ಪ್ರೊ. ಶ್ರೀನಿವಾಸ್ ಎಂ.ವಿ. ಅವರಿಗೆ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ

ತುಮಕೂರು

             ಬೆಂಗಳೂರು ಮಹಾನಗರ ಪಾಲಿಕೆ ನೀಡುವ 2018 ರ ಕೆಂಪೇಗೌಡ ಪ್ರಶಸ್ತಿ ಭಾಜನರಾಗಿರುವ ಪ್ರೊ. ಎಂ.ವಿ. ಶ್ರೀನಿವಾಸ್ ನಮ್ಮಲ್ಲಿ ವಿರಳವಾಗುತ್ತಿರುವ ಸಮರ್ಪಣಾ ಮನೋಭಾವದ ಪ್ರತಿಭಾನ್ವಿತ ಪ್ರಾಧ್ಯಾಪಕರು. ಅಧ್ಯಯನ ಅಧ್ಯಾಪನ ಸಂಶೋಧನೆ, ಈ ಮೂರು ಆಯಾಮಗಳಲ್ಲೂ ಅಪಾರವಾದ ಸಾಧನೆ ಮಾಡಿರುವ ಶ್ರೀಯುತರ ವಿದ್ಯಾಭ್ಯಾಸ ಅವಧಿಯಲ್ಲಿ ಯಾವಾಗಲೂ ಪ್ರಥಮ ಶ್ರೇಣಿ, ಸ್ಥಾನದಲ್ಲಿದ್ದು ಬಿ.ಎ. ಆನರ್ಸ್ ಮತ್ತು ಎಂ.ಎ. ಪರೀಕ್ಷೆಗಳಲ್ಲಿ ಪ್ರಥಮ ರ್ಯಾಂಕ್ ಗಳಿಸಿ ಐದು ಚಿನ್ನದ ಪದಕ ಗಳಿಸಿಕೊಂಡವರು ಪ್ರತಿಷ್ಠಿತ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾನಿಲಯ, (ದೆಹಲಿ) ಕೊಲಂಬಿಯಾ ಯೂನಿವರ್ಸಿಟಿ (ನ್ಯೂಯಾರ್ಕ್)ಗಳಲ್ಲಿ ಸಂಶೋಧನೆ ನಡೆಸಿ ಪಿಎಚ್‍ಡಿ ಪಡೆದು ಜಗತ್ತಿನ ಹಲವಾರು ಸಂಶೋಧನ ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ / ಬೋಧನೆ ಮಾಡಿ ಅನುಭವ ಸಂಪಾದಿಸಿಕೊಂಡಿದ್ದಾರೆ. ಇತಿಹಾಸ, ಸಾಹಿತ್ಯ ಎರಡು ಕ್ಷೇತ್ರಗಳಲ್ಲೂ ಅಸಾಧಾರಣ ಸಾಧನೆ ಮಾಡಿರುವ ಅಪರೂಪದ ವಿದ್ವಾಂಸರು. ಇವರ ವಿದ್ವತ್ತಿನ ಹರವು ಬಹಳ ವಿಶಾಲವಾದುದು.

             ಇತಿಹಾಸದ ನಾನಾ ವಿಭಾಗಗಳಲ್ಲಿ, ನಾನಾ ಕ್ಷೇತ್ರಗಳಲ್ಲಿ, ವಿವಿಧ ಭಾಷೆಗಳಲ್ಲಿ ಅವರು ಆಳವಾದ ಅಧ್ಯಯನ ನಡೆಸಿ ಕೃತಿರಚನೆ ಮಾಡಿದ್ದಾರೆ. ಇವರ ಜ್ಞಾನಯಜ್ಞದ ಫಲವಾಗಿ 30 ಗ್ರಂಥಗಳು, 150 ಪ್ರೌಢ ಲೇಖನಗಳು ಇವರ ಲೇಖನಿಯಿಂದ ಹೊರಬಂದಿವೆ. ಇವರ ಮೊದಲ ಕೃತಿ ರತ್ನಾಕರ ಸಾಹಿತ್ಯ ಅಕಾಡೆಮಿ (ಮೈಸೂರು ಸರ್ಕಾರ) ಪ್ರಶಸ್ತಿ ಪಡೆದುಕೊಂಡಿವೆ. ಇವರ ಗ್ರಂಥಗಳು ಇತರ ಭಾಷೆಗಳಿಗೆ ಅನುವಾದವಾಗಿದೆ.

