ತುಮಕೂರು :
ಲೋಕೋಪಯೋಗಿ, ಪಂಚಾಯತ್ ರಾಜ್, ನಿರ್ಮಿತಿಕೇಂದ್ರ, ಕೆಆರ್ ಡಿಎಲ್ ಇಂಜಿನಿಯರಿಂಗ್ ಸೇರಿದಂತೆ ವಿವಿಧ ಇಲಾಖೆಗಳು ತಮ್ಮ ಎಲ್ಲಾ ಕಾಮಗಾರಿ/ ಕಾರ್ಯಕ್ರಮ ಯೋಜನೆಗಳನ್ನು ಅನುಷ್ಠಾನಗೊಳಿಸಿ ಫೆಬ್ರುವರಿ 15 ರೊಳಗೆ ಬಿಲ್ ಗಳನ್ನು ಪಾವತಿಗಾಗಿ ಖಜಾನೆಗೆ ಹಾಜರು ಪಡಿಸಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಕೆಡಿಪಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಅಭಿವೃದ್ಧಿ ದೃಷ್ಟಿಯಿಂದ 2020-21 ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಅನುದಾನವನ್ನು ಫೆಬ್ರವರಿ 15ರೊಳಗೆ ಸಮಗ್ರವಾಗಿ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ವಿಶೇಷ ಘಟಕ ಹಾಗೂ ಗಿರಿಜನ ವಿಶೇಷ ಉಪ ಯೋಜನೆಯಡಿ ಬಿಡುಗಡೆಯಾಗಿರುವ ಹಣವನ್ನು ಸಮುದಾಯದ ಅಭಿವೃದ್ಧಿಗೆ ನಿಯಮಾನುಸಾರ ಅನುದಾನ ಬಳಕೆ ಮಾಡಬೇಕು. ಇಲ್ಲದಿದ್ದರೆ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಸೂಚಿಸಿದರು.
ಸರಕಾರ ಬಡವರ ಅಭಿವೃದ್ಧಿಗಾಗಿ ಹಲವಾರು ಯೋಜನೆ ರೂಪಿಸಿ ನೀಡಿರುವ ಹಣವನ್ನು ಕಾಲ ಮಿತಿಯೊಳಗೆ ಸಬ್ದಳಕೆ ಮಾಡಬೇಕು. ಒಂದು ವೇಳೆ ಅನುದಾನ ಖರ್ಚು ಮಾಡದಿದ್ದರೆ ಅಧಿಕಾರಿಗಳನ್ನೆ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿರುವ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರುವ ಕೆರೆಗಳ ಮಾಹಿತಿಯನ್ನು ಕೆಡಿಪಿ ಸಭೆಗೆ ತರುವಂತೆ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು. ಜನವರಿ 7ರಂದು ನಡೆಯಲಿರುವ ಕೆಡಿಪಿ ಸಭೆಗೆ ಕರಾರುವಾಕ್ಕಾದ ಮಾಹಿತಿ ಹಾಜರುಪಡಿಸಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
