ಬಜೆಟ್‍ನಲ್ಲಿ ಆರ್ಥಿಕ ಸಮತೋಲನಕ್ಕೆ ಯತ್ನ

ದಾವಣಗೆರೆ:

     ಕೇಂದ್ರ ಬಜೆಟ್‍ನಲ್ಲಿ ಅಭಿವೃದ್ಧಿ ದರ ಕಡಿಮೆಯಾಗಿರುವ ಪ್ರಸಕ್ತ ಆರ್ಥಿಕ ವರ್ಷವನ್ನು ಆದಷ್ಟು ಸಮತೋಲನ ಮಾಡಲು ಮಾತ್ರ ಪ್ರಯತ್ನಿಸಲಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯ ಕಲಾ ನಿಕಾಯ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಬಿ.ರಂಗಪ್ಪ ತಿಳಿಸಿದರು.

     ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಅರ್ಥಶಾಸ್ತ್ರ ವಿಭಾಗ ಮತ್ತು ಅರ್ಥಶಾಸ್ತ್ರ ವೇದಿಕೆ ಸಹಯೋಗದಲ್ಲಿ 2020-21ನೇ ಸಾಲಿನ ಕೇಂದ್ರ ಆಯವ್ಯಯದ ಕುರಿತು ಏರ್ಪಡಿಸಿದ್ದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗ ದೇಶದ ಜಿಡಿಪಿ ದರ ಶೇ.4.5 ರಷ್ಟಿದ್ದು, ಅದನ್ನು ಶೇ.9 ಅಥವಾ 10ಕ್ಕೆ ಏರಿಸಲು ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ಕೇಂದ್ರ ಆರ್ಥಿಕ ಸಚಿವರು ಹೇಳಿದ್ದಾರೆ. ಆದರೆ, ಅದು ಹೇಗೆ ಎರಡು ಪಟ್ಟು ವೃದ್ಧಿಯಾಗಲಿದೆ ಎಂಬುದನ್ನು ಎಲ್ಲೂ ಹೇಳಿಲ್ಲ ಎಂದರು.

    ಕೃಷಿ, ಗ್ರಾಮೀಣಾಭಿವೃದ್ಧಿ, ನೀರು, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಅರ್ಥ ಸಚಿವರು ಹೇಳಿದ್ದಾರೆ. ಆದರೆ, ಬಜೆಟ್‍ನ ಅಂಕಿಅಂಶ ಗಮನಿಸಿದರೆ, ಇದ್ಯಾವುದಕ್ಕೂ ಮೊದಲ ಆದ್ಯತೆ ನೀಡಿದಂತೆ ಕಾಣುವುದಿಲ್ಲ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಕಳೆದ ಬಜೆಟ್‍ಗೆ ಹೋಲಿಸಿದರೆ, ಶೇ.2.47 ರಷ್ಟು ಮಾತ್ರ ಹೆಚ್ಚು ಅನುದಾನ ನೀಡಲಾಗಿದೆ. ನೀರು ಮತ್ತು ನೈರ್ಮಲ್ಯಕ್ಕೆ ಶೇ.3.8 ಹಾಗೂ ಶಿಕ್ಷಣ ಮತ್ತು ಕೌಶಕಲ್ಯಕ್ಕೆ ಶೇ.4.7 ರಷ್ಟು ಮಾತ್ರ ಹೆಚ್ಚು ಅನುದಾನ ಮೀಸಲಿಟ್ಟಿರುವುದನ್ನು ತೋರಿಸಲಾಗಿದೆ. ಇದನ್ನು ಹಣದ್ಬುರದ ಜತೆಗೆ ಸಮನ್ವಯಗೊಳಿಸಿದಾಗ ಇದು ನಕಾರಾತ್ಮ ಅಭಿವೃದ್ಧಿಯಾಗಲಿದೆ ಎಂದು ಅವರು ವಿಶ್ಲೇಷಿಸಿದರು.

    ಕೈಗಾರಿಕೆಗಳಿಗೂ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದರೂ ಅಲ್ಲಿಯೂ ಶೇ.0.6 ಮಾತ್ರ ಹೆಚ್ಚಿಗೆ ಅನುದಾನ ಮೀಸಲು ಇಡಲಾಗಿದೆ. ಉದ್ಯೋಗ, ಬರ, ನರೆ, ವಿಕೋಪಗಳು ಇನ್ನಿತರ ವಿಭಾಗಗಳನ್ನು ಬಜೆಟ್‍ನಲ್ಲಿ ನಿರ್ಲಕ್ಷಿಸಿರುವುದು ಕಾಣುತ್ತಿದೆ. ಆದರೆ, ಟ್ರಾನ್ಸ್‍ಪೋರ್ಟ್ ಸಾಮಾಗ್ರಿಗಳಿಗೆ ಹೆಚ್ಚು ಉತ್ತೇಜನ ನೀಡಲಾಗಿದೆ ಎಂದು ನುಡಿದರು.

    130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಸರ್ಕಾರ ಬಜೆಟ್ ಮೂಲಕ ಎಲ್ಲರ ಆಸೆ, ನಿರೀಕ್ಷೆಗಳಿಗೆ ಸ್ಪಂದಿಸುವುದು ಸವಾಲಿನ ಕೆಲಸವಾಗಿದೆ. ಸರ್ಕಾರದ ಆದ್ಯತೆ, ಅಭಿವೃದ್ಧಿಯ ಪಥಕ್ಕೆ ಯಾವುದೇ ಬಜೆಟ್ ದಿಕ್ಸೂಚಿಯಾಗಲಿದೆ. ಇಂತಹ ಬಜೆಟ್ ಅಭಿವೃದ್ಧಿಪರವಾಗಿರಬೇಕಾದ್ದು ಅಗತ್ಯ ಎಂದು ಹೇಳಿದರು.

    ತಕ್ಷಣದ ಅಗತ್ಯತೆ ಈಡೇರಿಸುವಂತಹ ಜನಪ್ರಿಯ ಯೋಜನೆಗಳ ಬದಲು ದೀರ್ಘಾವಧಿ ಲಾಭ ತರುವ ಯೋಜನೆ, ಕಾರ್ಯಕ್ರಮಗಳನ್ನು ಬಜೆಟ್‍ನಲ್ಲಿ ಅನುಷ್ಠಾನಕ್ಕೆ ತರಬೇಕು. ಯಾರಿಂದ ಎಷ್ಟು ಆದಾಯ ಸಂಗ್ರಹಿಸಲಾಗಿದೆ. ಯಾವ ವಲಯಕ್ಕೆ ಎಷ್ಟು ಖರ್ಚು ಮಾಡಲಾಗಿದೆ? ಎಂಬುದರ ಮೇಲೆ ಬಜೆಟ್‍ನ ಸಾಧಕ-ಬಾಧಕಗಳು ನಿರ್ಧಾರವಾಗುತ್ತವೆ ಎಂದರು.

    ದೇಶದ ಸಧ್ಯದ ಆರ್ಥಿಕ ಸ್ಥಿತಿ ತುಂಬಾ ಗಂಭೀರವಾಗಿದೆ. ಜನರಿಗೆ ಊಟ, ಬಟ್ಟೆಗೆ ಸಮಸ್ಯೆ ಇಲ್ಲವಾದರೂ ಅರ್ಥ ವ್ಯವಸ್ಥೆ ಚಿಂತಾಜನಕವಾಗಿದೆ. ಎಲ್ಲರ ಕೈಯಲ್ಲೂ ಮೊಬೈಲ್ ಇರುವುದನ್ನು ಬಿಟ್ಟರೆ ನಗರ ಹಾಗೂ ಹಳ್ಳಿಗಳ ನಡುವಿನ ಅಂತರ ಹೆಚ್ಚಾಗಿದೆ. ಇದರಿಂದಾಗಿ ಉತ್ಪನ್ನಗಳಿಗೆ ಬೇಡಿಕೆ ಕುಸಿದು, ಅನೇಕ ಕೈಗಾರಿಕೆಗಳು ಮುಚ್ಚಿ ನೌಕರರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆರ್ಥಿಕ ಬೆಳವಣಿಗೆ ದರವು ಕಳೆದ 5 ವರ್ಷಗಳಲ್ಲೇ ಕನಿಷ್ಟ ಮಟ್ಟ ತಲುಪಿರುವುದು ಅತ್ಯಂತ ಕಳವಳಕಾರಿ ಅಂಶವಾಗಿದೆ ಎಂದು ಹೇಳಿದರು.

    ಪ್ರಾಸ್ತಾವಿಕ ಮಾತನಾಡಿದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆರ್.ತಿಪ್ಪಾರೆಡ್ಡಿ, ಕುಟುಂಬದ ಖರ್ಚು, ಆದಾಯಗಳನ್ನು ಮನೆಯ ಮುಖ್ಯಸ್ಥರು ಸರಿದೂಗಿಸುವಂತೆಯೇ ದೇಶದ ಆಯವ್ಯಯವನ್ನು ಹಣಕಾಸು ಸಚಿವರು ಮಂಡಿಸುತ್ತಾರೆ. 1991ರ ಆರ್ಥಿಕ ಸುಧಾರಣೆ ನಂತರ 2007-08ರಲ್ಲಿ ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದ್ದಾಗಲೂ ನಮ್ಮ ದೇಶದ ಮೇಲೆ ಅಷ್ಟಾಗಿ ಪರಿಣಾಮವಾಗಿರಲಿಲ್ಲ. ಆದರೆ ಬಜೆಟ್ ಅಂಶಗಳ ಅನುಷ್ಠಾನ ಕೊರತೆ ಹಾಗೂ ಜನರಲ್ಲಿ ಕೊಳ್ಳುವ ಶಕ್ತಿ ಕಡಿಮೆಯಾಗಿರುವುದರಿಂದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ವಿಶ್ಲೇಷಿಸಿದರು.

    ಕಾಲೇಜಿನ ಪ್ರಾಂಶುಪಾಲ ಪ್ರೊ.ತೂ.ಕ.ಶಂಕರಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಪ್ರೊ.ಟಿ.ವೀರೇಶ, ಸಹಾಯಕ ಪ್ರಾಧ್ಯಾಪಕ ಡಾ.ಜಿ.ಎಂ.ದಿನೇಶ, ಪ್ರಭಾರ ವ್ಯವಸ್ಥಾಪಕಿ ಎಸ್.ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು. ಪ್ರೇಮಸಾಗರ್ ಪ್ರಾರ್ಥಿಸಿದರು. ಭೀಮಣ್ಣ ಸುಣಗಾರ್ ಸ್ವಾಗತಿಸಿದರು. ಪ್ರೊ.ಕೆ.ಎಂ.ರುದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಡಾ.ಶಾಂತಕುಮಾರಿ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link