ಪಿಒಪಿ ಗಣೇಶನ ಮೂರ್ತಿಗಳ ಮಾರಾಟಕ್ಕೆ ಯತ್ನಿಸಿದಲ್ಲಿ ಕಾನೂನು ಕ್ರಮ : ಪೌರಾಯುಕ್ತರ ಎಚ್ಚರಿಕೆ

ಚಳ್ಳಕೆರೆ

              ಪ್ರತಿವರ್ಷದಂತೆ ಈ ವರ್ಷವೂ ಸಹ ವರನೀಡುವ ಸಿದ್ದಿ ವಿನಾಯಕನ ಹಬ್ಬವನ್ನು ಸಂಭ್ರಮ ಮತ್ತು ಸಡಗರಗಳಿಂದ ಆಚರಿಸಲು ಭಕ್ತಾಧಿಗಳು ಸಿದ್ದತೆಯನ್ನು ನಡೆಸಿದ್ದಾರೆ. ಶ್ರೀಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಹಲವಾರು ಸಂಘ ಸಂಸ್ಥೆಗಳು ಈಗಾಗಲೇ ಗಣೇಶ ಹಬ್ಬಕ್ಕೆ ಅವಶ್ಯವಿರುವ ಸಂಪನ್ಮೂಲಗಳನ್ನು ಕ್ರೂಢಿಕರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ಧಾರೆ. ಈಗಾಗಲೇ ವಿವಿಧ ಭಾಗಗಳಿಂದ ವಿವಿಧ ಆಕೃತಿ ಶ್ರೀಗಣೇಶನ ಮೂರ್ತಿಗಳು ಪಟ್ಟಣಕ್ಕೆ ಆಗಮಿಸಿದ್ದು, ಭಕ್ತರ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿವೆ.
              ಗಣೇಶ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಿಒಪಿ ಗಣಪತಿ ಮೂರ್ತಿಗಳ ಮಾರಾಟವನ್ನು ನಿಷೇದಿಸಿದ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಸಹ ನಗರಸಭೆ ಪೌರಾಯುಕ್ತರು ಮತ್ತು ಸಿಬ್ಬಂದಿ ವರ್ಗ ಪ್ರಾರಂಭದ ಹಂತದಲ್ಲೇ ದಾಳಿನಡೆಸಿ ಪಿಒಪಿ ಗಣಪತಿ ಮೂರ್ತಿಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದರು. ಈ ಬಾರಿಯೂ ಸಹ ಪೌರಾಯುಕ್ತ ಜೆ.ಟಿ.ಹನುಮಂತರಾಜು ಮತ್ತು ಸಿಬ್ಬಂದಿ ವರ್ಗ ಶುಕ್ರವಾರ ಮಧ್ಯಾಹ್ನ ಚಿತ್ರದುರ್ಗ ಮತ್ತು ಬಳ್ಳಾರಿ ರಸ್ತೆಗಳಿಗೆ ಭೇಟಿ ನೀಡಿ ಪಿಒಪಿ ಗಣಪತಿಗಳ ಮಾರಾಟ ಮಾಡದಂತೆ ನಿರ್ಬಂಧಿಸಿದರು.  
               ಈ  ಸಂದರ್ಭದಲ್ಲಿ ಚಿತ್ರದುರ್ಗ ರಸ್ತೆಯ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಎರಡ್ಮೂರು ಕಡೆ ಶ್ರೀಗಣೇಶನ ಮೂರ್ತಿಗಳ ಮಾರಾಟಕ್ಕೆ ಸಜ್ಜಾಗಿದ್ದು, ಸ್ಥಳಕ್ಕೆ ತೆರಳಿದ ಪೌರಾಯುಕ್ತರು ಮತ್ತು ಸಿಬ್ಬಂದಿ ವರ್ಗ ಗಣೇಶ ಮೂರ್ತಿಗಳನ್ನು ಪಿಒಪಿಯದ್ದೇ ಅಥವಾ ಮಣ್ಣಿನ ಮಾಡಿದ್ದೇ ಎಂದು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗಣೇಶ ಮೂರ್ತಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ ಪೌರಾಯುಕ್ತರು ಪಿಒಪಿ ಗಣೇಶನಮೂರ್ತಿಗಳನ್ನು ಮಾರಾಟ ಮಾಡಲು ಯತ್ನಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದರು. ಈ ಬಗ್ಗೆ ಪ್ರತಿನಿತ್ಯ ಪರಿಶೀಲನೆ ನಡೆಸುವಂತೆ ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಸಹಾಯಕರಾದ ವೀರಭದ್ರಿಯವರಿಗೆ ಸೂಚನೆ ನೀಡಿದರು.
             ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನೈಸರ್ಗಿಕವಾಗಿ ಮಣ್ಣಿನಿಂದ ಮಾಡಿದ ಗಣೇಶ ವಿಗ್ರಹಗಳೇ ಪೂಜೆಗೆ ಶ್ರೇಷ್ಠವಾಗಿದ್ದು, ಅವುಗಳನ್ನು ಮಾರಾಟ ಮಾಡಲು ಯಾವುದೇ ನಿರ್ಬಂಧವಿಲ್ಲ. ಆದರೆ, ಪರಿಸರ ಹಿತದೃಷ್ಠಿಯಿಂಸ ಪಿಒಪಿ ಗಣಪತಿಗಳ ಮಾರಾಟ ಮಾಡುವಂತಿಲ್ಲ. ಆದರೆ, ಕೆಲವೊಮ್ಮೆ ಮಾರಾಟಗಾರರು ನಗರಸಭೆಯ ಕಣ್ಣು ತಪ್ಪಿಸಿ ಪಿಒಪಿ ಗಣಪತಿಗಳ ಮಾರಾಟ ಮಾಡುವ ಬಗ್ಗೆ ಮಾಹಿತಿ ಇದೆ. ಯಾವುದೇ ಕಾರಣಕ್ಕೂ ನಗರದ ಯಾವುದೇ ಭಾಗದಲ್ಲಿ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡಲು ಯತ್ನಿಸಿದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Recent Articles

spot_img

Related Stories

Share via
Copy link
Powered by Social Snap