ಬದ್ಧತೆ-ನಿಷ್ಠೆ ಇದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ

ದಾವಣಗೆರೆ:

            ಬದ್ಧತೆ, ಶ್ರದ್ಧೆ, ನಿಷ್ಠೆ ಹಾಗೂ ಶಿಸ್ತು ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಮೂರ್ತಿ ಎಸ್. ನಾಗಶ್ರೀ ಅಬಿಪ್ರಾಯಪಟ್ಟರು.

             ನಗರದ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ನಿಷ್ಠೆ, ಶಿಸ್ತು ಹಾಗೂ ಬದ್ಧತೆ ಇದ್ದಲ್ಲಿ ಮಾತ್ರ ಯಶಸ್ಸು ಗಳಿಸಲು ಸಾಧ್ಯವಾಗಲಿದೆ ಎಂದರು.

             ಕಾನೂನು ಅಧ್ಯಯನ ಕಠಿಣ ಶ್ರಮ ಹಾಗೂ ಶಿಸ್ತು ಬಯಸುವ ವಿಭಾಗ. ಇಲ್ಲಿ ನಿರಂತರ ಅಧ್ಯಯನದ ಅಗತ್ಯವಿದೆ. ವಕೀಲರು ಹಾಗೂ ನ್ಯಾಯಾಧೀಶರಾದ ನಂತರವೂ ಅಧ್ಯಯನಶೀಲರಾಗುವ ಅನಿವಾರ್ಯತೆ ಇದೆ. ಕಾನೂನು ಕಲಿಕೆಯ ಹಂತದಲ್ಲೇ ನ್ಯಾಯಾಂಗದ ಕಲಾಪದ ಪ್ರಾಯೋಗಿಕ ಅನುಭವವನ್ನೂ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

             ಕಾನೂನುಗಳು ಎಷ್ಟೇ ಚಿಕ್ಕವಾದರೂ ಸಹ ತಿಳಿಯುವುದು ಬಹಳ ಇರುತ್ತದೆ. ಯಾವುದಾದರೂ ವಿಷಯಗಳು ಅರ್ಥವಾಗದೇ ಇದ್ದಾಗ, ಗುಂಪು ಚರ್ಚೆಯ ಮೂಲಕ ಅರ್ಥ ಮಾಡಿಕೊಳ್ಳಬೇಕು ಎಂದವರು ತಿಳಿಸಿದರು.

              ಕಾನೂನು ಕಲಿತವರು ಈ ಹಿಂದೆ ವಕೀಲಿ ಇಲ್ಲವೇ ನ್ಯಾಯಾಧೀಶರ ಹುದ್ದೆಗೆ ಮಾತ್ರ ಅವಕಾಶ ಪಡೆಯುತ್ತಿದ್ದರು. ಈಗ ಕಾರ್ಪೊರೇಟ್ ವಲಯ ಸೇರಿದಂತೆ ಸಾಕಷ್ಟು ವಲಯಗಳಲ್ಲಿ ಅವಕಾಶ ಇದೆ. ಸಾಕಷ್ಟು ವಿದ್ಯಾರ್ಥಿನಿಯರು ಕಾನೂನು ಕಲಿತ ನಂತರ ವೃತ್ತಿಯಲ್ಲಿ ಮುಂದುವರೆಯುವುದಿಲ್ಲ. ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಮುಂದಿರುವಂತೆಯೇ, ವೃತ್ತಿಯಲ್ಲೂ ಹಿಂಜರಿಕೆ ಬಿಟ್ಟು ಮುನ್ನಗ್ಗಬೇಕು ಎಂದು ಕರೆ ನೀಡಿದರು.

             ಬಾಪೂಜಿ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ನಿರ್ದೇಶಕ ಪ್ರೊ. ವೈ. ವೃಷಬೇಂದ್ರಪ್ಪ ಮಾತನಾಡಿ, ಯಾವುದೇ ಕಲಿಕೆಯಲ್ಲಿ ತೊಡಗುವ ಮುಂಚೆ ಮಾನಸಿಕವಾಗಿ ಪೂರ್ವಸಿದ್ಧತೆ ಅಗತ್ಯ. ಅದಕ್ಕೆ ಕಾರ್ಯಗಾರಗಳು ನೆರವಾಗುತ್ತವೆ. ಕಾನೂನು ಪ್ರತಿನಿತ್ಯ ಬದಲಾಗುತ್ತದೆ. ಪಠ್ಯದಲ್ಲಿರುವ ವಿಷಯಗಳು ಹಳೆಯದಾಗಿರುತ್ತವೆ. ಕೆಲವೊಮ್ಮೆ ಉಪನ್ಯಾಸಕರು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗಿ ಜ್ಞಾನ ವಿಸ್ತರಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳ ಹೊಣೆ ಹೆಚ್ಚಾಗಿದೆ ಎಂದರು.

                  ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎಸ್. ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್. ಯತೀಶ್ ಸ್ವಾಗತಿಸಿದರು. ಎಂ. ಸೋಮಶೇಖರಪ್ಪ ವಂದಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link