              ಇವರ ಗ್ರಂಥಗಳನ್ನು ಕುರಿತು ಪತ್ರಿಕೆಗಳು, ವಿದ್ವಾಂಸರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸ್ ಅವರ ಸೇವೆ ತರಗತಿಗಳಿಗೆ ಮೀಸಲಾದದ್ದಲ್ಲದೆ, ಸಭೆ, ಗೋಷ್ಠಿ ಸಮ್ಮೇಳನಗಳಲ್ಲಿ ಅಧ್ಯಕ್ಷರಾಗಿ, ಭಾಷಣಕಾರರಾಗಿ ಕ್ನನಡದ ಕಹಳೆಯನ್ನು ಮೊಳಗಿಸಿದ್ದಾರೆ. ಹಲವಾರು ಶೈಕ್ಷಣಿಕ ಸಾಂಸ್ಕøತಿಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಕನ್ನಡಮ್ಮನ ಸೇವೆ ಮಾಡಿದ್ದಾರೆ.

               ಅರವತ್ತರ ದಶಕದಲ್ಲಿ ತುಮಕೂರು ಜಿಲ್ಲಾ ಬರಹಗಾರರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ ಸ್ತುತ್ಯಾರ್ಹ ಸೇವೆಯನ್ನು ಮಾಡಿದ್ದಾರೆ. ತಾವು ಗಳಿಸಿದ ಅಪಾರ ವಿದ್ವತ್ತನ್ನು ವಿದ್ಯಾರ್ಥಿಗಳಿಗೆ, ಸಾಹಿತ್ಯಾಸಕ್ತರಿಗೆ ಧಾರೆಯೆರೆದು ಕೃತಕೃತ್ಯರಾಗಿದ್ದಾರೆ. ಹೊಸರೀತಿಯ ಚಿಂತನೆಯಿಂದ ನೂತನ ಆವಿಷ್ಕಾರಗಳಿಂದ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಕಾರಣರಾಗಿದ್ದಾರೆ. ಬೌದ್ಧಿಕ ಸಾಧನೆಗಳಲ್ಲದೆ ಸಾಮಾಜಿಕ ಬದ್ಧತೆಯನ್ನು ಹೊಂದಿರುವ ಶ್ರೀನಿವಾಸ್ ಅವರು ಹಲವಾರು ಸಂಸ್ಥೆಗಳ ಮೂಲಕ ಸಾಮಾಜಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಕೃತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಯ ಪಟ್ಟಿಯಲ್ಲಿ ಸೇರಿರುವುದಲ್ಲದೆ ಏಷ್ಯಾದ ಲೇಖಕರ ಪಟ್ಟಿಯಲ್ಲಿಯೂ ಸೇರಿವೆ.

                 ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಸಂಸ್ಥೆ, ಯೋಜನೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಇವರು ನಾಡು ನುಡಿಗೆ ಸ್ತುತ್ಯಾರ್ಹ ಸೇವೆ ಸಲ್ಲಿಸಿದ್ದಾರೆ. ವೃತ್ತಿಯಿಂದ ನಿವೃತ್ತರಾದರೂ, ವಿದ್ವತ್ ಲೋಕದಲ್ಲಿ ವಿಹರಿಸುತ್ತಾ ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರೊ. ಶ್ರೀನಿವಾಸ್ ಇಂದಿನ ವಿದ್ಯಾರ್ಥಿಗಳಿಗೆ ಒಬ್ಬ ಆದರ್ಶ ಸಾಧಕರಾಗಿದ್ದಾರೆ. ಇನ್ನೂ ಹೆಚ್ಚಿನ ಪ್ರಶಸ್ತಿಗಳಿಗೆ ಅರ್ಹರಾಗಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap