ಮಧುಗಿರಿ
ಆಡಳಿತದಲ್ಲಿ ಜನತೆಗೆ ಸ್ಪಂದಿಸುವ ಕಾರ್ಯಗಳು ನಿರೀಕ್ಷೆಗೆ ತಕ್ಕಂತೆ ನಡೆಯುತ್ತಿಲ್ಲ. ಎಲ್ಲಾ ಇಲಾಖೆಗಳ ಬಗ್ಗೆಯೂ ಸಾಕಷ್ಟು ದೂರುಗಳು ಬರುತ್ತಿವೆ. ನನ್ನ ಇನ್ನೊಂದು ಮುಖ ಅನಾವರಣಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಖಾರವಾಗಿ ನುಡಿದರು.
ಗುರುವಾರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಇಂದಿರಾ ದೇನಾನಾಯ್ಕರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಾ ಕಂದಾಯ ಇಲಾಖೆಯಲ್ಲಿ ಪಹಣಿ, ಖಾತೆ, ಪಟ್ಟೆ, ಮ್ಯೂಟೇಷನ್, ಪವತಿ ಖಾತೆ ಮಾಡುವುದು ಸೇರಿದಂತೆ ಕಾರ್ಯಗಳಾಗಬೇಕಾಗಿದೆ. ಗ್ರಾಮ ಪಂಚಾಯ್ತಿಯ ಪಿ.ಡಿ.ಒಗಳು ತಮ್ಮದೇ ಆದ ಕೋಟೆ ಕಟ್ಟಿಕೊಂಡು ಮೆರೆಯುತ್ತಿದ್ದಾರೆ. ನಾನು ಸೇರಿದಂತೆ ಯಾವ ಜನಪ್ರತಿನಿಧಿಗಳೊಂದಿಗೂ ಸರಿಯಾದ ರೀತಿಯಲ್ಲಿ ನಡೆದು ಕೊಳ್ಳುತ್ತಿಲ್ಲ. ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ. ನಾನು ಈ ಸಭೆಯಲ್ಲಿ ಪಿಡಿಒಗಳು ಭಾಗವಹಿಸುತ್ತಾರೆಂಬ ಭಾವನೆಯಿಂದ ಬಂದಿದ್ದೆನು. ಮುಂಬರುವ ದಿನಗಳಲ್ಲಿ ಪಿಡಿಒಗಳ ಪ್ರತ್ಯೇಕ ಸಭೆ ಕರೆದು ಮಾತನಾಡಬೇಕಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಜನರು ಒಮ್ಮೊಮ್ಮೆ ಹುಚ್ಚುಚ್ಚಾಗಿ ಆಕ್ರೋಶವಾಗಿ ಮಾತನಾಡುತ್ತಾರೆ. ಕಾನೂನು ವಿರುದ್ಧ ಬೇಡಿಕೆ ಇಡುತ್ತಾರೆ. ಕಾನೂನು ವಿರುದ್ಧ ಮಾಹಿತಿ ಕೇಳುತ್ತಾರೆ. ಅಧಿಕಾರಿಗಳು ತಾಳ್ಮೆಯಿಂದ ಇರಬೇಕಾಗಿರುತ್ತದೆ. ಅಧಿಕಾರಿಗಳ ಕಷ್ಟ-ಸುಖಗಳ ಅರಿವಿದೆ. ಆದರೂ ಜನಸಾಮಾನ್ಯರನ್ನು ಪ್ರೀತಿಯಿಂದ ಕರೆದು ಕೂರಿಸಿ ಅವರ ಸಮಸ್ಯೆಯನ್ನು ಆಲಿಸಬೇಕಾಗಿರುತ್ತದೆ. ಅವರಿಗೆ ಕಾನೂನಿನ ಅರಿವು ಮಾಡಿ ಕೊಡಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಶಾಹಿ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ. ಕಠಿಣವಾಗಿ ವರ್ತಿಸಿದಲ್ಲಿ ಆಡಳಿತ ವ್ಯವಸ್ಥೆಯೇ ನಮ್ಮ ಕೈ ಬಿಟ್ಟು ಹೋಗುತ್ತದೆ. ಸದಾ ನಿಮಗೆ ನನ್ನ ಬೆಂಬಲವಿರುತ್ತದೆ. ಸರ್ಕಾರದಿಂದ ಏನು ಬೇಕಾದರೂ ಮಂಜೂರು ಮಾಡಿಸಿಕೊಂಡು ಬರುವ ಸಾಮಥ್ರ್ಯವಿದೆ, ಅನುದಾನ ತರುತ್ತೇನೆ ಎಂದರು.
ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಮಾತನಾಡಿ ನನ್ನ ಕ್ಷೇತ್ರ ವ್ಯಾಪ್ತಿಗೆ ಬರುವ ಹೂವಿನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೆ ನನಗೆ ಆಹ್ವಾನವಿಲ್ಲ. ಗರಣಿ ಕ್ಷೇತ್ರದ ವ್ಯಾಪ್ತಿ ಚನ್ನಮಲ್ಲನಹಳ್ಳಿ ಗ್ರಾಮದಲ್ಲಿ ಎತ್ತಿನ ಹೊಳೆ ಯೋಜನಾ ಉಪ ವಿಭಾಗ ಇಲಾಖೆ ಕಾಮಗಾರಿ ಪ್ರಾರಂಭೋತ್ಸವಕ್ಕೆ ನನ್ನನ್ನಾಗಲಿ, ಆ ಕ್ಷೇತ್ರದ ಸದಸ್ಯರನ್ನಾಗಲಿ ಆಹ್ವಾನಿಸಿಲ್ಲ. ಕೊಡಿಗೇನಹಳ್ಳಿ ಹೋಬಳಿ ವೆಂಗಳಮ್ಮನಹಳ್ಳಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಗುದ್ದಲಿ ಪೂಜೆಗೆ ಜನಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ. ಪ್ರತಿ ಸಭೆಯಲ್ಲೂ ಗೈರು ಹಾಜರಾದವರಿಗೆ ನೋಟೀಸ್ ಕಳಿಸಿ ಸುಮ್ಮನಾಗುತ್ತೀರಿ. ಈ ಬಾರಿ ಠರಾವು ಪುಸ್ತಕದಲ್ಲಿ ಬರೆದು ಜಿಲ್ಲಾ ಪಂಚಾಯ್ತಿಗೆ ಕಳಿಸಿ ಒಬ್ಬಿಬ್ಬರು ಅಮಾನತ್ತಾದರೆ ಬುದ್ದಿ ಬರುತ್ತದೆ ಎಂದರು.
ಗರಣಿ ಕ್ಷೇತ್ರದ ಸದಸ್ಯ ರಾಜು ಮಾತನಾಡಿ, ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಬಗ್ಗೆ ಕಿಂಚಿತ್ತೂ ಗೌರವವಿಲ್ಲ. ಸಭೆ ಸಮಾರಂಭಗಳಿಗೆ ಆಹ್ವಾನಿಸುವುದಿಲ್ಲ. ಇತ್ತೀಚೆಗೆ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟ ಏರ್ಪಡಿಸಿ ಖಾಸಗಿ ವ್ಯಕ್ತಿಗೆ ಜವಾಬ್ದಾರಿ ನೀಡಿರುವುದು ಎಷ್ಟು ಸರಿ? ಒಂದು ರಾಜಕೀಯ ಪಕ್ಷದ ಮುಖಂಡನಿಗೆ ವ್ಯವಸ್ಥೆಯ ಜವಾಬ್ದಾರಿ ನೀಡಿದಲ್ಲಿ ಅದರ ಫಲಿತಾಂಶ ಎಷ್ಟರಮಟ್ಟಿಗಿರುತ್ತದೆಂಬುದನ್ನು ಊಹಿಸಬೇಕಾಗುತ್ತದೆ. ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳೆ ಹೊಣೆಗಾರರಾಗುತ್ತಾರೆ ಎಂದು ಆರೋಪಿಸಿದರು.
ಸ್ಥಾಯಿಸಮಿತಿ ಅಧ್ಯಕ್ಷ ರಾಮಣ್ಣ ಮಾತನಾಡಿ, ನಾವು ತಾಲ್ಲೂಕು ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾದಾಗಿನಿಂದಲೂ ಇಲ್ಲಿಯವರೆಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸಭೆಗೆ ಹಾಜರಾಗಿಲ್ಲ. ಇವರ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ. ಹಿಂದಿನ ಸರ್ಕಾರವಿದ್ದಾಗ ಜಿಪಿಎಸ್ ಆಗಿರುವ ಮನೆಗಳು ಬದಲಾವಣೆಯಾಗುತ್ತವೆ ಎಂಬ ಸುದ್ದಿ ಕೇಳಿ ಬರುತ್ತಿದೆ ಎಂದಾಗ ಶಾಸಕರು ಪ್ರತಿಕ್ರಿಯಿಸಿ, ಜಿಪಿಎಸ್ ಆಗಿರುವ ಮನೆಗಳು ಯಾವುದೇ ಕಾರಣಕ್ಕೂ ಬದಲಾವಣೆಯಾಗುವುದಿಲ್ಲ ಎಂದು ತಿಳಿಸಿದರು.
ಮಿಡಿಗೇಶಿ ಕ್ಷೇತ್ರ ಸದಸ್ಯೆ ಯಶೋಧ ಮಾತನಾಡಿ, ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರವು ಗಡಿಯಲಿದ್ದು ಆಂಬ್ಯೂಲೆನ್ಸ್ ಇಲ್ಲದಿರುವುದು ಜನರಿಗೆ ತುಂಬಾ ಸಮಸ್ಯೆಯಾಗಿದೆ ಎಂದಾಗ, ನಮ್ಮ ತಾಲ್ಲೂಕಿನಲ್ಲಿ ಒಟ್ಟು 4 ಆಂಬ್ಯೂಲೆನ್ಸ್ ಇದ್ದು ಒಂದು ಅಪಘಾತದಿಂದಾಗಿ ಕೇವಲ 3 ಮಾತ್ರ ಕೆಲಸ ನಿರ್ವಹಿಸುತ್ತಿವೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಉತ್ತರ ನೀಡಿದರು. ಸಭೆಯಲ್ಲಿ ತಾಪಂ ಸದಸ್ಯರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
