ದಾವಣಗೆರೆ:
ಇಲ್ಲಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಗಾಗ ಆಡಳಿತರೂಢ ಕಾಂಗ್ರೆಸ್ ಪಕ್ಷದ ಸದಸ್ಯ ದಿನೇಶ್ ಕೆ. ಶೆಟ್ಟಿ ಹಾಗೂ ಬಿಜೆಪಿಯ ಏಕೈಕ ಸದಸ್ಯ ಡಿ.ಕೆ.ಕುಮಾರ್ ಅವರ ಮಧ್ಯೆ ವಾಗ್ವಾದ ಏರ್ಪಟ್ಟು, ಒಂದು ಹಂತದಲ್ಲಿ ಪರಸ್ಪರ ದೂಡಾಡಿಕೊಂಡು ಕೈ-ಕೈ ಮೀಲಾಯಿಸುವ ಹಂತವು ತಲುಪಿತು.
ಸಭೆಯಲ್ಲಿ ತೆರಿಗೆ ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಸಭೆಯ ನಡಾವಳಿ ಓದಿ ಸ್ಥಿರಿಕರಿಸುವ ವಿಷಯದ ಮೇಲೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಡಿ.ಕೆ.ಕುಮಾರ್, ತೆರಿಗೆ ಹಣ ಅಂತೀರಿ, ಪಾಲಿಕೆಯ ಎಷ್ಟು ಮಳಿಗೆಗಳಿವೆ. ಅವುಗಳಲ್ಲಿ ಎಷ್ಟು ಖಾಲಿ ಇವೆ. ಮಳಿಗೆಯ ಬಾಡಿಗೆದಾರರು ಸುಮಾರು 15 ಲಕ್ಷ ದುಡ್ಡು ಕೊಡಬೇಕಿತ್ತು. ಅವರು ಪ್ರಭಾವಿಗಳಿಂದ ಹೇಳಿಸಿದಾಕ್ಷಣ 80 ಸಾವಿರ ಕಟ್ಟಿಸಿಕೊಂಡು ಮಳಿಗೆ ತೆರೆಯಲು ಅನುಮತಿ ನೀಡಿದ್ದೀರಿ, ಇನ್ನೂ ಎಷ್ಟು ಜನ ಬಾಡಿಗೆದಾರರು ಬಾಡಿಗೆ ಕಟ್ಟಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಸಭೆ ನಡೆಸಿ ಎಂದು ಪಟ್ಟು ಹಿಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದಿನೇಶ್ ಕೆ. ಶೆಟ್ಟಿ, ಸಭೆಯಲ್ಲಿ ಅನಗತ್ಯವಾಗಿ ವಿಷಯಾಂತರ ಮಾಡಬೇಡಿ, ಚರ್ಚೆಯಾಗುತ್ತಿರುವ ವಿಷಯದ ಬಗ್ಗೆ ಮಾತ್ರ ಮಾತನಾಡಿ, ಇವರಿಗೆ ಐದು ವರ್ಷದಿಂದ ಹೇಳಿ, ಹೇಳಿ ಸಾಕಾಗಿದೆ ಕುಮಾರ್‍ಗೆ ಟ್ರೈನಿಂಗ್ ಆದ್ರೂ ಕೊಡಿಸಿ ಎಂದು ಕಿಚಾಯಿಸಿದರು. ಆಗ ಅಸಮಾಧಾನಗೊಂಡ ಕುಮಾರ್, ತೆರಿಗೆ ಹಣ ಎಂದರೆ ಏನು? ಇದ್ಯಾರಪ್ಪನ ದುಡ್ಡು ಎಂದು ಟೇಬಲ್ ಕುಟ್ಟಿ ಅಸಮಾಧಾನ ವ್ಯಕ್ತಪಡಿಸಲು ಮುಂದಾದರು. ಆಗ ಕಾಂಗ್ರೆಸ್‍ನ ದಿನೇಶ್ ಕೆ. ಶೆಟ್ಟಿ, ಎಂ.ಹಾಲೇಶ್, ಅಬ್ದುಲ್ ಲತೀಫ್ ಹಾಗೂ ಇತರೆ ಸದಸ್ಯರು ಸಭೆಗೆ ಗೌರವಕೊಟ್ಟು ಮಾತನಾಡಿ, ದಾದಾಗಿರಿ ಮಾಡುತ್ತೀರಾ ಎಂದು ಕುಮಾರ್ ವಿರುದ್ಧ ಮುಗಿಬಿದ್ದರು. ಆಗ ಕುಮಾರ್ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ತೀವ್ರವಾಗ್ವಾದ ನಡೆಯಿತು. ಆಗ ಸಿಪಿಐ ಸದಸ್ಯ ಹೆಚ್.ಜಿ.ಉಮೇಶ್‍ರವರು ಡಿ.ಕೆ.ಕುಮಾರ್‍ನನ್ನು ಸಮಾಧಾನ ಪಡಿಸಿದರು.
