ನವದೆಹಲಿ:
ಕೇರಳ, ಕರ್ನಾಟಕದ ಕೊಡಗು ಸೇರಿದಂತೆ ದೇಶದ ವಿವಿಧೆಡೆ ಪ್ರವಾಹದಿಂದ ಸಂತ್ರಸ್ತರಾದ ಜನರ ಜೊತೆ ಇಡೀ ದೇಶ ನಿಂತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಆಕಾಶವಾಣಿಯಲ್ಲಿಂದು ಪ್ರಸಾರವಾದ ಮನ್ ಕೀ ಬಾತ್ ಕಾರ್ಯಕ್ರಮದ 47ನೇ ಆವೃತ್ತಿಯಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಪ್ರಧಾನಿ ಅವರು, ಕೇರಳದಲ್ಲಿ ಇತ್ತೀಗೆ ಸಂಭವಿಸಿದ ಪ್ರವಾಹದಿಂದಾಗಿ ಸಂತ್ರಸ್ತಗೊಂಡಿರುವ ಕುಟುಂಬಗಳ ಬಗ್ಗೆ ಇಡೀ ರಾಷ್ಟ್ರದ ಜನತೆಯ ಸಹಾನುಭೂತಿಯಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸಶಸ್ತ್ರ ಪಡೆಗಳ ಕೊಡಗೆ ಅನನ್ಯ ಎಂದು ಹೇಳಿದ್ದಾರೆ. ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಿದ ನರೇಂದ್ರ ಮೋದಿ ಅವರು, ಆಗಸ್ಟ್ 16ರಂದು ವಾಜಪೇಯಿ ಅವರು ನಿಧನರಾದಾಗ ಇಡೀ ದೇಶದಲ್ಲಿ ಶೋಕ ಭಾವನೆ ಉಕ್ಕಿ ಹರಿಯಿತು. ಅದು ಅವರ ವಿಶಾಲ ವ್ಯಕ್ತಿತ್ವವನ್ನು ತೋರಿಸುತ್ತದೆ. ಉತ್ತಮ ಆಡಳಿತವನ್ನು ಮುಖ್ಯವಾಹಿನಿಗೆ ತಂದಿರುವ ಬಗ್ಗೆ ದೇಶ ಎಂದಿಗೂ ಅಟಲ್ ಜೀ ಅವರಿಗೆ ಕೃತಜ್ಞವಾಗಿರುತ್ತದೆ ಎಂದು ಹೇಳಿದ್ದಾರೆ. ಕೃಷ್ಣರಾಜಸಾಗರ ಜಲಾಶಯ ನಿರ್ಮಿಸಿದ ಭಾರತ ರತ್ನ ಡಾ|| ಸರ್. ಎಂ.ವಿಶ್ವೇಶ್ವರಯ್ಯ ಅವರನ್ನೂ ಸ್ಮರಿಸಿದ ಪ್ರಧಾನಿ ಅವರು, ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಪರಿಣಾಮದಿಂದ ಲಕ್ಷಾಂತರ ರೈತರು ಹಾಗೂ ಜನಸಾಮನ್ಯರು ಅಣೆಕಟ್ಟೆಯ ಪ್ರಯೋಜನ ಪಡೆಯುವಂತಾಗಿದೆ.
ಸೆಪ್ಟೆಂಬರ್ 15ರ ಇಂಜಿನೀಯಸ್ರ್ರ ದಿನದಂದು ಅವರನ್ನು ವಿಶೇಷವಾಗಿ ಸ್ಮರಿಸಬೇಕಾಗಿದೆ ಎಂದು ಹೇಳಿದ್ದಾರೆ. ಮಹಿಳೆಯರಿಗಾಗುವ ಯಾವುದೇ ರೀತಿಯ ಅನ್ಯಾಯವನ್ನು ಯಾವುದೇ ಸಮಾಜ ಸಹಿಸುವುದಿಲ್ಲ, ಅಪರಾಧ ಕಾಯ್ದೆ ತಿದ್ದುಪಡಿ ಮಸೂದೆ ಮಂಡಿಸುವುದರ ಮೂಲಕ ಸಂಸತ್ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಅತ್ಯಾಚಾರ ಪ್ರಕರಣಗಳ ತಪ್ಪಿತಸ್ಥರಿಗೆ ಕನಿಷ್ಠ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ 12 ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣದ ತಪ್ಪಿತಸ್ಥರಿಗೆ ಗಲ್ಲುಶಿಕ್ಷೆ ವಿಧಿಸುವ ಅಂಶಗಳನ್ನು ಮಸೂದೆ ಒಳಗೊಂಡಿದೆ. ಸಾಮಾಜಿಕ ನ್ಯಾಯ ಒದಗಿಸಲು ಇಡೀ ದೇಶ ಮುಸ್ಲಿಂ ಮಹಿಳೆಯರ ಜೊತೆ ನಿಂತಿದೆ ಎಂದು ಪ್ರಧಾನಮಂತ್ರಿ ಆಶ್ವಾಸನೆ ನೀಡಿದರು. ಸಂಸ್ಕೃತ ದಿನವಾದ ಇಂದು ಈ ಭಾಷೆ, ಉದಾತ್ತ ಪರಂಪರೆಯನ್ನು ಉಳಿಸಿ ಬೆಳೆಸುವ ಮತ್ತು ಜನ ಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿರುವ ಎಲ್ಲರನ್ನು ಅಭಿನಂದಿಸಿದ ನರೇಂದ್ರ ಮೋದಿ, ಸಂಸ್ಕೃತ ಭಾಷೆ ವೇದ ಕಾಲದಿಂದಲೂ ಜ್ಞಾನವೃದ್ಧಿಗೆ ಹೆಸರಾಗಿದೆ ಕರ್ನಾಟಕ ಶಿವಮೊಗ್ಗ ಜಿಲ್ಲೆಯ ಹೊಸಳ್ಳಿ ಮತ್ತೂರು ಗ್ರಾಮಸ್ಥರು ಇಂದಿಗೂ ಮಾತನಾಡಲು ಸಂಸ್ಕೃತ ಭಾಷೆ ಬಳಸುವುದು ಕೇಳಿ ಹರ್ಷವಾಗುತ್ತಿದೆ ಎಂದು ಪ್ರಧಾನಿ ನುಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