ಪ್ರೇಕ್ಷಕರ ಅಭಿರುಚಿ ರೂಪಿಸುವ ಪ್ರಯೋಗ ನಡೆಯಲಿ

ದಾವಣಗೆರೆ:

ಜಾಗತೀಕರಣದ ಸಂದರ್ಭದಲ್ಲಿ ರಂಗ ತಂಡಗಳು ಮತ್ತಷ್ಟು ಕ್ರಿಯಾಶೀಲವಾಗವು ಮೂಲಕ ಪ್ರೇಕ್ಷಕರ ಅಭಿರುಚಿಯನ್ನು ರೂಪಿಸುವ ನಿಟ್ಟಿನಲ್ಲಿ ಹೊಸ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಸಲಹೆ ನೀಡಿದರು.
ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಗುರುವಾರ ಸಂಜೆ ಶಿವಮೊಗ್ಗ ರಂಗಾಯಣದ ಮೂರು ದಿನಗಳ ರಂಗತೇರು ನಾಟಕ ಪ್ರದರ್ಶನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಟಕಗಳನ್ನು ನೋಡುವ ಪ್ರೇಕ್ಷಕರ ಅಭಿರುಚಿಯನ್ನು ಅರಿತು, ಅವರ ಅಭಿರುಚಿಗೆ ಪೂರಕವಾಗಿ ನಾಟಕಗಳನ್ನು ರೂಪಿಸುವ ಅವಶ್ಯಕತೆ ಇದೆ ಎಂದರು.

ಜಾಗತೀಕರಣ ಸಂದರ್ಭದಲ್ಲಿ ಆಧುನಿಕ ರಂಗಭೂಮಿಯನ್ನು ಜನರ ಬಳಿಗೆ ಕೊಂಡೊಯ್ಯುವ ಕೆಲಸವಾಗಬೇಕಾಗಿದೆ. ರಾಜ್ಯದಲ್ಲಿ ನೀನಾಸಂ, ರಂಗಾಯಣ, ಶಿವ ಸಂಚಾರದಂತಹ ತಂಡಗಳು ರಂಗ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳ ಹೊರತುಪಡಿಸಿದರೆ ಕರ್ನಾಟಕವು ಎಲ್ಲ ಪ್ರಕಾರದ ನಾಟಕಗಳಲ್ಲಿ ಶ್ರೀಮಂತವಾಗಿದೆ. ಅದರಲ್ಲೂ ದಾವಣಗೆರೆಯು ವೃತ್ತಿ ರಂಗಭೂಮಿಯ ತವರೂರಾಗಿದೆ. ಜಾನಪದ, ಹವ್ಯಾಸಿ, ವೃತ್ತಿ, ಹಳ್ಳಿ ನಾಟಕ ಹೀಗೆ ಯಾವುದೇ ಪ್ರಕಾರದ ನಾಟಕವಾದರೂ, ಪ್ರೇಕ್ಷಕರಿಗೆ ಪ್ರಾಥಮಿಕ ಜ್ಞಾನ ಇರುವುದು ಅಗತ್ಯ. ಹಾಗಾದಾಗ ಮಾತ್ರ ನಾಟಕವು ಪ್ರೇಕ್ಷಕರನ್ನು ಸುಸಂಸ್ಕೃತನ್ನಾಗಿ ಮಾಡಲಿವೆ ಎಂದ ಅವರು, ರಂಗಭೂಮಿ ಬುದ್ಧಿಮತ್ತೆ ಹೆಚ್ಚಿಸುವ ಜೊತೆಗೆ ಬದುಕನ್ನು ನೋಡುವ ದೃಷ್ಟಿಕೋನ ಬದಲಿಸುತ್ತದೆ ಎಂದರು.

  ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎ.ಭದ್ರಪ್ಪ ಮಾತನಾಡಿ, ಟಿವಿ, ಸಿನಿಮಾ ಮಾಧ್ಯಮಗಳ ಪ್ರಭಾವದಿಂದಾಗಿ ರಂಗ ಕಲೆ ಕ್ಷೀಣಿಸುತ್ತಿದೆ ಎಂಬ ಅಭಿಪ್ರಾಯ ಒಳ್ಳೆಯದಲ್ಲ. ಹಳೆಯ ನಾಟಕಗಳಿಗೇ ಹೊಸ ಹೆಸರಿಟ್ಟು ಪ್ರೇಕ್ಷಕರ ಮುಂದೆ ತರುತ್ತಿರುವುದು ರಂಗ ಕಲೆ ಹಿನ್ನಡೆಗೆ ಕಾರಣವಾಗಿದೆ ಎಂದು ಹೇಳಿದರು.
ಒಮ್ಮೆ ನೋಡಿದ ನಾಟಕಗಳನ್ನೇ ಮತ್ತೆ, ಮತ್ತೆ ನೋಡಿ ನೋಡಿ ಜನ ರೋಸಿ ಹೋಗಿದ್ದಾರೆ. ಎಲ್ಲರನ್ನೂ ತಲುಪುವ ಹೊಸ ನಾಟಕಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ರಂಗ ತಂಡಗಳು ವಿಫಲವಾಗಿವೆ. ಆದ್ದರಿಂದ ಹೊಸ ಪ್ರಯೋಗಗಳ ಕಡೆಗೆ ರಂಗಾಸಕ್ತರು ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.

  ವೇದಿಕೆ ಕಾರ್ಯಕ್ರಮದ ನಂತರದಲ್ಲಿ ಟ್ರಾನ್ಸ್‍ನೇಷನ್ ನಾಟಕ ಪ್ರದರ್ಶನವಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಂಗ ಸಮಾಜದ ಸದಸ್ಯ ಮಲ್ಲಿಕಾರ್ಜುನ ಕಡಕೋಳ, ರಂಗ ಸಂಘಟಕ ಎಸ್.ಎಸ್.ಸಿದ್ಧರಾಜು, ಕೆ.ಬಿ.ಆರ್. ಡ್ರಾಮಾ ಕಂಪನಿಯ ಚಿಂದೋಡಿ ವೀರಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link