ಮಳಿಗೆ ವಿಚಾರದ ಬಗ್ಗೆ ಪ್ರತಿಕ್ರಯಿಸಿದ ಆಯುಕ್ತ ಮಂಜುನಾಥ್ ಬಳ್ಳಾರಿ, ಪಾಲಿಕೆಯ 994 ಮಳಿಗೆಗಳಿದ್ದು, 908 ಮಳಿಗೆಗಳನ್ನು ಬಾಡಿಗೆ ನೀಡಲಾಗಿದೆ. ಇನ್ನುಳಿದ 86 ಮಳಿಗೆಗಳಿಗೆ ಕರೆಂಟ್ ಮತ್ತು ನೀರಿನ ಸಮಸ್ಯೆ ಇರುವುದರಿಂದ ಬಾಡಿಗೆ ನೀಡಲಾಗಿಲ್ಲ ಎಂದರು. ಇದರಿಂದ ಕೂಪಿತರಾದ ಕುಮಾರ್, ಕರೆಂಟ್ ಹಾಕಿಸಿ, ನೀರು ಕೊಡಿಸಲು ನಿಮಗೆ 5 ವರ್ಷ ಬೇಕಾ? ಸೂಪರ್ ಮಾರ್ಕೇಟ್ ಕಟ್ಟಲು ಎಷ್ಟು ಹಣ ಹಾಕಿದೀರಿ? ಎಷ್ಟು ಬಾಡಿಗೆ ಬರುತ್ತಿದೆ.
ಅಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಏಕೆ ಆಗುತ್ತಿ ಎಂದು ಪ್ರಶ್ನಿಸಿದರು.ಆಗ ಮಧ್ಯ ಪ್ರವೇಶಿಸಿದ ಸದಸ್ಯ ದಿನೇಶ್ ಕೆ. ಶೆಟ್ಟಿ, ಅವುಗಳನ್ನು ಬಿಜೆಪಿ ಆಡಳಿತ ಇದ್ದಾಗ ಕಟ್ಟಿಸಿದ್ದು, ಅವಕ್ಕೆ ಸೌಲಭ್ಯವೇ ಕಲ್ಪಿಸಿಲ್ಲ ಎಂದು ಕಾಲೆಳೆದರು. ಆಗ ಕುಮಾರ್, ನೀವು ಈಗ 39 ಜನ ಸದಸ್ಯರಿದ್ದೀರಿ ನೀವೇಕೆ ಮಾಡಬಾರದು ಎಂದು ಏರು ದನಿಯಲ್ಲಿ ಮಾತನಾಡಿದರು. ಇದರಿಂದ ಆಕ್ರೋಶಭರಿತರಾದ ಪಾಲಿಕೆ ಸದಸ್ಯರು ನಿಮ್ಮ ವಾರ್ಡಿನ ಸಮಸ್ಯೆ ನೀವು ನೋಡಿಕೊಳ್ಳಿ, ನಮ್ಮ ಬಗ್ಗೆ ಏನು ಮಾತನಾಡುತ್ತೀರೆಂದು ತರಾಟೆಗೆ ತಗೆದುಕೊಂಡರು.
