ಪ್ರಜಾಪ್ರಗತಿ ಕೊಡಗು ಸಂತ್ರಸ್ತರ ಪರಿಹಾರ ನಿಧಿ

ತುಮಕೂರು

  ಕಂಡು ಕೇಳರಿಯದ ಪ್ರಕೃತಿ ವಿಕೋಪಕ್ಕೆ ಸಿಲುಕಿ ಕೊಡಗು ನಲುಗಿಹೋಗಿದೆ. ಭೀಕರ ಜಲಪ್ರಳಯದಿಂದಾಗಿ ಆಗಿರುವ ಆಸ್ತಿ-ಪಾಸ್ತಿ ನಷ್ಟವನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಪ್ರವಾಹಕ್ಕೆ ಸಿಲುಕಿ ನರಳಿರುವ, ನರಕಯಾತನೆ ಅನುಭವಿಸುತ್ತಿರುವ ದೃಶ್ಯಗಳನ್ನು ನೋಡಿದರೆ ಕರುಳು ಚುರುಕ್ ಎನ್ನದೆ ಇರಲಾರದು. ಅಂತಹ ಭಯಾನಕ ಮತ್ತು ಆತಂಕದ ವಾತಾವರಣ ಅಲ್ಲಿ ಸೃಷ್ಟಿಯಾಗಿದೆ. ಪ್ರಕೃತಿಯ ಪ್ರಚಂಡ ಹೊಡೆತದಿಂದ ಪಾರಾಗಲು ಅಲ್ಲಿ ಇನ್ನೆಷ್ಟು ದಿನಗಳು ಬೇಕಾಗಬಹುದೋ..?

 

ಕೊಡಗು ಮತ್ತು ಕೇರಳದ ಭೀಕರ ಜಲಪ್ರಳಯ ವಿಶ್ವದಲ್ಲೇ ದಾಖಲೆಯಾಗಿದೆ. ರಕ್ಷಣಾ ಕಾರ್ಯಗಳು ಚುರುಕಾಗಿವೆ. ಇಡೀ ರಾಜ್ಯ ಸಂತ್ರಸ್ಥರಿಗೆ ಸ್ಪಂದಿಸುತ್ತಿದೆ. ಕಳೆದ ಎರಡು ದಿನಗಳಿಂದ ಪ್ರಜಾಪ್ರಗತಿ ಪತ್ರಿಕಾಲಯಕ್ಕೆ ಮತ್ತು ಪ್ರಗತಿ ಟಿವಿ ಕಾರ್ಯಾಲಯಕ್ಕೆ ಜಿಲ್ಲೆಯ ಹಲವು ಕಡೆಗಳಿಂದ ದೂರವಾಣಿ ಕರೆಗಳು ಬರುತ್ತಲೇ ಇವೆ. ಸಾಮಗ್ರಿಗಳನ್ನು ನೀಡುವವರಿಗೆ ಈಗಾಗಲೇ ಮಾರ್ಗದರ್ಶನ ನೀಡಲಾಗಿದೆ. ಕೊಡಗು ಜಿಲ್ಲೆಯ ಬಹುಭಾಗವನ್ನು ಪುನರ್‍ನಿರ್ಮಾಣ ಮಾಡುವ ಪರಿಸ್ಥಿತಿ ಬಂದೊದಗಿದೆ. ಇದಕ್ಕಾಗಿ ಅಪಾರ ಪ್ರಮಾಣದ ಆರ್ಥಿಕ ನೆರವು ಬೇಕಾಗಿದೆ. ಸರ್ಕಾರವು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಸರ್ಕಾರದ ಜೊತೆಗೆ ಸಾರ್ವಜನಿಕರ ಸಹಾಯವು ಅಗತ್ಯ ಮತ್ತು ಅನಿವಾರ್ಯವೂ ಆಗಿದೆ.

  ಕೊಡಗು ಸಂತ್ರಸ್ತರಿಗೆ ಆರ್ಥಿಕವಾಗಿ ಪರಿಹಾರ ನೀಡುವವರಿಗಾಗಿ ಪ್ರಜಾಪ್ರಗತಿ ಮತ್ತು ಪ್ರಗತಿ ಟಿವಿಯು ಪ್ರಜಾಪ್ರಗತಿ ಕೊಡಗು ಸಂತ್ರಸ್ತರ ಪರಿಹಾರ ನಿಧಿಯನ್ನು ಸ್ಥಾಪಿಸಿದೆ. ತುಮಕೂರು ನಗರ, ಜಿಲ್ಲೆಯ ಸಹೃದಯ ನಾಗರಿಕ ಬಂಧುಗಳು ಸಂತ್ರಸ್ತರ ಈ ಕೆಳಕಂಡ ಖಾತೆಗೆ ನೇರವಾಗಿ ಹಣ ಜಮೆ ಮಾಡಬಹುದು. ಇದಕ್ಕಾಗಿ ಪ್ರಜಾಪ್ರಗತಿಯು ಆರಂಭಿಕ ಹಣವಾಗಿ 25 ಸಾವಿರ ರೂಗಳ ನೆರವು ಮೂಲಕ ಪ್ರತ್ಯೇಕ ಖಾತೆ ತೆರೆದಿದೆ. ಚೆಕ್ ಮೂಲಕ, ಆನ್‍ಲೈನ್ ಮೂಲಕವೂ ಪರಿಹಾರ ನಿಧಿಗೆ ಹಣ ಕಳುಹಿಸಬಹುದು. ಆನ್‍ಲೈನ್ ಮೂಲಕ ಹಣ ಪಾವತಿಸುವವರು ತಮ್ಮ ಹೆಸರು, ಊರು ಹಾಗೂ ಮೊಬೈಲ್ ಸಂಖ್ಯೆಯನ್ನು ಮೆಸೇಜ್ ಕಾಲಂನಲ್ಲಿ ಕಳುಹಿಸಬೇಕು. 1 ಸಾವಿರ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ನೀಡಿದವರ ಹೆಸರನ್ನು ಪ್ರತಿದಿನ ಪತ್ರಿಕೆಯಲ್ಲಿ ಮತ್ತು ಟಿವಿಯಲ್ಲಿ ಪ್ರಕಟಿಸಲಾಗುವುದು. ಸಂಗ್ರಹಿಸುವ ಅಷ್ಟೂ ಮೊತ್ತವನ್ನು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿಕೊಡಲಾಗುವುದು. ಈ ಹಿಂದೆಯೂ ಪ್ರಜಾಪ್ರಗತಿಯು ಪ್ರಕೃತಿ ವಿಕೋಪ ಸಂತ್ರಸ್ಥರ ಪರಿಹಾರ ನಿಧಿ ಸ್ಥಾಪಿಸಿದಾಗ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಮೂರ್ನಾಲ್ಕು ಬಾರಿ ರಾಜ್ಯ ಹಾಗೂ ರಾಷ್ಟ್ರ ಸಂಕಷ್ಟದಲ್ಲಿದ್ದಾಗ ಪ್ರಜಾಪ್ರಗತಿ ದೇಣಿಗೆ ನಿಧಿ ಸ್ಥಾಪಿಸಿ ಆ ಖಾತೆಗೆ ಜಮೆಯಾದ ಹಣವನ್ನು ಜಿಲ್ಲಾಡಳಿತದ ಮೂಲಕ ಕಳುಹಿಸಿಕೊಡಲಾಗಿತ್ತು. ಈ ಬಾರಿಯೂ ಸಂತ್ರಸ್ತರ ನಿಧಿ ಆರಂಭಿಸಿದ್ದು, ನಾಗರಿಕರು, ಸಹೃದಯ ಬಂಧುಗಳು ತಮ್ಮ ಶಕ್ತಿಯಾನುಸಾರ ಆರ್ಥಿಕ ನೆರವು ನೀಡುವ ಮೂಲಕ ಈ ಒಂದು ಸಾಮಾಜಿಕ ಮಹತ್ಕಾರ್ಯದಲ್ಲಿ ತಾವೂ ಭಾಗಿಯಾಗಬೇಕೆಂದು ಮನವಿ.

Recent Articles

spot_img

Related Stories

Share via
Copy link
Powered by Social Snap