ಪೊಲೀಸ್ ಇಲಾಖೆ ಸುಧಾರಣೆಗೆ ಕ್ರಮ

ದಾವಣಗೆರೆ:

       ಪೊಲೀಸ್ ಇಲಾಖೆಯಲ್ಲಿ ಕೆಲ ಬದಲಾವಣೆ ಹಾಗೂ ಸುಧಾರಣೆ ತರಲು ಕ್ರಮ ವಹಿಸಲಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಗೃಹ ಸಚಿವನಾಗಿ ಆಧಿಕಾರ ವಹಿಸಿಕೊಂಡ ಬಳಿಕ ಪೊಲೀಸ್ ಇಲಾಖೆಯಲ್ಲಿ ಕೆಲ ಮಾರ್ಪಾಡು ತರುವ ಉದ್ದೇಶದಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

        ಸಮಿತಿಯು ವರದಿಯನ್ನು ಸಹ ನೀಡಿದೆ. ಈ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳ ಪೊಲೀಸ್ ಇಲಾಖೆಯಲ್ಲಿನ ಸಕಾರಾತ್ಮಕ ಅಂಶಗಳನ್ನು ಸಹ ತೆಗೆದುಕೊಂಡು, ವ್ಯಾಪಕ ಚರ್ಚೆ ನಡೆಸಿ ವರದಿಯ ಉತ್ತಮ ಶಿಫಾರಸುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

         ಪೊಲೀಸ್ ಹಿರಿಯ ಅಧಿಕಾರಿಗಳನ್ನು ವರ್ಷದೊಳಗೆಯೇ ವರ್ಗಾವಣೆ ಮಾಡುವುದರಿಂದ ಹೊಸ ಜಿಲ್ಲೆಯ ಬಗ್ಗೆ ತಿಳಿದುಕೊಂಡು, ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳನ್ನು ಕನಿಷ್ಠ ಎರಡು ವರ್ಷದ ಬಳಿಕ ವರ್ಗಾವಣೆ ಮಾಡಲು ಕಾನೂನು ರೂಪಿಸಲಾಗುತ್ತಿದೆ ಎಂದರು.

         ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾಕಷ್ಟು ಕಷ್ಟ ಪಡುತ್ತಾರೆ. ಎಲ್ಲರೂ ಹಬ್ಬ ಆಚರಣೆಯಲ್ಲಿ ತೊಡಗಿದರೆ, ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಆದ್ದರಿಂದ ಪೊಲೀಸ್ ಸಿಬ್ಬಂದಿಗಳ ಜೀವನ ಮಟ್ಟ ಸುಧಾರಿಸಲು ಸಹ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

         ಕೆಲವೆಡೆಗಳಲ್ಲಿ ಒಬ್ಬರೇ ಪಿಎಸ್‍ಐಗಳು ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ಚಟುವಟಿಕೆಗಳ ಬಗ್ಗೆ ಕಾರ್ಯನಿರ್ವಹಿಸುತ್ತಿರುವ ಕಾರಣ ಕಾರ್ಯದೊತ್ತಡ ಹೆಚ್ಚಾಗುತ್ತಿದೆ. ಆದ್ದರಿಂದ ಪ್ರತಿ ಪೊಲೀಸ್ ಠಾಣೆಗಳಲ್ಲೂ ಇಬ್ಬರು ಪಿಎಸ್‍ಐ ನೀಡಬೇಕೆಂದು ಚಿಂತನೆ ನಡೆಸಲಾಗಿದೆ ಎಂದರು.

         ಔರಾದಕರ್ ಸಮಿತಿ ವರದಿ ಶಿಫಾರಸುಗಳನ್ನು ಅನುಷ್ಟಾನಕ್ಕೆ ತರಲು ಸರ್ಕಾರ ಬದ್ಧವಾಗಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಔರಾದಕರ್ ಸಮಿತಿ ವರದಿ ಜಾರಿಗೆ ಕುರಿತಂತೆ ಶೀಘ್ರವೇ ಉನ್ನತ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ. ಇಲಾಖೆಯಲ್ಲಿ ಬಡ್ತಿ ಪಡೆದ ನಂತರ ಎಕ್ಸಿಕ್ಯೂಟಿವ್ ಹುದ್ದೆ 4 ವರ್ಷ, ನಾನ್ ಎಕ್ಸಿಕ್ಯೂಟಿವ್ ಹುದ್ದೆಯಲ್ಲಿ 2 ಸೇವೆ ಸಲ್ಲಿಸಬೇಕು. ಇಂತಹ ಸಾಕಷ್ಟು ವಿಚಾರಕ್ಕೆ ಗಮನ ಹರಿಸಿದ್ದೇವೆ ಎಂದು ಹೇಳಿದರು.

