ಪಿಎಸ್’ಐ ಹಗರಣ : ಸರ್ಕಾರಕ್ಕೆ ಕಾಂಗ್ರೆಸ್ ಪಂಚ ಪ್ರಶ್ನೆಗಳ ಆಗ್ರಹ

ಬೆಂಗಳೂರು : ಪಿಎಸ್’ಐ ನೇಮಕಾತಿ ಹಗರಣದಲ್ಲಿ ಪ್ರಮುಖ ವ್ಯಕ್ತಿಗಳ ರಕ್ಷಣೆಗೆ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಪಕ್ಷ ಐದು ಆಗ್ರಹಗಳನ್ನು ಆಡಳಿತ ಸರ್ಕಾರದ ಮುಂದಿಟ್ಟಿದೆ.

ಈ ವಿಚಾರವಾಗಿ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದು ಮಾತನಾಡಿದರು.

ಪಿಎಸ್’ಐ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಕಲಬುರ್ಗಿ ನಗರದ ಚೌಕ್ ಪೊಲೀಸ್ ಠಾಣೆಯ ದೂರಿನ ಪ್ರಕರಣದ ವಿಚಾರವಾಗಿ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕಲಬುರ್ಗಿಯಲ್ಲಿರುವ ಜ್ಞಾನಜ್ಯೋತಿ ಶಾಲೆಯಲ್ಲಿ ಪರೀಕ್ಷೆ ಅಕ್ರಮ ನಡೆದಿದ್ದು, ಇಲ್ಲಿ ಎರಡು ವಿಚಾರವಾಗಿ ದೂರು ದಾಖಲಾಗಿದೆ. ಒಎಂಆರ್ ಪತ್ರಿಕೆ ತಿದ್ದುಪಡಿ ಮೊದಲ ಆರೋಪವಾದರೆ, ಬ್ಲ್ಯೂ ಟೂತ್ ಬಳಸಿ ಅಕ್ರಮ ನಡೆಸಲಾಗಿದೆ ಎಂದು ಮತ್ತೊಂದು ಆರೋಪವಾಗಿದೆ. ತನಿಖಾಧಿಕಾರಿಗಳು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಪ್ರಕರಣದ ಪ್ರಮುಖ ಆರೋಪಿಗಳು ಸ್ಥಳೀಯ ಮಟ್ಟದಲ್ಲಿ ಈ ಅಕ್ರಮವನ್ನು ಹೇಗೆ ನಡೆಸಲಾಗಿದೆ ಎಂದು ತಪ್ಪು ಒಪ್ಪಿಕೊಂಡಿದ್ದಾರೆ.

ಈ ಶಾಲೆಯಲ್ಲಿ ಪರೀಕ್ಷೆ ನಡೆಯುವಾಗ ಪ್ರಾಂಶುಪಾಲರು ಹಾಗೂ ಪರೀಕ್ಷಾ ಮೇಲ್ವಿಚಾರಕರಿಗೆ ಮಾತ್ರ ಅವಕಾಶವಿರುತ್ತದೆ. ಆದರೆ ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರು ತಾವೇ ಶಾಲೆಯ ಪ್ರಾಂಶುಪಾಲರು ಎಂದು ಹೇಳಿ ಅಧಿಕಾರಿಗಳ ದಾರಿ ತಪ್ಪಿಸಿ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆಯುವಂತೆ ನೋಡಿಕೊಂಡಿದ್ದಾರೆ. ಅಭ್ಯರ್ಥಿಗಳಿಗೆ ಬ್ಲ್ಯೂಟೂತ್ ಮೂಲಕ ಉತ್ತರ ನೀಡುವ ತಂಡಕ್ಕೆ ಸಂಪರ್ಕ ಸಾಧಿಸಲು ಈ ರೀತಿ ಮಾಡಿರುತ್ತಾರೆ ಎಂದು ಶಾಲೆಯ ಪ್ರಾಂಶುಪಾಲರಾದ ಕಾಶಿನಾಥ್ ಅವರು ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪರೀಕ್ಷೆ ವೇಳೆ ಅಕ್ರಮ ನಡೆಸಲು ಅವಕಾಶ ಮಾಡಿಕೊಡುವುದಕ್ಕಾಗಿ ಪ್ರತಿ ಅಭ್ಯರ್ಥಿಗಳಿಂದ 30 ಲಕ್ಷ ಕೆಲವರಿಂದ 25 ಲಕ್ಷ ರೂ.ಗಳನ್ನು ಪಡೆಯಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಈ ನೇಮಕಾತಿ ಅಕ್ರಮವು ವಿವಿಧ ಹಂತಗಳಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ. ಇನ್ನು ಪರೀಕ್ಷೆಗೆ ಗೈರಾದ ಅಭ್ಯರ್ಥಿ ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡು ಕಚೇರಿಯಲ್ಲಿ ಫೆÇೀಟೋ ತೆಗೆದು ವಾಟ್ಸಪ್ ಮೂಲಕ ದಿವ್ಯಾ ಹಾಗರಗಿ ಅವರಿಗೆ ಕಳುಹಿಸಬೇಕು. ನಂತರ ಅವರು ಉತ್ತರ ನೀಡುವ ತಂಡಕ್ಕೆ ಕಳುಹಿಸುತ್ತಾರೆ. ನಂತರ ಆ ತಂಡ ದಿವ್ಯಾ ಹಾಗರಗಿ ಅವರಿಗೆ ಉತ್ತರಗಳನ್ನು ಕಳುಹಿಸುತ್ತಾರೆ. ಅವರು ಪರಿಕ್ಷಾ ಮೇಲ್ವಿಚಾರಕರಿಗೆ ಆ ಉತ್ತರವನ್ನು ಕಳುಹಿಸಿ ಅಕ್ರಮ ನಡೆಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ವಿವರವಾಗಿ ಹೇಳಲಾಗಿದೆ.

