ಗೆಲ್ಲಿಸಬಾರದು.
‘‘ಇದು ನಮ್ಮ ತುಮಕೂರು ನಗರಕ್ಕೇ ಕಪ್ಪು ಚುಕ್ಕೆ ಇದ್ದಂತೆ. ಈ ಚುನಾವಣೆಯಲ್ಲಿ ಇಂತಹ ದುರ್ಗತಿ ಮರುಕಳಿಸಬಾರದು. ರಾಜಕೀಯ ಪಕ್ಷಗಳು ಯಾವುದೇ ಕಾರಣಕ್ಕೂ ರೌಡಿಗಳಿಗೆ, ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ ಈ ಬಾರಿ ಟಿಕೆಟ್ ಕೊಡಲೇಬಾರದು. ಒಂದು ವೇಳೆ ರಾಜಕೀಯ ಪಕ್ಷಗಳು ಇಂಥವರಿಗೆ ಶರಣಾಗಿ ಟಿಕೆಟ್ ಕೊಟ್ಟರೂ, ಇಂಥವರನ್ನು ಮತದಾರರು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ರೌಡಿಗಳಿಗೆ ಮತ್ತು ಅವರಿಗೆ ಟಿಕೆಟ್ ಕೊಟ್ಟ ಪಕ್ಷಗಳಿಗೆ ಸರಿಯಾದ ಪಾಠ ಕಲಿಸಬೇಕು’’ ಎಂದು ಪ್ರಜ್ಞಾವಂತ ನಾಗರಿಕರು ಖಡಕ್ ಆಗಿ ಹೇಳುತ್ತಿದ್ದಾರೆ.
‘‘ಈ ಹಿಂದಿನ ತುಮಕೂರು ನಗರಸಭೆಗೆ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ವ್ಯಕ್ತಿ ಜೈಲಿನಲ್ಲಿದ್ದುಕೊಂಡೇ ಗೆದ್ದುಬಂದಿದ್ದ ಹಾಗೂ ನಗರಸಭೆಯ ಸದಸ್ಯನಾಗಿದ್ದಾಗಲೇ ಹತ್ಯೆಗೊಳಗಾದ ಉದಾಹರಣೆ ಇದೆ. ಅದೇ ರೀತಿ ರೌಡಿಶೀಟರ್ನಲ್ಲಿ ಹೆಸರಿದ್ದು ಅಪಖ್ಯಾತಿ ಹೊಂದಿದವರೂ ನಗರಸಭೆಗೆ ಹಾಗೂ ಪಾಲಿಕೆಗೆ ಗೆದ್ದು ಬಂದಿದ್ದಾರೆ’’
‘‘ಇದು ನಮ್ಮ ತುಮಕೂರು ನಗರಕ್ಕೇ ಕಪ್ಪು ಚುಕ್ಕೆ ಇದ್ದಂತೆ. ಈ ಚುನಾವಣೆಯಲ್ಲಿ ಇಂತಹ ದುರ್ಗತಿ ಮರುಕಳಿಸಬಾರದು. ರಾಜಕೀಯ ಪಕ್ಷಗಳು ಯಾವುದೇ ಕಾರಣಕ್ಕೂ ರೌಡಿಗಳಿಗೆ, ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ ಈ ಬಾರಿ ಟಿಕೆಟ್ ಕೊಡಲೇಬಾರದು. ಒಂದು ವೇಳೆ ರಾಜಕೀಯ ಪಕ್ಷಗಳು ಇಂಥವರಿಗೆ ಶರಣಾಗಿ ಟಿಕೆಟ್ ಕೊಟ್ಟರೂ, ಇಂಥವರನ್ನು ಮತದಾರರು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ರೌಡಿಗಳಿಗೆ ಮತ್ತು ಅವರಿಗೆ ಟಿಕೆಟ್ ಕೊಟ್ಟ ಪಕ್ಷಗಳಿಗೆ ಸರಿಯಾದ ಪಾಠ ಕಲಿಸಬೇಕು’’