ದಾವಣಗೆರೆ:
ಕಾನೂನಿಗೆ ಯಾವುದೇ ಚ್ಯುತಿ ಬಾರದಂತೆ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಬಂದಿರುವ ತಮ್ಮ ಮೇಲೆ ವಿದ್ಯಾನಗರ ಠಾಣೆಯ ಪಿಎಸ್‍ಐ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಠಾಣೆಯ ಮುಖ್ಯ ಪೇದೆ ಜಿ.ಹನುಮಂತಪ್ಪ ಆರೋಪಿಸಿದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು 22 ವರ್ಷಗಳಿಂದ ಜಿಲ್ಲೆಯ ವಿವಿಧ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದು, ಕಳೆದ ಒಂದು ವರ್ಷದಿಂದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಠಾಣೆಯ ಪಿಎಸ್‍ಐ ಸಿದ್ದೇಶ್ ಅವರು ತಮಗೆ ನಿತ್ಯಲೂ ಒಂದಲ್ಲ, ಒಂದು ರೀತಿಯಲ್ಲಿ ಮಾನಸಿಕ ಹಿಂಸೆ ನೀಡುತ್ತಲೇ ಬಂದಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ದೂರಿದರು.
ನಿಯಮದಂತೆ ಪ್ರತಿ ಠಾಣೆಗಳಲ್ಲಿ ಭಾನುವಾರದಿಂದ ಭಾನುವಾರದ ವರೆಗೆ ಚಾರ್ಜ್ ಛೇಂಜ್ ಆಗುತ್ತೆ. ತಾವು ಕಳೆದ ಭಾನುವಾರದಿಂದ ಎಸ್‍ಹೆಚ್‍ಓ ಆಗಿ ಚಾರ್ಜ್ ತಗೆದುಕೊಂಡಿದ್ದೆ. ಆದರೆ, ಪಿಎಸ್‍ಐ ಸಿದ್ದೇಶ ಅವರು ಏಕಾಏಕಿ ಕಳೆದ ಶುಕ್ರವಾರ ಚಾರ್ಜ್ ಛೇಂಜ್ ಮಾಡಿ ಶಾಮನೂರಿಗೆ ಕರ್ತವ್ಯಕ್ಕೆ ನಿಯೋಜಿಸಿದ್ದರು. ತಾವು ಅಂದು ಕೆಲಸ ಮುಗಿಸಿಕೊಂಡು ರಾತ್ರಿ ಪಿಎಸ್‍ಐ ಸಿದ್ದೇಶ್ ಅವರಿಗೆ ಫೋನ್ ಮಾಡಿ, ತಮಗೆಕೆ ಹೀಗೆ ಮಾನಸಿಕ ಕಿರುಕುಳ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಆಗ ಅವಾಚ್ಯಶಬ್ದಗಳಿಂದ ನಿಂದಿಸಿದ್ದಲ್ಲದೇ, ಆಫಿಸರ್ಸ್ ಕ್ಲಬ್‍ಗೆ ಬರುವಂತೆ ಬರ ಹೇಳಿದರು. ಆಗ ನಾ ಹೋಗಲಿಲ್ಲ. ಬಳಿಕ ಅನಾಮಧೇಯ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ, ಅವಾಚ್ಯಶಬ್ದಗಳಿಂದ ಮತ್ತಷ್ಟು ನಿಂದಿಸಿ ಕ್ಲಬ್‍ಗೆ ಕರೆಸಿಕೊಂಡರು. ಆಗ ನಾನು ಆಫಿಸರ್ಸ್ ಕ್ಲಬ್‍ಗೆ ಕರೆಸಿಕೊಂಡರು. ಅಲ್ಲಿಗೆ ಬಿಳಿ ಕಾರಿನಲ್ಲಿ ಬಂದ ಸಿದ್ದೇಶ್ ಹಾಗೂ ಇನ್ನಿಬ್ಬರು ಅಪರಿಚಿತರು ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಸಿದ್ದೇಶ್ ಅವರು ಬೂಟ್‍ಗಾಲಿನಿಂದ ಮುಖಕ್ಕೆ ಹೊಡೆದಿದ್ದಾರೆಂದು ದೂರಿದರು.