ಶಾಮನೂರು ಗಾಜಿನ ಮನೆ ಸುತ್ತ: ಶಾಮನೂರು ಗಾಜಿನ ಮನೆಗೆ ಯಾವ ಹೆಸರು ಇಡಬೇಕೆಂಬುದರ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಪಾಲಿಕೆಯ ಸಿಪಿಐ ಸದಸ್ಯ ಹೆಚ್.ಜಿ.ಉಮೇಶ್ ಮಾತನಾಡಿ, ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಹರ್ಡೇಕರ್ ಮಂಜಪ್ಪನವರ ಹೆಸರು ಇಡುವಂತೆ ಸಲಹೆ ನೀಡಿದರು.
ಈ ವೇಳೆ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಗಾಜಿನ ಮನೆ ಇರುವ ಜಾಗದ ಸರ್ವೇ ನಂಬರ್ ಇರುವುದು ಶಾಮನೂರು ಗಾಜಿನ ಮನೆ ಎಂಬುದಾಗಿ ಹೆಸರು ಇಡಬೇಕೆಂದು ಸಲಹೆ ನೀಡಿದರು.
ಈ ವೇಳೆ ಕುಮಾರ್ ಮಾತನಾಡಿ, ದಾವಣಗೆರೆ ಸಾಹುಕಾರ ಯಾರೆಂಬುದು ಎಲ್ಲರಿಗೂ ಗೊತ್ತಿದೆ ಎನ್ನುತ್ತಿದ್ದಂತೆ, ದಿನೇಶ್ ಕೆ. ಶೆಟ್ಟಿ ಮಧ್ಯ ಪ್ರವೇಶಿಸಿ, ಸಿದ್ದೇಶ್ವರ್ ಅವರ ಎಂದು ಕಿಚಾಯಿಸಿದರು. ಆಗ ಕುಮಾರ್ ಮೂರು ತಿಂಗಳಿಗೆ ಹುಟ್ಟಿರುವವರಿಗೆ ಇರಬಹುದು ಎಂಬುದಾಗಿ ಹೇಳುತ್ತಿದ್ದಂತೆ, ಆಕ್ರೋಶಗೊಂಡ ದಿನೇಶ್ ಕೆ. ಶೆಟ್ಟಿ, ತಾವು ಕುಳಿತಿದ್ದ ಆಸನ ಬಿಟ್ಟು ಕುಮಾರ್‍ಕಡೆ ಧಾವಿಸಿದರು. ಕುಮಾರ್ ಸಹ ಚೇರ್ ಬಿಟ್ಟು ಮುಂದೆ ಹೋದರು. ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡದು, ಪರಸ್ಪರ ಕೈ, ಕೈ ಮೀಲಾಯಿಸುವ ಹಂತ ತಲುಪಿತು.
ಆಗ ಕಾಂಗ್ರೆಸ್ ಸದಸ್ಯರು ಇಬ್ಬರನ್ನು ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಹೀಗೆ ಸಭೆಯ ಉದ್ದಕ್ಕೂ ದಿನೇಶ್ ಕೆ. ಶೆಟ್ಟಿ ಮತ್ತು ಕುಮಾರ್ ಮಧ್ಯ ವಾಗ್ವಾದ ನಡೆಯುತ್ತಿತ್ತು. ಆದರೆ, ಸಭೆಯಲ್ಲಿ ಹಾಜರಿದ್ದ ಶಾಸಕ ಎಸ್.ಎ.ರವೀಂದ್ರನಾಥ್ ಮಾತ್ರ ಮೂಖಪ್ರೇಕ್ಷಕರಂತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