ಬರಗಾಲದ ಹಿನ್ನೆಲೆ : ತುರ್ತು ಸಭೆ ನಡೆಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ – ಶಾಸಕ ಟಿ.ರಘುಮೂರ್ತಿ  

 ಚಳ್ಳಕೆರೆ:

      ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರಗಾಲಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಬಡ ಜನತೆಗೆ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಪ್ರಾರಂಭ, ಕೆಟ್ಟು ನಿಂತಿರುವ ಕುಡಿಯುವ ನೀರು ಘಟಕಗಳ ತುರ್ತು ರಿಪೇರಿ, ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಅಭಾವ ಉಂಟಾಗದಂತೆ ಜಾಗೃತೆ ವಹಿಸುವುದು, ಆಶ್ರಯ ಯೋಜನೆಯ ಆಶ್ರಯ ಕಾಲೋನಿ ನಿರ್ಮಾಣಕ್ಕೆ ಸೂಕ್ತ ಜಮೀನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಅಧಿಕಾರಿ ವರ್ಗ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ನಿರ್ಲಕ್ಷತೋರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬ ಗಂಭೀರ ಎಚ್ಚರಿಕೆಯನ್ನು ರಾಜ್ಯ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು, ಕ್ಷೇತ್ರದ ಶಾಸಕರೂ ಆದ ಟಿ.ರಘುಮೂರ್ತಿ ನೀಡಿದರು.

      ಅವರು, ಬುಧವಾರ ಸಂಜೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 26 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಕಂದಾಯಾಧಿಕಾರಿಗಳು, ಕುಡಿಯುವ ನೀರು ಯೋಜನೆ ಅಧಿಕಾರಿಗಳು ಹಾಗೂ ಇನ್ನಿತರೆ ತಾಲ್ಲೂಕು ಮಟ್ಟದ ಅಧಿಕಾರಿಗಳ ತುರ್ತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ತಿಂಗಳಷ್ಟೇ ಸಭೆ ನಡೆಸಿ ಗ್ರಾಮೀಣ ಭಾಗದ ಜನರಿಗೆ ನೆರವಾಗುವಂತೆ ಸೂಚನೆ ನೀಡಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯನಿರ್ವಹಿಸುವಲ್ಲಿ ಹಿಂದೇಟು ಹಾಕುತ್ತಿದ್ಧಾರೆ. ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ಇಲ್ಲವೆಂಬ ಆರೋಪ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಸರ್ಕಾರ ಈ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಗುರುತಿಸಿ ವಿಶೇಷ ಯೋಜನೆಯಡಿ ಬರದ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಾರಂಭಿಸಲು ಸೂಚಿಸಿದ್ದರೂ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿ ವರ್ಗ ವಿಫಲವಾಗಿದೆ. ಕೇವಲ ಕೆಲವೊಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾತ್ರ ಯಶಸ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ, ಗ್ರಾಮೀಣ ಭಾಗದಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ. ಕೇವಲ ಹಿರಿಯ ಅಧಿಕಾರಿಗಳಿಗೆ ವರದಿ ಕಳುಹಿಸಿದರೆ ಸಾಲದು ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಅಧಿಕಾರಿಗಳ ಮನವಲಿಸಿ ಅನುಮತಿ ಪಡೆದು ಕಾರ್ಯನಿರ್ವಹಿಸಬೇಕು. ಕಾಮಗಾರಿ ಅನುಷ್ಠಾನದಲ್ಲಿ ಯಾವುದೇ ಸಮಸ್ಯೆ ಇದ್ದರೂ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುವ ಭರವಸೆಯನ್ನು ಅವರು ನೀಡಿದರು.

      ಗ್ರಾಮೀಣ ಭಾಗಗಳಲ್ಲಿ ಕೈಗೊಳ್ಳುವ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳಿಗೆ ಕೂಲಿ ಕಾರರು ಬರಲು ಹಿಂದೇಟು ಹಾಕುತ್ತಾರೆ. ಕಾರಣ ಅವರ ಕೂಲಿ ಹಣ ಬರದೆ ನಿರಾಶರಾಗಿದ್ಧಾರೆಂಬ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮಾಹಿತಿಯನ್ನು ಪಡೆದ ಶಾಸಕರು ಸರ್ಕಾರದಿಂದ ಹಣ ಸ್ವಲ್ಪ ವಿಳಂಬವಾಗಿ ಬರಬಹುದು ಈ ನಿಟ್ಟಿನಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡು ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.

      ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಳ್ಳಕೆರೆ ಕ್ಷೇತ್ರವ್ಯಾಪ್ತಿಯ 20 ಗ್ರಾಮ ಪಂಚಾಯಿತಿಗಳಲ್ಲಿ 63 ಗ್ರಾಮಗಳು ಹಾಗೂ ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿ 26 ಗ್ರಾಮಗಳು ಒಟ್ಟು 86 ಗ್ರಾಮಗಳಲ್ಲಿ ಆಶ್ರಯ ಕಾಲೋನಿ ನಿರ್ಮಾಣಕ್ಕೆ ಜಮೀನು ದೊರಕದ ಹಿನ್ನೆಲೆಯಲ್ಲಿ ಖಾಸಗಿಯವರಿಂದಲಾದರೂ ಪಡೆದು ಫೆಬ್ರವರಿ ಅಂತ್ಯದೊಳಗೆ ನಿವೇಶನಗಳನ್ನು ಗುರುತಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಲೋಕಸಭಾ ಚುನಾವಣೆ ಸಮೀಪದಲ್ಲಿದ್ದು, ಚುನಾವಣೆ ದಿನಾಂಕ ನಿಗದಿಗೊಳಿಸಿದಲ್ಲಿ ಯಾವುದೇ ಕಾಮಗಾರಿ ಅನುಷ್ಠಾನ ಸಾಧ್ಯವಾಗುವುದಿಲ್ಲ. ಅದ್ದರಿಂದ ಅಧಿಕಾರಿ ವರ್ಗ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು ಕಾರ್ಯನಿರ್ವಹಿಸುವಂತೆ ತಿಳಿಸಿದರು.

      ಉದ್ಯೋಗ ಖಾತರಿ ಯೋಜನೆಯಲ್ಲಿ ಗೋಕಟ್ಟೆ ನಿರ್ಮಾಣ, ಹಳ್ಳಗಳ ಪುನಶ್ಚೇತನ, ಕೆರೆ ಹೂಳೆತ್ತುವ ಕಾಮಗಾರಿಯನ್ನು ಖಾತರಿ ಯೋಜನೆಯಡಿ ಜನರಿಗೆ ಕೆಲಸ ನೀಡುವಂತೆ ಸೂಚಿಸಿದರು. ಮಾನವ ದಿನಗಳನ್ನು ಗುರುತಿಸುವಲ್ಲಿ ಯಾರೂ ವಿಫಲರಾದಂತೆ ಜಾಗ್ರತೆ ವಹಿಸಬೇಕೆಂದರು.

      ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಕೆಟ್ಟುಹೋದ ಶುದ್ದ ಕುಡಿಯುವ ನೀರಿನ ಘಟಕಗಳ ತುರ್ತು ರಿಪೇರಿಗೆ ಸಂಬಂಧಪಟ್ಟ ಏಜೆನ್ಸಿಯವರಿಗೆ ಮಾಹಿತಿ ನೀಡಿ ರಿಪೇರಿಗೊಳಿಸಬೇಕೆಂದರು. ಯಾವುದೇ ಕಾರಣಕ್ಕೂ ಶುದ್ದ ಕುಡಿಯುವ ನೀರಿನ ಘಟಕಗಳು ಎಲ್ಲಿಯೂ ನಿಲ್ಲದಂತೆ ಸಂಬಂಧಪಟ್ಟ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕೆಂದರು. ಕ್ಷೇತ್ರ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಮಾತ್ರ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ವಿತರಣೆ ಮಾಡುತ್ತಿದ್ದು, ಇದನ್ನು ಮುಂದುವರೆಸುವಂತೆ ಸೂಚಿಸಿದರು.

      ಇಂತಹ ತುರ್ತು ಸಭೆಯಲ್ಲಿ ಅಧಿಕಾರಿಗಳು ನಿಖರವಾದ ಮಾಹಿತಿಯನ್ನು ನೀಡಬೇಕು, ಅನುಷ್ಠಾನಗೊಳದೇ ಇದ್ದ ಕಾಮಗಾರಿಗಳ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡಬೇಕು, ಯಾವುದೇ ಅಧಿಕಾರಿ ಮಾಹಿತಿ ನೀಡುವಲ್ಲಿ ಲೋಪವೆಸಗದಂತೆ ಜಾಗೃತೆ ವಹಿಸಿಬೇಕು, ಸರ್ಕಾರ ನೀಡುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಬರದಿಂದ ನರಳುತ್ತಿರುವ ಜನತೆಗೆ ನೀಡುವಲ್ಲಿ ಅಧಿಕಾರಿಗಳು ಮಾನವೀಯತೆಯ ದೃಷ್ಠಿಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳಿಂದ ಮಾಹಿತಿ ಪಡೆದರು.

      ಪ್ರಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಈಶ್ವರಪ್ರಸಾದ್ ಸ್ವಾಗತಿಸಿದರು. ಚಿತ್ರದುರ್ಗ ತಹಶೀಲ್ದಾರ್ ಕಾಂತರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯ್ಕ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap