ಹಿರಿಯೂರು:
ವೃದ್ಧರು ಅಂಗವಿಕಲರು ವಿಧವೆಯರಿಗೆ ಸರ್ಕಾರ ನೀಡುತ್ತಿರುವ ಪಿಂಚಣಿ ವಿತರಿಸುವಲ್ಲಿ ವಿಳಂಬ ನೀತಿ ಅನುಸರಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಎಚ್ಚರಿಸಿದರು.ತಾಲ್ಲೂಕಿನ ಗೌಡನಹಳ್ಳಿಯಲ್ಲಿ ಮಂಗಳವಾರ ನಡೆದ ಕುಂದು-ಕೊರತೆ ಸಭೆಯಲ್ಲಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ ಅವರು ಮಾತನಾಡಿದರು.
ಹೊಸದಾಗಿ ವೃದ್ಧಾಪ್ಯ ವೇತನ ಪಡೆಯಲು ಅರ್ಜಿ ಪಡೆಯುವಂತೆ ಗೋಗರೆದರೂ ಗ್ರಾಮ ಲೆಕ್ಕಾಧಿಕಾರಿಗಳು ಸ್ಪಂದಿಸುವುದಿಲ್ಲ. ಸರ್ಕಾರದ ಪ್ರೋತ್ಸಾಹಧನದ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುತ್ತಿರುವವರಿಗೆ ಶೌಚಾಲಯ ಕಟ್ಟಿಕೊಂಡಿರುವವರಿಗೆ ಬಿಲ್ ಪಾವತಿ ಮಾಡುತ್ತಿಲ್ಲ ಪಂಚಾಯಿತಿಯಲ್ಲಿ ಜನರಿಗೆ ಬೇಕಿರುವ ಕೆಲಸಗಳು ಸರಿಯಾಗಿ ಆಗುತ್ತಿಲ್ಲ ಎಂಬುದಾಗಿ ಗ್ರಾಮಸ್ಥರು ದೂರಿದರು.
ಇದಕ್ಕೆ ಅಸಮಾಧಾನಗೊಂಡ ಶಾಸಕಿ ಸರ್ಕಾರದ ಪಿಂಚಣಿ ನೀಡುವುದು ಅಧಿಕಾರಿಗಳ ಕರ್ತವ್ಯ. ವಾರದಲ್ಲಿ ಒಂದುದಿನ ನಿಗದಿಪಡಿಸಿ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಹೋಗಿ ಇಂತಹವರ ದಾಖಲೆಗಳನ್ನು ನೀವೇ ಖುದ್ದಾಗಿ ಪಡೆದುಕೊಂಂಡು ಫಲಾನುಭವಿಗಳಿಗೆ ಸೌಲಭ್ಯ ಒದಗಿಸಿ ಎಂಬುದಾಗಿ ಗ್ರಾಮ ಲೆಕ್ಕಾಧಿಕಾರಿಗೆ ತಾಕೀತು ಮಾಡಿದರು.
ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರ, ರಂಗಾಪುರಗಳಿಗೆ ಭೇಟಿ ನೀಡಿದ ನಂತರ ದಿಂಡಾವರ ಪಂಚಾಯ್ತಿ ವ್ಯಾಪ್ತಿಯ ಪಿಟ್ಲಾಲಿ, ಸೂರಪ್ಪನಹಟ್ಟಿ, ಸರಸ್ವತಿಹಟ್ಟಿ ಹಾಗೂ ಕೊಟ್ಟಿಗೇರೆಹಟ್ಟಿಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ರಾಜೇಶ್ವರಿ, ಮಾಜಿ ಸದಸ್ಯೆ ಕರಿಯಮ್ಮ ಶಿವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಚಿಕ್ಕಣ್ಣ, ಪಿಡಿಓ ಜ್ಯೋತಿ, ಮಂಜುನಾಥ್, ಶ್ರೀಪತಿ ಇತರರು ಉಪಸ್ಥಿತರಿದ್ದರು.