ಈ ಪರಿಕ್ಷಾ ಮೇಲ್ವಿಚಾರಕರಿಗೆ ಭತ್ಯೆ 1 ಸಾವಿರ ರೂ ಜತೆಗೆ ಈ ಅಕ್ರಮದಲ್ಲಿ ಭಾಗಿಯಾಗಿದ್ದಕ್ಕಾಗಿ 4 ಸಾವಿರ ರೂ. ನೀಡಲಾಗಿದೆ. ಮಾನ್ಯ ಗೃಹ ಸಚಿವರೇ ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಪಟ್ಟಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ತಾವುಗಳು ಅಕ್ರವೇ ನಡೆದಿಲ್ಲ ಎಂದು ಹೇಳುತ್ತಿದ್ದಿರಿ. ಈಗ ಏನು ಹೇಳುತ್ತೀರಿ? ಸ್ಥಳೀಯ ಪೆÇಲೀಸ್ ಅಧಿಕಾರಿಗಳು, ಹಿರಿಯ ಪೆÇಲೀಸ್ ಅಧಿಕಾರಿಗಳ ಸಹಕಾರ ಇಲ್ಲದೆ ಈ ಅಕ್ರಮ ನಡೆಯಲು ಸಾಧ್ಯವೇ?

ಈ ಆರೋಪಪಟ್ಟಿಯಲ್ಲಿ ಯಾವ ಯಾವ ಅಭ್ಯರ್ಥಿಗಳ ಜತೆ ಹೇಗೆ ಚೌಕಾಸಿ ನಡೆಸಿ ಡೀಲ್ ಕುದುರಿಸಿದ್ದಾರೆ ಎಂಬ ವಿಚಾರವೂ ಪ್ರಸ್ತಾಪವಾಗಿದೆ. ಜತೆಗೆ ಆರ್.ಡಿ ಪಾಟೀಲ್ ಎಂಬುವವರು ಬೇರೆಯವರಿಂದ 50 ಲಕ್ಷ ಪಡೆಯಲಾಗುವುದು. ನೀವು ಸಂಬಂಧಿಯಾಗಿರುವುದರಿಂದ 30 ಲಕ್ಷ ನೀಡಿದರೆ ಸಾಕು. ಬೇರೆ ಯಾರಾದರೂ ಇದ್ದರೆ ಅವರನ್ನು ಕರೆತನ್ನಿ ಎಂದು ಅಭ್ಯರ್ಥಿಗೆ ಹೇಳಿರುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಕೇವಲ ಈ ಒಂದು ಪರಿಕ್ಷಾ ಕೇಂದ್ರದಲ್ಲೇ ಸುಮಾರು 3.5 ಕೋಟಿಯಷ್ಟು ಅಕ್ರಮ ನಡೆದಿದ್ದು, ರಾಜ್ಯದ ಇತರೆ ಕೇಂದ್ರಗಳಲ್ಲಿ ಎಷ್ಟು ಅಕ್ರಮ ನಡೆದಿರಬಹುದು. ಸರ್ಕಾರ ಅಧಿಕಾರಿಗಳನ್ನು ಬಂಧಿಸಿದ್ದೀರಿ ಎಂದು ಬೆನ್ನುತಟ್ಟಿಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾದ ಎಷ್ಟು ಜನರನ್ನು ಹಿಡಿದಿದ್ದೀರಿ?

ಈ ನೇಮಕಾತಿಯಲ್ಲಿ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮವಾಗಿ ಆಯ್ಕೆಯಾಗಿದ್ದು, ಎಷ್ಟು ಮಂದಿ ನಿಮ್ಮ ವಿಚಾರಣೆಗೆ ಆಗಮಿಸಿದ್ದಾರೆ? ಈ ಅಕ್ರಮ ಬಯಲಿಗೆಳೆದವರಿಗೆ ನೊಟೀಸ್ ಜಾರಿ ಮಾಡುವ ಸರ್ಕಾರ ಈ ಅಭ್ಯರ್ಥಿಗಳಿಗೆ ನೊಟೀಸ್ ಜಾರಿ ಮಾಡಿದೆಯೇ? ನಿಮ್ಮ ನೊಟೀಸ್ ಗೆ ಬೆಲೆ ಕೊಟ್ಟು ಅವರು ವಿಚಾರಣೆಗೆ ಹಾಜರಾಗಿದ್ದಾರೆಯೇ? ಅವರು ನಿಮ್ಮ ನೊಟೀಸ್ ಗೆ ಕವಡೆ ಕಾಸಿನ ಬೆಲೆ ನೀಡುತ್ತಿಲ್ಲ, ಅವರ ವಿಚಾರಣೆ ನಡೆಸುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲ. ಸರ್ಕಾರ ಈ ಪ್ರಕರಣವನ್ನು ಕೇವಲ ಕಲಬುರ್ಗಿಗೆ ಸೀಮಿತಗೊಳಿಸಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಕರಣ ತನಿಖೆ ಬೆಂಗಳೂರಿನವರೆಗೂ ಬಂದರೆ, ವಿಧಾನಸೌಧ ವ್ಯಾಪಾರ ಸೌಧವಾಗಿದೆ ಎಂದು ಬಹಿರಂಗವಾಗುತ್ತದೆ ಎಂದು ತನಿಖೆಯನ್ನು ಪೂರ್ಣಪ್ರಮಾಣದಲ್ಲಿ ನಡೆಸುತ್ತಿಲ್ಲ.

ಬೆಂಗಳೂರು ಹಾಗೂ ಇತರೆ ಕಡೆಗಳಲ್ಲಿ ದಾಖಲಾಗಿರುವ ದೂರಿನ ಆರೋಪಪಟ್ಟಿಗಳು ಎಲ್ಲಿವೆ? 90 ದಿನಗಳಲ್ಲಿ ಆರೋಪಪಟ್ಟಿ ಕಳುಹಿಸಬೇಕು ಎಂದು ಕಾನೂನು ಇದೆ. ಆದರೂ ಇದನ್ನು ದಾಖಲಿಸಿಲ್ಲ ಯಾಕೆ? ಇದರಲ್ಲಿ ಹಸ್ತಕ್ಷೇಪ ಮಾಡುತ್ತಿರುವವರು ಯಾರು?

ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಇದೆಲ್ಲ ಆಗುತ್ತಿರಲಿಲ್ಲ ಎಂದು ಹೇಳುವ ಬಿಜೆಪಿ ನಾಯಕರೇ, ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಈ ಹಗರಣವೇ ನಡೆಯುತ್ತಿರಲಿಲ್ಲ. ಸರ್ಕಾರದವರು ಅಧಿಕಾರಿಗಳು ಈ ಅಕ್ರಮದಲ್ಲಿ ಶಆಮೀಲಾಗಿಲ್ಲ ಎಂದು ಹೇಳುತ್ತೀರಲ್ಲ, ಆದರೆ ತನಿಖಾಧಿಕಾರಿಗಳು ಆರೋಪಿಗಳಾದ ಎ 27ರಿಂದ ಎ29ರವರುಗಳು (ಆನಂದ್ ಮೈತ್ರಿ, ಪೊಲೀಸ್ ಇನ್ಸ್ಪೆಕ್ಟರ್ ಬೆರಳಚ್ಚು ಮುದ್ರೆ ವಿಭಾಗ ಕಲಬುರ್ಗಿ ಜಿಲ್ಲೆ, ಮಲ್ಲಿಕಾರ್ಜುನ ಸಾಲಿ ಡಿವೈಎಸ್ ಪಿ ಲಿಂಗಸೂರು, ವೈದ್ಯನಾಥ್ ಸಹಾಯಕ ಕಮಾಂಡೆಂಟ್) ಪೊಲೀಸ್ ಅಧಿಕಾರಿಗಳಿದ್ದು, ಅವರನ್ನು ವಿಚಾರಣೆಗೆ ನಡೆಸಲು ಅವಕಾಶ ಕೋರಲಾಗಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ. ಈ ಅಧಿಕಾರಿಗಳ ವಿಚಾರಣೆ ನಡೆಸಲು ಯಾಕೆ ಅವಕಾಶ ನೀಡಿಲ್ಲ? ಇನ್ನು ಕೆಲವು ಅಧಿಕಾರಿಗಳ ಬೆರಳಚ್ಚು, ಮಾದರಿ ಸಹಿ ಪರೀಕ್ಷೆಯನ್ನು ಮಡಿವಾಳದ ಪ್ರಯೋಗಾಲಯಕ್ಕೆ ಕಳಉಹಿಸಲಾಗಿದ್ದು, ಪರಿಕ್ಷಾ ವರದಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ತನಿಖೆ ಯಾಕೆ ಇಷ್ಟು ವಿಳಂಬವಾಗಿದೆ?

