ರಣಥಂಬೋರ್
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಪುತ್ರ ರೈಹಾನ್ ವಾದ್ರಾ ಅವರ ವಿವಾಹ ನಿಶ್ಚಿತಾರ್ಥವು, ಅವರ ಬಹುಕಾಲದ ಗೆಳತಿ ಅವಿವಾ ಬೇಗ್ ಜತೆ ನೆರವೇರಿದೆ. ನಿಶ್ಚಿತಾರ್ಥದ ಫೋಟೋವನ್ನು ರೈಹಾನ್ ವಾದ್ರಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಾಲ್ಯದ ಫೋಟೊ ಮತ್ತು ನಿಶ್ಚಿತಾರ್ಥದ ಫೋಟೋ ವೈರಲ್ ಆಗಿದೆ.
ಅವಿವಾ ಬೇಗ್ ಅವರು ಉದ್ಯಮಿ ಇಮ್ರಾನ್ ಬೇಗ್ ಹಾಗೂ ಇಂಟೀರಿಯರ್ ಡಿಸೈನರ್ ಆಗಿರುವ ನಂದಿತಾ ಬೇಗ್ ಅವರ ಪುತ್ರಿ. 25 ವರ್ಷದ ರೈಹಾನ್ ಕಳೆದ 7 ವರ್ಷಗಳಿಂದ ಅವಿವಾ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಎರಡೂ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ರಾಜಸ್ಥಾನದ ರಣಥಂಬೋರ್‌ನಲ್ಲಿ ನಿಶ್ಚಿತಾರ್ಥ ಸಮಾರಂಭ ಜರುಗಿದೆ. ಈ ವೇಳೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಇದ್ದರು. ಅವಿವಾ ತಾಯಿ ನಂದಿತಾ ಬೇಗ್ ಹಾಗೂ ಪ್ರಿಯಾಂಕಾ ಗಾಂಧಿ ದೀರ್ಘ ಕಾಲದ ಸ್ನೇಹಿತೆಯರು. ಮಾತ್ರವಲ್ಲದೇ ಇಂಟೀರಿಯರ್ ಡಿಸೈನರ್ ಆಗಿರುವ ನಂದಿತಾ, ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿ ಇಂದಿರಾ ಭವನದ ವಿನ್ಯಾಸದಲ್ಲಿಯೂ ಭಾಗಿಯಾಗಿದ್ದರು.
ದೆಹಲಿ ಮೂಲದ ಉದ್ಯಮಿ ಇಮ್ರಾನ್ ಬೇಗ್ ಹಾಗೂ ನಂದಿತಾ ಬೇಗ್ ಅವರ ಪುತ್ರಿ ಅವಿವಾ ಬೇಗ್ ಇಂಟೀರಿಯರ್ ಡಿಸೈನರ್. ಛಾಯಾಗ್ರಾಹಕಿ ಕೂಡ ಆಗಿರುವ ಅವರು ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಜತೆಗೆ ರಾಷ್ಟ್ರೀಯ ಮಟ್ಟದ ಮಾಜಿ ಫುಟ್ಬಾಲ್ ಆಟಗಾರ್ತಿಯೂ ಹೌದು.
25 ವರ್ಷದ ಪ್ರಿಯಾಂಕಾ ಪುತ್ರ ರೈಹಾನ್, ದೃಶ್ಯ ಕಲಾವಿದ ಹಾಗೂ ಛಾಯಾಗ್ರಾಹಕನಾಗಿದ್ದಾರೆ. ರೈಹಾನ್ ತಮ್ಮ ಕುಟುಂಬದ ರಾಜಕೀಯ ಪರಂಪರೆಯ ಹೊರಗೆ ತನ್ನದೇ ಆದ ಹಾದಿಯನ್ನು ರೂಪಿಸಿಕೊಳ್ಳುತ್ತಿದ್ದಾರೆ. ಆಗಸ್ಟ್ 29, 2000 ರಂದು ಜನಿಸಿದ ಅವರು ಚಿಕ್ಕ ವಯಸ್ಸಿನಿಂದಲೂ ಕಲೆ ಮತ್ತು ಛಾಯಾಗ್ರಹಣದ ಕಡೆಗೆ ಬಲವಾದ ಒಲವನ್ನು ತೋರಿಸಿದ್ದಾರೆ. ಸಾರ್ವಜನಿಕವಾಗಿ ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದರೂ, ಕೆಲವು ರಾಜಕೀಯ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರಿಗೆ ಮಿರಾಯಾ ವಾದ್ರಾ ಎಂಬ ಸಹೋದರಿಯೂ ಇದ್ದಾರೆ.
ಮುಂಬೈನ ಕೊಲಾಬಾದಲ್ಲಿರುವ ಸಮಕಾಲೀನ ಕಲಾ ಗ್ಯಾಲರಿಯಾದ ಎಪಿಆರ್‌ಇ ಆರ್ಟ್ ಹೌಸ್‌ನಲ್ಲಿ ರೈಹಾನ್ ಜೀವನ ಚರಿತ್ರೆ ಲಭ್ಯವಿದೆ. ಅವರ ಪೋರ್ಟ್‌ಫೋಲಿಯೊ ವನ್ಯಜೀವಿ ಸೇರಿದಂತೆ ಹಲವು ವಲಯಗಳನ್ನು ಒಳಗೊಂಡಿದೆ.








