ಪ್ರತಿಭಟನೆ ಕೈಬಿಡಲು ಜಪಾನ್‌ನಿಂದ ಸಿಎಂ ಮನವಿ : ಭರವಸೆ ಸಾಲದು, ಆದೇಶ ಬೇಕು : ಫ್ರೀಡಂ ಪಾರ್ಕ್ನಿಂದ ಕದಲುವುದಿಲ್ಲ

15 ಸಾವಿರ ಗೌರವಧನಕ್ಕೆ ಪಟ್ಟು | 18 ಮಂದಿ ಅಸ್ವಸ್ಥ | 2,550ಕ್ಕೂ ಹೆಚ್ಚು ಕಾರ್ಯಕರ್ತೆಯರಿಗೆ ಆರೋಗ್ಯ ಸಮಸ್ಯೆ 

ಬೆಂಗಳೂರು: ಗೌರವಯುತ ಜೀವನಕ್ಕೆ ನ್ಯಾಯಯುತ ಗೌರವಧನ, ದುಡಿಮೆಗೆ ತಕ್ಕ ಮೌಲ್ಯ ಹಾಗೂ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಆಗಮಿಸಿರುವ ಸಾವಿರಾರು ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಹೋರಾಟ ಎಂಟನೇ ದಿನಕ್ಕೆ ಕಾಲಿಟ್ಟಿದೆ. ನಗರದ ಫ್ರೀಡಂ ಪಾರ್ಕ್ನಲ್ಲಿ ಹಗಲು-ರಾತ್ರಿ ಧರಣಿ ನಡೆಸುತ್ತಿರುವ ಕಾರ್ಯಕರ್ತೆಯರು, ಸರ್ಕಾರದಿಂದ ಸ್ಪಷ್ಟ ಆದೇಶ ಹೊರಬೀಳುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಮಾಸಿಕ ಗೌರವಧನವನ್ನು 15 ಸಾವಿರ ರೂ.ಗಳಿಗೆ ನಿಗದಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವೆಂಬರ್ 17ರಿಂದ ಆರಂಭಿಸಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ನಿನ್ನೆ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ್ದ ಕಾರ್ಯಕರ್ತೆಯರು, ಇಂದು ಕೂಡ ವಿನೂತನ ರೀತಿಯಲ್ಲಿ ಹೋರಾಟ ಮುಂದುವರಿಸಲು ಸಜ್ಜಾಗಿದ್ದಾರೆ. ಸರ್ಕಾರದೊಂದಿಗೆ ನಡೆದ ಮೂರು ಸುತ್ತಿನ ಮಾತುಕತೆಗಳು ಫಲ ನೀಡದ ಹಿನ್ನೆಲೆಯಲ್ಲಿ ಧರಣಿಯನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ್ದಾರೆ.

ಅನಾರೋಗ್ಯದ ನಡುವೆಯೂ ಅಚಲ ಹೋರಾಟ
ಮೈಕೊರೆಯುವ ಚಳಿ, ನಿರಂತರ ಧರಣಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಆಶಾ ಕಾರ್ಯಕರ್ತೆಯರು ಹೋರಾಟ ಮುಂದುವರಿಸಿದ್ದಾರೆ. ಪ್ರತಿಭಟನೆಯ ಅವಧಿಯಲ್ಲಿ ಈವರೆಗೆ 18 ಕಾರ್ಯಕರ್ತೆಯರು ಅಸ್ವಸ್ಥರಾಗಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

ಹೊಟ್ಟೆನೋವು, ರಕ್ತದೊತ್ತಡ, ಮಧುಮೇಹ, ಮೈಕೈ ನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. 2,550ಕ್ಕೂ ಹೆಚ್ಚು ಕಾರ್ಯಕರ್ತೆಯರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬ ಆತಂಕವೂ ವ್ಯಕ್ತವಾಗಿದೆ.