ನಾನು ಕರ್ತವ್ಯ ಲೋಪ ಎಸೆಗಿದ್ದರೆ, ನನ್ನ ವಿರುದ್ಧ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ, ಕಾನೂನು ಕ್ರಮ ಕೈಗೊಳ್ಳಲಿ. ಇವರಿಗೆ ನನ್ನ ಮೇಲೆ ಹಲ್ಲೆ ನಡೆಸಲು ಅಧಿಕಾರ ಕೊಟ್ಟವರ್ಯಾರು? ನಾನು ಇಲಾಖೆಗೆ ಸೇರಿದ ದಿನದಿಂದಲೂ ಈ ವರೆಗೂ ಇಂಥಹ ಪಿಎಸ್‍ಐಯನ್ನು ಕಂಡಿಲ್ಲ. ಕೆಳ ಮಟ್ಟದ ಸಿಬ್ಬಂದಿಗಳೆಂದರೆ, ಕೆಂಡಕಾರುತ್ತಾರೆ. ಇವರ ಕಿರುಕುಳದಿಂದ ಠಾಣೆಯ ಮಹಿಳಾ ಪೇದೆಗಳು ಸೇರಿದಂತೆ ಹಲವು ಸಿಬ್ಬಂದಿಗಳು ನರಳುತ್ತಿದ್ದಾರೆ. ಆದರೆ, ಯಾರೂ ಸಹ ಮುಂದೆ ಬಂದು ಅವರ ವಿರುದ್ಧ ಮಾತನಾಡುತ್ತಿಲ್ಲ. ನನಗಾದ ಅನ್ಯಾಯ ಬೇರೆ ಯಾರಿಗೂ ಆಗಬಾರದು ಎಂಬ ಕಾರಣಕ್ಕೆ ನನ್ನ ಕೆಲಸ ಹೋದರು ಪರವಾಗಿಲ್ಲ ಎಂಬ ಕಾರಣಕ್ಕೆ ಬಹಿರಂಗವಾಗಿ ಮಾತನಾಡುತ್ತಿದ್ದೇನೆ. ದಯವಿಟ್ಟು ಮೇಲಾಧಿಕಾರಿಗಳು ಪಿಎಸ್‍ಐ ಸಿದ್ದೇಶ್ ವಿರುದ್ಧ ಕ್ರಮ ಕೈಗೊಂಡು, ನನಗೂ ಹಾಗೂ ನನ್ನಂತೆ ಅವರಿಂದ ಮಾನಸಿಕ ಹಿಂಸೆಗೆ ಒಳಗಾಗಿರುವ ಕೆಳ ಹಂತದ ಸಿಬ್ಬಂದಿಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ಹಲ್ಲೆಗೊಳಗಾದ ಹನುಮಂತಪ್ಪನವರ ತಂದೆ ಗೋಣೆಪ್ಪ ಕೊಂಡಜ್ಜಿ ಮಾತನಾಡಿ, ನಾನು ಹಮಾಲಿ, ಕೂಲಿ-ನಾಲಿ ಮಾಡಿಕೊಂಡು ನನ್ನ ಮಗನನ್ನು ಸಾಕು ಸಲುಹಿದ್ದೇನೆ. ನನ್ನ ಮಗ ಅವರ ಹಿಂಸೆ ತಾಳಲಾರದೇ ಏನಾದರೂ ಮಾಡಿಕೊಂಡಿದ್ದರೆ, ನಾವೇನು ಮಾಡಬೇಕಿತ್ತು ಎಂದು ಕಣ್ಣೀರಿಟ್ಟು, ಪೊಲೀಸರೇ ಈ ರೀತಿ ದರ್ಪ ಮೆರೆದರೆ, ಕಾನೂನು ಏಕೆಬೇಕೆಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಹನುಮಂತಪ್ಪರ ಪತ್ನಿ ಗೌರಮ್ಮ, ಸಹೋದರರಾದ ಶಿವಕುಮಾರ್, ಈಶ್ವರ್, ಸಂಬಂಧಿಕರಾದ ಅಕ್ಕಮ್ಮ, ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