ಪಿಂಚಣಿಗಾಗಿ ನಿವೃತ್ತ ಅಂಗನವಾಡಿ ನೌಕರರ ಆಗ್ರಹ

 ದಾವಣಗೆರೆ :

      ನಿವೃತ್ತಿಯ ನಂತರ ಪಿಂಚಣಿ ನೀಡಿ ಜೀವನ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ನಿವೃತ್ತ ಅಂಗನವಾಡಿ ನೌಕರರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

      ನಗರದ ಅಶೋಕ ರಸ್ತೆಯಲ್ಲಿರುವ ಕಾಮ್ರೇಡ್ ಪಂಪಾಪತಿ ಭವನದಿಂದ ಫೆಡರೇಷನ್‍ನ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪನವರ ನೇತೃತ್ವದಲ್ಲಿ ಮೆರವಣಿಗೆ ಹೊರಟ ಅಂಗನವಾಡಿಗಳ ನಿವೃತ್ತ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎಸಿ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಕೆ.ರಾಮಚಂದ್ರಪ್ಪ, ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಈ ಮಹಿಳೆಯರಿಗೆ ನಿವೃತ್ತಿಯ ನಂತರ ಯಾವುದೇ ಪಿಂಚಣಿ ನೀಡದಿರುವ ಪರಿಣಾಮ ನಿವೃತ್ತಿಯ ಬಳಿಕ ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಆರೋಪಿಸಿದರು.

      ಪಿಂಚಣಿ ದೊರೆಯದಿರುವುದರಿಂದ ನಿವೃತ್ತಿಯ ನಂತರ ಯಾವುದೇ ಭದ್ರತೆ ಇಲ್ಲದೇ, ವೃದ್ಧಾಪ್ಯದ ಬದುಕು ನಡೆಸುವುದು ಕಷ್ಠವಾಗಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಈವರೆಗೆ ಸೇವೆ ಸಲ್ಲಿಸಿ, ಸರ್ಕಾರದ ನಿಯಮಾನುಸಾರ ನಿವೃತ್ತಿಯಾಗುವವರಿಗೆ, ಮಾಸಿಕ 6 ಸಾವಿರ ಪಿಂಚಣಿ ನೀಡಿ, ಮುಪ್ಪಿನ ಜೀವನಕ್ಕೆ ಆಸರೆ ನೀಡಬೇಕೆಂದು ಆಗ್ರಹಿಸಿದರು.

      ಇಲಾಖೆಯಡಿ ಕೆಲಸ ಮಾಡುವ ಅಂಗನವಾಡಿ ನೌಕರರಿಂದ ಸರ್ಕಾರದ ಆದೇಶದ ಪ್ರಕಾರ ಫೆಬ್ರವರಿ 2011ರಿಂದ 2015ರವೆರೆಗೆ ಗೌರವ ಧನದಲ್ಲಿ ಪ್ರತಿ ತಿಂಗಳು ಎನ್‍ಪಿಎಸ್ ಲೈಟ್ ಯೋಜನೆಯಡಿ ಹಣ ಮುರಿದುಕೊಳ್ಳಲಾಗಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ 2015ರ ನಂತರ ನಿವೃತ್ತಿಯಾಗುವವರಿಗೆ ಯೋಜನೆ ಲೆಕ್ಕಾಚಾರದ ಹಣವನ್ನು ಆಯಾ ನೌಕರರ ಬ್ಯಾಂಕ್ ಖಾತೆಗೆ ಜಮಾ ಮಾಡಿಲ್ಲ. ಯೋಜನೆ ಅನುಭವದಾರರಿಗೆ ಮಾಹಿತಿ ಕಾರ್ಡ್‍ಗಳನ್ನೂ ಇಲಾಖೆ ವಿತರಿಸಿಲ್ಲ. ಆದ್ದರಿಂದ ಎನ್‍ಪಿಎಸ್ ಲೈಟ್ ಯೋಜನೆಯಡಿ ಕಡಿತ ಮಾಡಿಕೊಂಡ ಅಷ್ಟೂ ಹಣವನ್ನು ತಕ್ಷಣವೇ ಅಂಗನವಾಡಿ ನೌಕರರಿಗೆ ಮರುಳಿಸಬೇಕೆಂದು ಒತ್ತಾಯಿಸಿದರು.

      ಪ್ರತಿಭಟನೆಯಲ್ಲಿ ಫೆಡರೇಷನ್‍ನ ಎಂ.ಬಿ.ಶಾರದಮ್ಮ, ಎಸ್.ಎ.ಮಲ್ಲಮ್ಮ, ರೇಣುಕಮ್ಮ, ವಿಶಾಲಾಕ್ಷಿ, ಆನಂದರಾಜ್, ಆವರಗೆರೆ ಚಂದ್ರು, ಆವರಗೆರೆ ವಾಸು, ಸಿ.ರಮೇಶ್, ವಿಜಯಕುಮಾರಿ, ರೇಣುಕಮ್ಮ, ಸರ್ವಮ್ಮ, ನೀಲಮ್ಮ, ಸಾಕಮ್ಮ, ಶಕುಂತಲ, ಉಮಾ ಸೇರಿದಂತೆ ಹಲವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link