ನಮ್ಮಣ್ಣ ಬರುತ್ತಾರೆ ಎಂದು ಕಾಯುತ್ತಿದ್ದೇವೆ. ಆದರೆ, ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಎಂಟು ದಿನಗಳಿಂದ ನಾವು ಬೀದಿಯಲ್ಲಿ ಕುಳಿತಿದ್ದೇವೆ. ನಮ್ಮನ್ನು ತಂಗಿಯAದಿರು ಎಂದು ಕರೆಯುವ ಮುಖ್ಯಮಂತ್ರಿಯವರು, ತಮ್ಮ ಮನೆಯ ಹೆಣ್ಣುಮಕ್ಕಳು ಇದೇ ಪರಿಸ್ಥಿತಿಯಲ್ಲಿದ್ದರೆ ಸುಮ್ಮನಿರುತ್ತಿದ್ದರೇ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ನಾವು ಯಾರ ಬಳಿಯೂ ಭಿಕ್ಷೆ ಕೇಳುತ್ತಿಲ್ಲ. ಗೌರವದಿಂದ ಬದುಕುವ ಹಕ್ಕನ್ನು ಕೇಳುತ್ತಿದ್ದೇವೆ. ಐದು ಸಾವಿರ ರೂಪಾಯಿಗಳಲ್ಲಿ ಇಂದಿನ ಬೆಲೆ ಏರಿಕೆಯ ನಡುವೆ ಜೀವನ ನಡೆಸುವುದು ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋರಾಟಕ್ಕೆ ಅಂಗನವಾಡಿ ನೌಕರರ ಬೆಂಬಲ
ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘ ಬೆಂಬಲ ವ್ಯಕ್ತಪಡಿಸಿದೆ. ಎಲ್ಲ ದುಡಿಯುವ ಮಹಿಳೆಯರ ಸಮಸ್ಯೆಗಳನ್ನು ಸರ್ಕಾರ ಸಮಾನವಾಗಿ ಪರಿಗಣಿಸಿ ಪರಿಹರಿಸಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಉಮಾಮಣಿ ಒತ್ತಾಯಿಸಿದ್ದಾರೆ.

ನಟ ಮುಖ್ಯಮಂತ್ರಿ ಚಂದ್ರು ಕೂಡ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಹಿಂದಿನ ಭರವಸೆಗಳನ್ನು ಈಡೇರಿಸದಿರುವುದಕ್ಕೆ ಕ್ಷಮೆ ಕೇಳಿ ಬೇಡಿಕೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಬೆಂಗಳೂರು ಹಬ್ಬಕ್ಕೆ 20 ಕೋಟಿ ರೂ. ಮೀಸಲಿಟ್ಟ ಸರ್ಕಾರ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಹಣವಿಲ್ಲವೆಂದು ಹೇಳುವುದು ಸರಿಯಲ್ಲ ಎಂದು ಪ್ರಶ್ನಿಸಿದ್ದಾರೆ.

ಒಂದೆಡೆ ಮುಖ್ಯಮಂತ್ರಿಯವರ ಭರವಸೆ, ಮತ್ತೊಂದೆಡೆ ಕಾರ್ಯಕರ್ತೆಯರ ಅಚಲ ಹೋರಾಟ?ಇವೆರಡರ ನಡುವೆ ಬಿಕ್ಕಟ್ಟು ಮುಂದುವರಿದಿದೆ. ಪ್ರತಿಭಟನಾಕಾರರ ಆರೋಗ್ಯದ ಸ್ಥಿತಿ ಗಂಭೀರವಾಗುವ ಮುನ್ನ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡು ಸಮಸ್ಯೆಗೆ ಪರಿಹಾರ ನೀಡಬೇಕೆಂಬ ಒತ್ತಾಯ ತೀವ್ರಗೊಂಡಿದೆ.

ಜಪಾನ್‌ನಿಂದ ಸಿಎಂ ವಿಡಿಯೋ ಕರೆ

ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಮುಖಂಡರೊAದಿಗೆ ವಿಡಿಯೋ ಕರೆ ಮೂಲಕ ಮಾತನಾಡಿ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.

ಆಶಾ ಕಾರ್ಯಕರ್ತೆಯರ ಬಗ್ಗೆ ವಿಶೇಷ ಕಾಳಜಿಯಿದೆ. ನಿಮ್ಮ ಸಮಸ್ಯೆಗಳನ್ನು ಖಂಡಿತ ಪರಿಹರಿಸುತ್ತೇವೆ. ನನ್ನ ಮೇಲೆ ನಂಬಿಕೆ ಇಡಿ, ಪ್ರತಿಭಟನೆಯನ್ನು ಕೈಬಿಡಿ ಎಂದು ಮನವಿ ಮಾಡಿದ್ದಾರೆ. ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದ್ದಾರೆ.

ಆದರೆ, ಮುಖ್ಯಮಂತ್ರಿಯವರು ಖುದ್ದಾಗಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಬೇಡಿಕೆ ಈಡೇರಿಸುವ ಕುರಿತು ಸ್ಪಷ್ಟ ಆದೇಶ ಹೊರಡಿಸುವವರೆಗೂ ಧರಣಿ ಮುಂದುವರಿಸುವುದಾಗಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಸ್ಪಷ್ಟಪಡಿಸಿದೆ.

Recent Articles

spot_img

Related Stories

Share via
Copy link