ಕೊರಟಗೆರೆ:-
ಕ್ಷೇತ್ರದ ಅಭಿವೃದ್ದಿಗೆ ಆಯವ್ಯಯ ಮಂಡನೆಗೆ ಯಾವ ಅಧಿಕಾರಿಗಳು ನನ್ನ ಬಳಿ ಬಂದಿದ್ದೀರಾ!! ಡಿಸಿಎಂ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸರಕಾರಿ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವೇ… ಸರ್ಕಾರಿ ಸೌಲಭ್ಯಗಳ ಅನುಷ್ಠಾನಕ್ಕೆ ಅಸಡ್ಡೆ ಏಕೆ? ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಈ ಪರಮೇಶ್ವರ್ ಅಧಿಕಾರಿಗಳ ವಿರುದ್ದ ಗುಡುಗಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಸರಕಾರಿ ಇಲಾಖೆಗಳ ಪ್ರಗತಿ ಪರಿಶೀಲನಾ ಪ್ರಥಮ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸರಕಾರ ರಚನೆಯಾಗಿ 100ದಿನ ಕಳೆದಿದೆ ಯಾರಾದರೂ ನನ್ನ ಕ್ಷೇತ್ರದ ಸಮಸ್ಯೆಯ ಬಗ್ಗೆ ನನ್ನ ಬಳಿ ಬಂದು ತಿಳಿಸಿದ್ದೀರಾ.. ಜನರ ಕೆಲಸ ಮಾಡುವ ಆಸಕ್ತಿ ಇದ್ದರೇ ಮಾತ್ರ ನನ್ನ ಕ್ಷೇತ್ರದಲ್ಲಿ ಇರಬೇಕು.. ಇಲ್ಲವಾದರೇ ನಿಮಗೆ ಬೇಕಾದ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ, ನನಗೇನು ಬೇಜರಿಲ್ಲ. ರೀ ತಹಶೀಲ್ದಾರ್ ಇನ್ನೂ ಮುಂದೆ ನನಗೆ ಸಾರ್ವಜನಿಕರಿಂದ ನನಗೆ ಯಾವುದೇ ದೂರು ಬರಬಾರದು. ಅಬಕಾರಿ ಅಧಿಕಾರಿ ಪ್ರತಿದಿನ ಗ್ರಾಮೀಣ ಪ್ರದೇಶಕ್ಕೆ ಬೇಟಿ ನೀಡಿ ಅಕ್ರಮಮಧ್ಯ ಮಾರಾಟ ನೀಲ್ಲಿಸಿ ಎಂದು ಖಚಕ್ ಆದೇಶ ಮಾಡಿದರು.
ಕ್ಷೇತ್ರದ ಅಭಿವೃದ್ದಿಗೆ ಅನುಧಾನ ನೀಡಲು ರಾಜಕೀಯ ಮುಖಂಡರಿಂದ ನಾನು ಮಾಹಿತಿ ಕಲೆಹಾಕಬೇಕೆ. ಸರಕಾರಿ ಅಧಿಕಾರಿಗಳು ಏನು ಮಾಡುತ್ತೀದ್ದಿರಾ ಎಂಬುದೇ ನನಗೆ ತಿಳಿಯುತ್ತೀಲ್ಲ. ಅಧಿಕಾರಿ ವರ್ಗ ತಾಲೂಕು ಕೇಂದ್ರದಲ್ಲಿಯೇ ವಾಸ ಮಾಡಬೇಕು. ಬೆಂಗಳೂರು ಮತ್ತು ತುಮಕೂರು ನಗರದಿಂದ ಬರುವ ಅಧಿಕಾರಿಗಳಿಂದ ನಮ್ಮ ಕ್ಷೇತ್ರದ ಅಭಿವೃದ್ದಿ ಕೆಲಸ ಆಗುವುದಿಲ್ಲ. ಶುದ್ದ ಕುಡಿಯುವ ನೀರಿನ ಘಟಕದ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ. ಕ್ಷೇತ್ರಕ್ಕೆ ಬಂದಿರುವ 5500ಸಾವಿರ ಮನೆ ಹಂಚಿಕೆ ಮತ್ತು ಪ್ರಗತಿಯ ಬಗ್ಗೆ ಅಂಕಿಅಂಶ ಕೆಲೆಹಾಕಬೇಕು ಎಂದು ಇಓಗೆ ಸೂಚನೆ ನೀಡಿದರು.
ಅಧಿಕಾರಿಗಳ ವಿರುದ್ದ ಕೆಂಡಕಾರಿದ ಡಿಸಿಎಂ: ಕ್ಷೇತ್ರದ ಅಭಿವೃದ್ದಿಯ ಅಂಕಿಅಂಶ ಮತ್ತು ಪ್ರಗತಿಯ ಮಾಹಿತಿ ನೀಡದ ತಹಶೀಲ್ದಾರ್, ತಾಪಂ ಇಓ, ಬಿಇಓ, ಕೃಷಿ, ಸಿಡಿಪಿಓ, ಆಹಾರ, ಪಶು, ರೇಷ್ಮೆ, ನೀರಾವರಿ, ಬೆಸ್ಕಾಂ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ದ ಸಭೆಯಲ್ಲಿ ಕೆಂಡಕಾರಿದರು. ನನಗೆ ನಿಮ್ಮ ಕಾರಣ ಬೇಕಿಲ್ಲ. ನನ್ನ ಕ್ಷೇತ್ರ ಶೇ.100ರಷ್ಟು ಅಭಿವೃದ್ದಿ ಆಗಬೇಕು. ಅದಕ್ಕೆ ಬೇಕಾದ ಪೂರಕವಾದ ಕ್ರಮ ಕೈಗೊಳ್ಳಿ. ಇಲ್ಲವಾದರೇ ಪರಿಣಾಮ ಎದುರಿಸಲು ಸಿದ್ದರಾಗಿ ಎಂದು ಎಚ್ಚರಿಕೆ ನೀಡಿದರು.
ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ: ಡಿಸಿಎಂ ಬರುವ ಸಭೆಗೆ ಸರಕಾರಿ ಅಧಿಕಾರಿಗಳು ಗೈರಾದರೇ ಇನ್ನೂ ಇಲಾಖೆಯಲ್ಲಿ ಅವರು ಹೇಗೆ ಕೆಲಸ ಮಾಡುತ್ತೀದ್ದಾರೆ ಎಂಬುದು ಇದರಿಂದಲೇ ತಿಳಿಯುತ್ತದೆ. ಕೊರಟಗೆರೆ ಕ್ಷೇತ್ರಕ್ಕೆ ಒಳಪಡುವ ತುಮಕೂರು ಮತ್ತು ಮಧುಗಿರಿ ಅಧಿಕಾರಿಗಳು ಸಭೆಗೆ ಬರಬೇಕು. ಇಂದು ಸಭೆಗೆ ಗೈರಾದ ಅಧಿಕಾರಿಗಳಿಗೆ ಈಗ ಕಾರಣ ಕೇಳಿ ನೊಟೀಸ್ ಜಾರಿ ಮಾಡಿ. ಮುಂದಿನ ಸಭೆಯಲ್ಲಿ ಗೈರಾದ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಡಿಸಿಗೆ ಡಿಸಿಎಂ ಆದೇಶ ಮಾಡಿದರು.
ಸಂಸದ ಮುದ್ದಹನುಮೇಗೌಡ ಮಾತನಾಡಿ ಡಿಸಿಎಂ ಕ್ಷೇತ್ರದಲ್ಲಿ ಕೆಲಸ ಮಾಡುವ ಅಧಿಕಾರಿ ವರ್ಗ ಎಚ್ಚರಿಕೆಯಿಂದ ಇರಬೇಕು. ಬರಗಾಲದಿಂದ ರೈತರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಂದಾಯ ಮತ್ತು ಕೃಷಿ ಇಲಾಖೆ ಬರಪರಿಸ್ಥಿತಿ ಎದುರಿಸಲು ಸಿದ್ದರಾಗಿ. ಡಿಸಿಎಂ ಕ್ಷೇತ್ರದ ಅಭಿವೃದ್ದಿಗೆ ರಾಜ್ಯ ಸರಕಾರದಿಂದ ಸಾಕಷ್ಟು ಅನುಧಾನ ಹರಿದು ಬರಲಿದೆ. ಅಧಿಕಾರಿ ವರ್ಗ ಕೊರಟಗೆರೆಯನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾರ್ಪಾಡು ಮಾಡಬೇಕು. ಕ್ಷೇತ್ರದಲ್ಲಿ ಯಾರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲವೂ ಅವರು ನಮಗೆ ಬೇಡ ಎಂದು ಖಡಕ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಮಾತನಾಡಿ ಕೊರಟಗೆರೆ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಸರಕಾರಿ ಅಧಿಕಾರಿಗಳಿಂದ ಅತಿಹೆಚ್ಚಿನ ನೀರಿಕ್ಷೆಯನ್ನು ಮಾಡಲಾಗಿದೆ. ನಾನೇ ಖುದ್ದಾಗಿ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಪ್ರತಿ ತಿಂಗಳು ಮಾಹಿತಿ ಕಲೆಹಾಕುತ್ತೇನೆ. ಅಧಿಕಾರಿ ವರ್ಗ ಬರಗಾಲದ ತಿರ್ವತೆಯನ್ನು ಅರಿತು ಕ್ಷೇತ್ರಕ್ಕೆ ಬೇಕಾದ ಅನುಧಾನದ ಬಗ್ಗೆ ತಕ್ಷಣ ಮಾಹಿತಿ ನೀಡಿ ಎಂದು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಅನ್ನಿಸ್ ಕಣ್ಮಯಿಜಾಯ್, ಎಸ್‍ಪಿ ಡಾ.ರೂಪದೇವಿ, ತಾಪಂ ಅಧ್ಯಕ್ಷ ಕೆಂಪರಾಮಯ್ಯ, ಎಸಿ ವೆಂಕಟೇಶಯ್ಯ, ತಹಶೀಲ್ದಾರ್ ನಾಗರಾಜು, ಬಿಇಓ ಚಂದ್ರಶೇಖರ್, ಕೃಷಿ ಅಧಿಕಾರಿ ನೂರ್‍ಆಜಾಂ, ಪಿಡ್ಲ್ಯೂಡಿ ಜಗದೀಶ್, ಬೆಸ್ಕಾಂ ಎಇಇ ನಾಗರಾಜು, ಸಿಪಿಐ ಮುನಿರಾಜು ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/18-sep-koratagere-dcm-meeting-photo..gif)