ಬೆಂಗಳೂರು:
ಬಂಧಿಸಿ ವಿಚಾರಣೆ ನಡೆಸಲು ಪೊಲೀಸ್ ಠಾಣೆಗೆ ಕರೆತರುವ ವೇಳೆ ಕೊಲೆ ಆರೋಪಿಯನ್ನು ತೋರಿಸುವುದಾಗಿ ನೆಪ ಹೇಳಿ ಜೀಪಿನಿಂದ ಇಳಿದು ಕಲ್ಲಿನಿಂದ ಹಲ್ಲೆ ನಡೆಸಿ ಓಡಿ ಹೋಗುತ್ತಿದ್ದ ಕುಖ್ಯಾತ ರೌಡಿ ಅರುಣ್‍ಗೆ ಕೆಂಗೇರಿ ಪೊಲೀಸರು ಗುಂಡಿನ ರುಚಿ ತೋರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಗುಂಡು ಎಡಗಾಲಿಗೆ ತಗುಲಿ ಗಾಯಗೊಂಡಿರುವ ಮರಿಯಪ್ಪನಪಾಳ್ಯ ಚಿಕ್ಕಪ್ಪ ಲೇಔಟ್‍ನ ರೌಡಿ ಅರುಣ್ (28) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹುಟ್ಟು ಹಬ್ಬದ ಆಚರಣೆಗೆ ಬಂದಿದ್ದ ಮರಿಯಪ್ಪನಪಾಳ್ಯದ ಪ್ರತಾಪ್ (28)ನನ್ನು ಐದಾರು ಮಂದಿ ಜೊತೆ ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಅರುಣ್, ತನ್ನ ಸಹೋದರ ಕಿರಣ್, ಮಹೇಶ್, ದಿಲೀಪ್ ಜೊತೆ ಜರಗನಹಳ್ಳಿಯಲ್ಲಿರುವ ಕ್ಲಾಸಿಕ್ ಕಂಫರ್ಟ್ ಲಾಡ್ಜ್‍ನಲ್ಲಿರುವುದನ್ನು ಕೆಂಗೇರಿ ಪೆÇಲೀಸ್ ಇನ್ಸ್‍ಪೆಕ್ಟರ್ ರಾಮಪ್ಪ ಗುತ್ತೇರ್ ನೇತೃತ್ವದ ವಿಶೇಷ ತಂಡ ಸೋಮವಾರ ರಾತ್ರಿ ಪತ್ತೆ ಹಚ್ಚಿದೆ.
ಮುಂಜಾನೆ ಲಾಡ್ಜ್ ಮೇಲೆ ದಾಳಿ ನಡೆಸಿ, ಅರುಣ್ ಸೇರಿ ಕಿರಣ್, ಮಹೇಶ್, ದಿಲೀಪ್‍ನನ್ನು ಬಂಧಿಸಿ ಕೆಂಗೇರಿ ಪೆÇಲೀಸ್ ಠಾಣೆಗೆ ಜೀಪ್‍ನಲ್ಲಿ ಕರೆತರುತ್ತಿದ್ದರು. ಮಾರ್ಗಮಧ್ಯೆ ಅರುಣ್, ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ಕೆಂಚನನ್ನು ತೋರಿಸುವುದಾಗಿ ಮಾಹಿತಿ ನೀಡಿದ್ದು ಆದನ್ನು ಆಧರಿಸಿ ಜೀಪಿನಲ್ಲಿ ಹೋಗುತ್ತಿದ್ದಾಗ ಕೆಂಚ ಉಲ್ಲಾಳದ ಚಿಕ್ಕನಹಳ್ಳಿ ಬಳಿ ಇದ್ದು ಆತನನ್ನು ತೋರಿಸುವುದಾಗಿ ಕರೆದೊಯ್ದಿದ್ದಾನೆ.
ಓಡಿ ಗುಂಡೇಟು ತಿಂದ
ಮುಂಜಾನೆ 6.15ರ ವೇಳೆ ಅಲ್ಲಿಗೆ ಹೋಗುತ್ತಿದ್ದಾಗ ಕೆಂಚನಿರುವ ಸ್ಥಳ ಹೇಳಿದ ಕಡೆ ಜೀಪ್ ನಿಲ್ಲಿಸಿ ಕೆಂಚನನ್ನು ತೋರಿಸುವಂತೆ ಇನ್ಸ್‍ಪೆಕ್ಟರ್ ರಾಮಪ್ಪ ಗುತ್ತೇರ್ ಹೇಳಿದಾಗ ಕೆಳಗಿಳಿದ ಅರುಣ್ ತಕ್ಷಣವೇ ಅಲ್ಲಿದ್ದ ಕಲ್ಲನ್ನು ತೆಗೆದುಕೊಂಡು ಪೆÇಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಓಡ ತೊಡಗಿದ್ದಾನೆ.
ಎಚ್ಚರಿಕೆ ನೀಡಿದರೂ ಕಲ್ಲು ಎಸೆಯುತ್ತಾ ತಪ್ಪಿಸಿಕೊಂಡು ಓಡಿಹೋಗುತ್ತಿದ್ದ ಅರುಣ್‍ಗೆ ನಿಲ್ಲುವಂತೆ ಸೂಚಿಸಿ ಗಾಳಿಯಲ್ಲಿ ಸಬ್‍ಇನ್ಸ್‍ಪೆಕ್ಟರ್ ಮಲ್ಲಿಕಾರ್ಜುನ್ ಅವರು ಒಂದು ಸುತ್ತು ಗುಂಡು ಹಾರಿಸಿ, ಶರಣಾಗುವಂತೆ ಸೂಚನೆ ನೀಡಿದರೂ ಓಡುತ್ತಿದ್ದ ಅರುಣ್ ಕಡೆ ಮತ್ತೊಂದು ಗುಂಡು ಹಾರಿಸಿದ್ದಾರೆ.
ಆ ಗುಂಡು ಎಡಗಾಲಿಗೆ ತಗುಲಿ ಅರುಣ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆತನನ್ನು ವಶಕ್ಕೆ ತೆಗೆದುಕೊಂಡ ಪೆÇಲೀಸರು ಆಸ್ಪತ್ರೆಗೆ ದಾಖಲಿಸಿ ಉಳಿದ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕುಖ್ಯಾತಿ ಪಡೆದಿದ್ದ: ರೌಡಿ ಅರುಣ್, ಪ್ರತಾಪ್ ಸೇರಿ ಮೂರು ಕೊಲೆ ಪ್ರಕರಣಗಳು, ಎರಡು ಕೊಲೆ ಯತ್ನ, ಬೆದರಿಕೆ, ಸುಲಿಗೆ ಸೇರಿ, 8 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಜೆಪಿ ನಗರ ಹಾಗೂ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗಳ ರೌಡಿ ಪಟ್ಟಿಯಲ್ಲಿದ್ದಾನೆ.
ಕಳೆದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ರಾತ್ರಿ ಮರಿಯಪ್ಪನಪಾಳ್ಯದ ಚಿಕ್ಕಪ್ಪ ಲೇಔಟ್‍ನ ಮನೆಯಲ್ಲಿ ಅರುಣ್ ತನ್ನ ಮಗನ ಹುಟ್ಟುಹಬ್ಬ ಆಚರಣೆಯನ್ನು ನಡೆಸುತ್ತಿದ್ದ. ಅಲ್ಲಿಗೆ ಪ್ರತಾಪ್, ಕಿರಣ್, ಮಹೇಶ್, ದಿಲೀಪ್, ಕೆಂಚ ಸೇರಿ, ಹಲವು ಮಂದಿ ಸೇರಿದ್ದರು. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಪ್ರತಾಪ್‍ನನ್ನು ಅರುಣ್ ಸೇರಿ ಐವರು ನಡುರಸ್ತೆಗೆ ಎಳೆದುತಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಪತ್ತೆಗೆ ಡಿಸಿಪಿ ರವಿ ಡಿ. ಚನ್ನಣ್ಣನವರ್ ಅವರು ಮೂರು ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದರು.ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸಿ ನಿನ್ನೆ ರಾತ್ರಿ ಅರುಣ್, ಜ್ಞಾನಭಾರತಿಯ ಕಿರಣ್ ಕುಮಾರ್ (26), ಜೆ.ಪಿ. ನಗರದ ಮಹೇಶ್ (28), ರಾಜರಾಜೇಶ್ವರಿ ನಗರದ ದಿಲೀಪ್ (28) ಎಂಬುವವರನ್ನು ಬಂಧಿಸಿ, ವಿಶೇಷ ತಂಡಗಳು ಯಶಸ್ವಿ ಕಾರ್ಯಾಚರಣೆ ನಡೆಸಿವೆ.
![](https://prajapragathi.com/wp-content/uploads/2018/08/40977330-young-police-man-running-chasing-thief-escaping-with-stolen-bag.jpg)