ಪುರಸಭೆ ಚುನಾವಣೆ: ಚಿ.ನಾ.ಹಳ್ಳಿಯಲ್ಲಿ ಶೇ. 79.78 ರಷ್ಟು ಮತದಾನ

ಚಿಕ್ಕನಾಯಕನಹಳ್ಳಿ
                  ಪಟ್ಟಣದ ಪುರಸಭೆಯ 23 ವಾರ್ಡ್‍ಗಳ ಚುನಾವಣೆಯು ಪೊಲೀಸ್ ಸರ್ಪಗಾವಲಿನಲ್ಲಿ ನಡೆಯಿತು. ಪುರಸಭೆಯ 16 ಮತ್ತು 17ನೇ ವಾರ್ಡ್‍ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯಕರ್ತರೊಂದಿಗೆ ನಡೆದ ಸಣ್ಣಪುಟ್ಟ ಗಲಾಟೆಯಿಂದ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದರು.
                   ಪುರಸಭಾ 23 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಶೇ.79.78 ರಷ್ಟು ಮತದಾನ ನಡೆದಿದ್ದು ಒಟ್ಟು 18639 ಮತಗಳಲ್ಲಿ 14871 ಮತದಾನ ಚಲಾವಣೆಗೊಂಡಿದೆ. ಮಹಿಳೆಯರು 7660 ಹಾಗೂ ಪುರುಷ ಮತದಾರರು 7211 ಮತ ಚಲಾಯಿಸಿದ್ದಾರೆ.
                   ಪಟ್ಟಣದಲ್ಲಿ ತುಂತುರು ಮಳೆ ಬಂದಿದ್ದರಿಂದ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಮತಕೇಂದ್ರದ ಬಳಿ ಇರುವ ತಂಗುದಾಣದ ಬಳಿ ಜೆಡಿಎಸ್ ಮುಖಂಡ ಜಿ.ಪಂ.ಸದಸ್ಯ ಆರ್.ರಾಮಚಂದ್ರಯ್ಯ ಹಾಗೂ ಸ್ನೇಹಿತರು ಆಶ್ರಯ ಪಡೆಯಲು ಹೋದಾಗ ಇದನ್ನು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಲಾಗಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದುದರಿಂದ ಪೊಲೀಸರು ಎರಡು ಗುಂಪುಗಳನ್ನು ಚದುರಿಸಿದರು.
                   ಮತದಾನ ಮಾಡುವ ವೇಳೆ 5ನೇ ವಾರ್ಡ್‍ನಲ್ಲಿ ಮತ ಒತ್ತುವ ಯಂತ್ರದ ಬಿಜೆಪಿಗೆ ಸೇರಿದ ಬಟನ್ ಸ್ಥಗಿತಗೊಂಡಿದ್ದರಿಂದ ಮತದಾನ ಸ್ವಲ್ಪ ಸಮಯ ವಿಳಂಬವಾಯಿತು. ಯಂತ್ರ ಸರಿಪಡಿಸಿದ ನಂತರ ಮತದಾನ ನಡೆಯಿತು. 16ನೇ ವಾರ್ಡ್‍ನಲ್ಲಿ ಮಧ್ಯಾಹ್ನದ ವೇಳೆ ಮತದಾರರು ಮತಕೇಂದ್ರದ ಬಳಿ ತೆರಳುತ್ತಿರುವಾಗ ಅಭ್ಯರ್ಥಿಗಳು ಹಾಗೂ ಅವರ ಕಾರ್ಯಕರ್ತರು ಮತಕೇಂದ್ರದ ಬಳಿ ತೆರಳಿ ಮತಯಾಚಿಸಲು ಮುಂದಾದಾಗ ಪರಸ್ಪರ ಎರಡು ಗುಂಪುಗಳ ನಡುವೆ ವಾಗ್ವಾದ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಸಣ್ಣ ಲಾಠಿ ಪ್ರಹಾರ ಮಾಡಿದರು.
                   ಚುನಾವಣಾ ಮತದಾನ ಚಲಾವಣೆಯ ಪ್ರಕ್ರಿಯೆಯು ಬೆಳಗ್ಗೆ 7 ಗಂಟೆಯಿಂದ ಆರಂಭವಾದರೂ ಮಂದಗತಿಯಲ್ಲಿ ಮತಚಲಾವಣೆ ನಡೆಯಿತು. ಮಧ್ಯಾಹ್ನದ ಹೊತ್ತಿಗೆ ಮತದಾನ ಚುರುಕುಗೊಂಡಿತು. ಮತಗಟ್ಟೆಗೆ ಮತದಾರರು ಲಗ್ಗೆ ಇಟ್ಟು ತಮ್ಮ ಹಕ್ಕು ಚಲಾಯಿಸಲು ಮುಂದಾದಾಗ ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷಗಳಿಗೆ ಮತ ನೀಡುವಂತೆ ಮತದಾರರಲ್ಲಿ ಓಲೈಕೆಗೆ ಮುಂದಾಗಿದ್ದರು.
                    ಮತದಾನ ಪ್ರಕ್ರಿಯೆಗಾಗಿ ಪ್ರತಿ ಮತಿಗಟ್ಟೆಯಲ್ಲಿ ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ಮತದಾನದ ಬಳಿ ನಿಯೋಜಿಸಲಾಗಿತ್ತು. ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದರು. ಚುನಾವಣಾ ಅಭ್ಯರ್ಥಿಗಳು ಮತದಾರರನ್ನು ಮತಕೇಂದ್ರಕ್ಕೆ ಬರುವಾಗ ಹೋಗುವಾ ನಗಮುಖದಿಂದಲೇ ಸ್ವಾಗತಿಸಿ ಅವರನ್ನು ಮತಕೇಂದ್ರವರೆವಿಗೂ ಬಿಟ್ಟುಬರುತ್ತಿದ್ದರು.
ಆಟೋದಲ್ಲಿ ಮತದಾರರನ್ನು ಕರೆತಂದರು : ಮತಕೇಂದ್ರಕ್ಕೂ ಮತದಾರರ ಮನೆಗೂ ಬಹು ದೂರವಿರುವ ಮತದಾರರನ್ನು ಅಭ್ಯರ್ಥಿಗಳು ಆಟೋವನ್ನು ಮತದಾರರ ಮನೆಗೆ ಕಳುಹಿಸಿ ನಮಗೆ ಮತದಾನ ಮಾಡಬೇಕೆಂದು ಮತಕೇಂದ್ರಗಳಿಗೆ ಕರೆತಂದರು. ಮತದಾನ ಮುಗಿದ ನಂತರ ಅವರ ಮನೆಗಳಿಗೆ ಬಿಟ್ಟು ಬರುತ್ತಿದ್ದ ಸಾಮಾನ್ಯ ದೃಶ್ಯ ಕಂಡುಬಂದಿತು.
ಪುರಸಭೆಯ 23ನೇ ವಾರ್ಡ್‍ಗಳಲ್ಲಿ 1ನೇ ವಾರ್ಡ್‍ನಲ್ಲಿ ಶೇ.68.52 ಕಡಿಮೆ ಮತದಾನವಾಗಿದೆ. 6ನೇವಾರ್ಡ್‍ನಲ್ಲಿ 89.76 ರಷ್ಟು ಹೆಚ್ಚು ಮತದಾನವಾಗಿದೆ.

Recent Articles

spot_img

Related Stories

Share via
Copy link