        ಪೊಲೀಸ್ ಇಲಾಖೆ ದಾವಣಗೆರೆ ಕಮೀಷನರೇಟ್ ಮಾಡುವ ಬಗ್ಗೆ ಹಿಂದಿನಿಂದಲೂ ಬೇಡಿಕೆ ಇದೆ. ರಾಜ್ಯದ ದೊಡ್ಡ ಮಹಾ ನಗರ ಪಾಲಿಕೆಗಳಲ್ಲಿ ಕಮೀಷನರೇಟ್ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಕಮೀಷನರೇಟ್ ಮಾಡಲು ಕೆಲ ಮಾನದಂಡಗಳಿದ್ದು, ಅವುಗಳನ್ನು ಪರಿಶೀಲಿಸಿ, ಸೂಕ್ತವೆನಿಸಿದ್ದು ಕಂಡು ಬಂದರೆ ದಾವಣಗೆರೆ ಕಮೀಷನರೇಟ್ ಮಾಡಲಾಗುವುದು ಎಂದು ಹೇಳಿದರು.
ಗೃಹ ಸಚಿವನಾಗಿ ತಾವು ಅಧಿಕಾರ ವಹಿಸಿಕೊಂಡ ನಂತರ ಪ್ರತಿ ಜಿಲ್ಲೆ, ವಲಯಕ್ಕೂ ಭೇಟಿ ನೀಡಿ, ಇಲಾಖೆಯನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದೇನೆ. ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ಎಸ್ಪಿ, ಎಎಸ್ಪಿ, ಡಿಎಸ್ಪಿ, ಎಸ್‍ಐಗಳೊಂದಿಗೆ ಸಭೆ ನಡೆಸಿ, ಪರಿಶೀಲನೆ ನಡೆಸಿದ್ದೇನೆ. ಔರಾದಕರ್ ಸಮಿತಿ ವರದಿ ಜಾರಿಗೆ ಸೇರಿದಂತೆ ಸಾಕಷ್ಟು ಬೇಡಿಕೆಗಳೂ ಕೇಳಿ ಬಂದಿವೆ. ಹಂತ ಹಂತವಾಗಿ ಅವುಗಳಿಗೆ ಸ್ಪಂದಿಸುತ್ತೇವೆ ಎಂದರು.

        ಕಳೆದ ವಿಧಾನಸಭೆ ಚುನಾವಣೆಯನ್ನು ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಯನ್ನೂ ಸುಸೂತ್ರವಾಗಿ, ಶಾಂತಿ, ಸುವ್ಯವಸ್ಥಿತವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೇ, ಮಟ್ಕಾ, ಕಳ್ಳತನ, ಹಲ್ಲೆ, ಹತ್ಯೆ, ಅತ್ಯಾಚಾರ, ಕಿಡ್ನಾಪ್, ದರೋಡೆ, ಸುಲಿಗೆ, ಕ್ರಿಕೆಟ್ ಬೆಟ್ಟಿಂಗ್, ಆನ್‍ಲೈನ್ ವಂಚನೆ ಪ್ರಕರಣಕ್ಕೆ ಕಡಿವಾಣ ಹಾಕಲು ಇಲಾಖೆ ಬದ್ಧವಾಗಿದೆ ಎಂದರು.

       ರಾಜ್ಯದಲ್ಲಿ ಹೊಸದಾಗಿ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವುದಷ್ಟೇ ಅಲ್ಲ, ಅಗತ್ಯ ಅಧಿಕಾರಿ, ಸಿಬ್ಬಂದಿಯನ್ನೂ ನೇಮಿಸಬೇಕಿದೆ. ಹೊಸ ಠಾಣೆಗಳನ್ನು ಕೊಡುವುದಿದ್ದರೆ ಹೊಸ ಅಧಿಕಾರಿ, ಸಿಬ್ಬಂದಿ ಸಮೇತವೇ ಕೊಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಆದ್ಯತೆಯ ಮೇಲೆ ಹೊಸದಾಗಿ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಿದ್ದೇವೆ ಎಂದು ಹೇಳಿದರು.

       ದಿನದಿನಕ್ಕೂ ಸೈಬರ್ ಕ್ರೈಂ ಪ್ರಕರಣ ಹೆಚ್ಚುತ್ತಿದ್ದು, ಇನ್ಫೋಸಿಸ್ ಸಂಸ್ಥೆಯ ನಾರಾಯಣಮೂರ್ತಿ ಹಾಗೂ ಸುಧಾ ನಾರಾಯಣಮೂರ್ತಿ ಜೊತೆಗೆ ಸೈಬರ್ ಕ್ರೈಂ ತಡೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಫೇಸ್ ಬುಕ್ ನಮ್ಮ ಮಾತಿಗೆ ಸ್ಪಂದಿಸುತ್ತಿಲ್ಲ. ಟ್ವಿಟರ್, ವಾಟ್ಸಪ್ ಕಂಪನಿಗಳಿಗೆ ಕಿವಿಗೊಡುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ವಿಭಾಗವನ್ನು ಮತ್ತಷ್ಟು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಇನೋಸಿಸ್ ಸಂಸ್ಥೆಯ ತಂತ್ರಜ್ಞರ ನೆರವನ್ನು ಇಲಾಖೆ ಪಡೆಯಲಿದೆ. ಆನ್‍ಲೈನ್ ವಂಚನೆ ತಡೆಯುವುದೂ ನಮ್ಮ ಗುರಿ. 22 ಕೋಟಿ ವೆಚ್ಚದಲ್ಲಿ 5 ವರ್ಷ ಕಾಲ ಇನ್ಫೋೀಸಿಸ್ ಸಂಸ್ಥೆಯವರೇ ತರಬೇತಿ ನೀಡಿ, ನಿರ್ವಹಣೆ ಮಾಡಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ಎಸ್ಪಿ ಆರ್.ಚೇತನ್, ಶಿವಮೊಗ್ಗ ಎಸ್ಪಿ ಡಾ.ಎಂ.ಅಶ್ವಿನಿ, ಚಿತ್ರದುರ್ಗ ಎಸ್ಪಿ ಡಾ.ಕೆ.ಅರುಣ, ಹಾವೇರಿ ಎಸ್ಪಿ ಕೆ.ಪರಶುರಾಮ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap