ತುಮಕೂರು :
ಎತ್ತಿನ ಹೊಳೆ ಯೋಜನೆಯ ಕೊರಟಗೆರೆ ತಾಲ್ಲೂಕಿನ ಬೈರಗೊಂಡ್ಲು ಬಫರ್ ಡ್ಯಾಂನಿಂದ ಸಂತ್ರಸ್ಥರಾಗುವ ಗ್ರಾಮಗಳಿಗೆ ಮುಂದಿನ ಒಂದೆರಡು ವಾರದಲ್ಲಿ ಖುದ್ದು ಭೇಟಿ ನೀಡಿ ಅಲ್ಲಿನ ರೈತರ ಜನರ ಅಹವಾಲುಗಳನ್ನು ಆಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ. ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಎತ್ತಿನ ಹೊಳೆ ಯೋಜನೆಯ ಬೈರಗೊಂಡ್ಲು ಬಫರ್ ಡ್ಯಾಂನ ನಿರ್ಮಾಣದ ಸಂತ್ರಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.
ಕಳೆದ ವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎತ್ತಿನ ಹೊಳೆ ಯೋಜನೆಯ ಡ್ಯಾಂ ನಿರ್ಮಾಣಕ್ಕೆ ಅಗತ್ಯವಿರುವ ಜಮೀನಿನನ್ನು ಭೂಸ್ವಾಧೀನ, ನೇರ ಖರೀದಿ ಹಾಗೂ ಬಾಡಿಗೆ/ಗುತ್ತಿಗೆ ಆಧಾರದ ಮೇಲೆ ಪಡೆಯುವ ಬಗ್ಗೆ ರೈತರೊಂದಿಗೆ ಚರ್ಚಿಸಿ ವರದಿ ನೀಡುವಂತೆ ಸೂಚಿಸಿರುತ್ತಾರೆ. ಅದರಂತೆ ಡ್ಯಾಂ ನಿರ್ಮಾಣದಿಂದ ಮುಳುಗಡೆಯಾಗಲಿರುವ ಭಾಗದ ಗ್ರಾಮಗಳ ರೈತರು/ ಸಾರ್ವಜನಿಕರನ್ನು ಪೂರ್ವಭಾವಿಯಾಗಿ ಕರೆದು ತಮ್ಮ ಅಹವಾಲು ಇಂದು ಆಲಿಸುತ್ತಿದ್ದೇನೆ ಎಂದರು.
ಬೈರಗೊಂಡ್ಲು ಡ್ಯಾಂ ನಿರ್ಮಾಣವಾಗಲಿರುವ ವ್ಯಾಪ್ತಿಯ ಗ್ರಾಮಗಳಿಗೆ ಮುಂದಿನ ಒಂದೆರಡು ವಾರಗಳಲ್ಲಿ ದಿನಾಂಕ ಹಾಗೂ ಸಮಯ ನಿಗದಿ ಮಾಡಿ, ಟಾಂಟಾಂ ಮೂಲಕ ಸಾರ್ವಜನಿಕರಿಗೆ ತಿಳಿಸಿ, ಸ್ಥಳೀಯರಿಗೆ ಯೋಜನೆಯ ಬಗ್ಗೆ ತಿಳಿಸಲಾಗುವುದು. ಅಲ್ಲದೆ ನಿಮ್ಮ ಅಹವಾಲುಗಳನ್ನು ಹಾಗೂ ವಸ್ತವಾಂಶವನ್ನು ಅರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಎತ್ತಿನ ಹೊಳೆ ಯೋಜನೆಯ ರೈತರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಶಿವರಾಮಯ್ಯ ಜಿ.ಆರ್. ಮಾತನಾಡಿ, ಕುಡಿಯುವ ನೀರಿನ ಯೋಜನೆಯಾದ ಎತ್ತಿನ ಹೊಳೆ ಯೋಜನೆಯ ಅನುಷ್ಟಾನಕ್ಕೆ ನಮ್ಮ ವಿರೋಧವಿಲ್ಲ. ಆದರೆ ಬಂಗಾರದ ಬೆಲೆ ಬಾಳುವ ಜಮೀನನ್ನು ಕಡಿಮೆ ಬೆಲೆ ನಿಗಧಿ ಮಾಡಿ, ಭೂಸ್ವಾಧೀನ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ. ರೈತರ ಕೆಲವೊಂದು ಭೂದಾಖಲೆಗಳು ತಿದ್ದುಪಡಿಯಾಗಬೇಕಾಗಿದೆ. ಕೋಳಾಲ ಹೋಬಳಿಯನ್ನು ಪೋಡಿಮುಕ್ತ ಹೋಬಳಿಯನ್ನಾಗಿ ಪೋಷಣೆ ಮಾಡುವಂತೆ ಅವರು ಒತ್ತಾಯಿಸಿದರು.
ಯೋಜನೆ ಹಾದು ಹೋಗುವ ಪಕ್ಕದ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಹೆಚ್ಚಿನ ದರವನ್ನು ನಿಗಧಿಪಡಿಸಲಾಗಿದೆ ಅದೇ ದರವನ್ನು ಕೊರಟಗೆರೆ ತಾಲ್ಲೂಕಿಗೆ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.
ಪಾವಗಡದಲ್ಲಿ ವ್ಯವಸಾಯಕ್ಕೆ ಯೋಗ್ಯವಲ್ಲದ ಬಂಜರು ಭೂಮಿಯು ಇದ್ದುದರಿಂದ, ಗುತ್ತಿಗೆ ಆಧಾರದ ಮೇಲೆ ರೈತರಿಂದ ಪಡೆದು ಸೋಲಾರ ಪಾರ್ಕ್ ಸ್ಥಾಪಿಸಲಾಗಿದೆ. ಆದರೆ ಬೈರಗೊಂಡ್ಲು ಸುತ್ತಮುತ್ತಲಿನ ಪ್ರದೇಶದಲ್ಲಿ ರೇಷ್ಮೆ, ಅಡಿಕೆ ಮತ್ತು ತೆಂಗು ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಒಳಗೊಂಡ ಕೊಳವೆಬಾವಿ ನೀರಾವರಿ ಪ್ರದೇಶವನ್ನು ಒಳಗೊಂಡಿದೆ. ಈಗಾಗಲೇ ಎಸ್‍ಎಎಸ್ ವರದಿಯಂತೆ 71 ಸಾವಿರ ಅಡಿಕೆ, 45 ಸಾವಿರ ತೆಂಗಿನ ಮರಗಳಿವೆ ಎಂದು ತಿಳಿಸಿದೆ. ಇಂತಹ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಪಡೆದು ಡ್ಯಾಂ ನಿರ್ಮಿಸಲು ಸಾಧ್ಯವಾಗುವುದಿಲ್ಲ. ಗುತ್ತಿಗೆ/ಬಾಡಿಗೆಯ ಆಧಾರದ ಮೇಲೆ ನೀಡಲು ನಾವು ಒಪ್ಪುವುದಿಲ್ಲ ಎಂದು ಬೆಲ್ಲದಹಳ್ಳಿ ಚಿಕ್ಕತಿಮ್ಮಯ್ಯ ಅವರು ಸಭೆಯಲ್ಲಿ ತಿಳಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ ಮಾತನಾಡಿ, 2013ರ ಭೂಸ್ವಾಧೀನ ಕಾಯ್ದೆಯ ಅನ್ವಯ ಫಲವತ್ತಾಗಿರುವ ಕೃಷಿ ಜಮೀನನ್ನು ರೈತರ ಅನುಮತಿಯಿಲ್ಲದೆ ಭೂಸ್ವಾಧೀನ ಮಾಡುವಂತಿಲ್ಲ ಎಂದಿದೆ. ಬೈರಗೊಂಡ್ಲುವಿನಲ್ಲಿ ಡ್ಯಾಂ ನಿರ್ಮಿಸುವ ಬದಲು ಆ ಭಾಗದಲ್ಲಿರುವ ಕಾಟೇನಹಳ್ಳಿ, ಇರಕಸಂದ್ರ, ತೀತಾ, ಮಾವತ್ತೂರು ಕೆರೆಗಳು ಸೇರಿದಂತೆ ವಿಶಾಲವಾದ 6 ಕೆರೆಗಳಿದ್ದು, ಈ ಕೆರೆಗಳಲ್ಲಿ ಆಳ ಹಾಗೂ ಏರಿಗಳನ್ನು ಸುಭದ್ರ ಮಾಡಿ, ಒಂದೊಂದು ಕೆರೆಯಲ್ಲಿ 1 ಟಿಎಂಸಿ ನೀರನ್ನು ಸಂಗ್ರಹಿಸಿ, ಅಲ್ಲಿಂದಲೇ ನೀರನ್ನು ಬೇರೆಡೆಗೆ ಕೊಳವೆಗಳ ಮಾರ್ಗದ ಮೂಲಕ ಪೂರೈಕೆ ಮಾಡುವ ಬಗ್ಗೆ ಚಿಂತನೆ ನಡೆಸಿ ಆ ಭಾಗದ 33 ಹಳ್ಳಿಗಳನ್ನು ಉಳಿಸಿ ಎಂದು ಅವರು ಮನವಿ ಮಾಡಿದರು.
ಎತ್ತಿನ ಹೊಳೆ ಯೋಜನೆಯ ಬೈರಗೊಂಡ್ಲು ಡ್ಯಾಂ ನಿರ್ಮಾಣದಿಂದ ಸಂತ್ರಸ್ತರಾಗುವ ಗ್ರಾಮಗಳಿಂದ ಆಗಮಿಸಿದ್ದ ರೈತರು ತಮ್ಮ ಅಹವಾಲು/ ಅನಿಸಿಕೆಗಳನ್ನು ಸಭೆಯಲ್ಲಿ ತಿಳಿಸಿದರು.
ಕೋಳಾಲ ಹೋಬಳಿ ಸೇರಿದಂತೆ ಕೊರಟಗೆರೆ ತಾಲ್ಲೂಕನ್ನು ಪೋಡಿಮುಕ್ತ ತಾಲ್ಲೂಕನ್ನಾಗಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಅದಕ್ಕೆ ಇನ್ನಷ್ಟು ವೇಗ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಭೆಯಲ್ಲಿ ಭೂಸ್ವಾಧೀನಾಧಿಕಾರಿ ಆರತಿ ಆನಂದ್, ಮಧುಗಿರಿಯ ಉಪವಿಭಾಗಾಧಿಕಾರಿ ಡಾ: ವೆಂಕಟೇಶಯ್ಯ, ಕೊರಟಗೆರೆ ತಹಶೀಲ್ದಾರ್ ನಾಗರಾಜ್ ಸೇರಿದಂತೆ ರೈತ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.