ಈ ಸರ್ಕಾರ ಆರೋಪಿಗಳಿಂದ ಎಷ್ಟು ಮಾಹಿತಿ ಬೇಕೋ ಅಷ್ಟನ್ನು ಮಾತ್ರ ದಾಖಲಿಸಿಕೊಂಡಿದ್ದಾರೆ. ನೀವು ಈ ಎಲ್ಲ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹೇಳಿಕೆ ಪಡೆಯಿರಿ ಆಗ ಯಾರ ಹೆಸರು ಹೇಳುತ್ತಾರೆ ಕೇಳಿ. ಈ ತನಿಖೆ ಸರ್ಕಾರದ ರಕ್ಷಣೆಗೆ ನಡೆಯುತ್ತಿರುವ ತನಿಖೆಯೇ ಹೊರತು, ಯುವಕರ ಭವಿಷ್ಯ ರಕ್ಷಣೆಗೆ ಅಲ್ಲ. ಸರ್ಕಾರ ಈ ವಿಚಾರದಲ್ಲಿ ಮಾನವೀಯತೆ ಪ್ರದರ್ಶಿಸಬೇಕಿದೆ.

ಯತ್ನಾಳ್ ಅವರ ವಿಚಾರಣೆ ಯಾವಾಗ?

ಪಿಎಸ್’ಐ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಮಗ ಕೈವಾಡವಿದೆ. ಈ ಅಕ್ರಮದಲ್ಲಿ ನಡೆದಿರುವ ಅವ್ಯವಹಾರದ ಸಂಪೂರ್ಣ ದಾಖಲೆ ನನ್ನ ಬಳಿ ಇದೆ ಎಂದು ಬಿಜೆಪಿ ಶಾಸಕ ಯತ್ನಾಳ್ ಅರು ಹೇಳಿದ್ದಾರೆ. ಕಾಂಗ್ರೆಸ್ ನಾಯಕರ ಮಾತನ್ನು ಪರಿಗಣಿಸದಿದ್ದರೂ, ಆರ್.ಎಸ್.ಎಸ್ ಗೆ ಹತ್ತಿರವಾಗಿರುವ, ನಾನು ಸರ್ಕಾರಿ ದಾಖಲೆ, ಸಾಮಾಜಿಕ ಜಾಲತಾಣಗಳಲ್ಲಿರುವ ಮಾಹಿತಿ ಇಟ್ಟುಕೊಂಡು ಮಾತನಾಡಿದರೆ ನನಗೆ ನೊಟೀಸ್ ನೀಡುತ್ತಾರೆ. ಆದರೆ ಸರ್ಕಾರದ ವಿರುದ್ಧ ನೇರವಾಗಿ ಹಾಗೂ ಬಹಿರಂಗವಾಗಿ ಆರೋಪ ಮಾಡುತ್ತಿರುವ ಯತ್ನಾಳ್ ಅರ ವಿಚಾರಣೆಯನ್ನು ಯಾವಾಗ ಮಾಡುತ್ತಾರೆ? ಮುಖ್ಯಮಂತ್ರಿಗಳೇ ಯತ್ನಾಳ್ ಅವರು ನಿಮಗೆ ನೇರವಾಗಿ ಸವಾಲು ಹಾಕುತ್ತಿದ್ದಾರೆ.

ನನಗೆ ಮಂತ್ರಿ ಸ್ಥಾನ ಬೇಡ. ಈಗಾಗಲೇ ಎಲ್ಲವನ್ನು ಗುಡಿಸಿ ಗುಂಡಾಂತರ ಮಾಡಲಾಗಿದೆ. ಹೀಗಾಗಿ ನನಗೆ ಮಂತ್ರಿ ಸ್ಥಾನ ಬೇಡ ಎಂದು ಯತ್ನಾಳ್ ಹೇಳಿದ್ದಾರೆ. ಆ ಮೂಲಕ ಇದು 40% ಸರ್ಕಾರ ಎಂದು ಆರೋಪ ಮಾಡುತ್ತಿದ್ದಾರೆ.

ಕಟೀಲ್ ಅವರೇ ಮಾತೆತ್ತಿದರೆ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತೀರಿ. ಇವರಿಗೆ ನೊಟೀಸ್ ನೀಡಿ ವಿಚಾರಣೆ ಮಾಡುವುದು ಯಾವಾಗ? ನನ್ನ ಪ್ರಕಾರ ಯತ್ನಾಳ್ ಅವರೇ ಅಘೋಷಿತ ಬಿಜೆಪಿ ಅಧ್ಯಕ್ಷರಾಗಿದ್ದಾರೆ.

ಯತ್ನಾಳ್ ಅವರು ಈಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಿದರೆ, ನಾಡಿನ ಯುವಕರು ಅವರನ್ನು ಪೂಜಿಸುತ್ತಾರೆ. ಆದಷ್ಟು ಬೇಗ ದಾಖಲೆಗಳನ್ನು ಬಿಡುಗಡೆ ಮಾಡಲಿ.

ಪ್ರಿಯಾಂಕ್ ಖರ್ಗೆ ಆರೋಪಿಸಿದ ಪ್ರಮುಖಾಂಶಗಳು

1. ಪಿಎಸ್ ಐ ಅಕ್ರಮ ಪ್ರಕರಣದ ತನಿಖೆಯನ್ನು ಕಲ್ಬುರ್ಗಿಯ ಒಂದು ಪರಿಕ್ಷಾ ಕೇಂದ್ರದ ಅಕ್ರಮಕ್ಕೆ ಮಾತ್ರ ಸೀಮಿತಗೊಳಿಸಿದ್ದು, ರಾಜ್ಯದ ಇತರೆ ಕೇಂದ್ರಗಳಲ್ಲಿನ ಅಕ್ರಮದ ಕುರಿತು ತನಿಖೆ ಯಾವಾಗ? ಅದಕ್ಕೆ ಕಾಲಮಿತಿ ಏನು? ರಾಜ್ಯದ ಇತರೆ ಭಾಗಗಳಲ್ಲಿ ನಡೆದಿರುವ ಅಕ್ರಮದ ತನಿಖೆಯೂ ತ್ವರಿತಗತಿಯಲ್ಲಿ ಆಗಬೇಕು ಎಂದು ಆಗ್ರಹಿಸಿದ್ದಾರೆ.

2. ಅನ್ನಪೂರ್ಣೇಶ್ವರಿ ನಗರದಲ್ಲಿ ದಾಖಲಾಗಿರುವ ದೂರಿನ ಪ್ರತಿಯನ್ನು ಮುಚ್ಚಿಹಾಕಿ ಪ್ರಕರಣವನ್ನೇ ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಹಗರಣದ ತನಿಖೆ ವಿಳಂಬ ಹಾಗೂ ಮುಚ್ಚಿಹಾಕುವ ಪ್ರಯತ್ನವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

3. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು.

4. ಎಡಿಜಿಪಿ ಅಮೃತ್ ಪೌಲ್ ಅವರ ಹೇಳಿಕೆಯನ್ನು ಸೆಕ್ಷನ್ 164 ಪ್ರಕಾರ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿಕೊಳ್ಳಬೇಕು.

5. ಅರೋಪಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಎಸ್.ಡಿ.ಎ, ಎಫ್.ಡಿ.ಎ, ಪಿಡಬ್ಲ್ಯೂಡಿ, ಪೆÇಲೀಸ್ ಪೇದೆ ನೇಮಕಾತಿ ಅಕ್ರಮದ ಕುರಿತು ಕೂಡಲೇ ತನಿಖೆ ಆಗಬೇಕು. ಈ ಸರ್ಕಾರ ಬಂದ ನಂತರ ಆಗಿರುವ ಎಲ್ಲ ನೇಮಕಾತಿ ಪ್ರಕ್ರಿಯೆಗಳ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂವಹನ ವಿಭಾಗದ ಸಹ ಮುಖ್ಯಸ್ಥರಾದ ಮನ್ಸೂರ್ ಖಾನ್, ಉಪಾಧ್ಯಕ್ಷರಾದ ರಮೇಶ್ ಬಾಬು, ಮಾಜಿ ಮೇಯರ್ ರಾಮಚಂದ್ರಪ್ಪ ಅವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap