ಬರದ ನಾಡಲ್ಲಿ ಬಿರುಸಾದ ರಾಜಕೀಯ…!

ಕಾಂಗ್ರೇಸ್ ಟಿಕೆಟ್ : ಪರ-ವಿರೋಧದ ಲಾಭಿ

ಪಾವಗಡ:

ವಿಶೇಷ ಲೇಖನ:- ರಾಮಾಂಜಿನಪ್ಪ

    2023ನೇ ಸಾಲಿನ ವಿಧಾನಸಭಾ ಚುನಾವಣೆ ಘೋಷಣೆ ಸಮೀಪಿಸುತ್ತಿರುವ ಹೊತ್ತಿಲಲ್ಲೇ ಸ್ಪರ್ಧಾಕಾಂಕ್ಷಿಗಳು ಹೆಚ್ಚುತ್ತಿದ್ದಾರೆ. ಈವರೆಗಿನ ಎಲ್ಲ ಚುನಾವಣೆಗಳನ್ನು ಮೀರಿಸುವಷ್ಟರ ಮಟ್ಟಿಗೆ ರಾಜಕೀಯ ತಿರುವುಗಳು, ಸ್ಪರ್ಧೆಯೊಡ್ಡಲು ಅಣಿಯಾಗುತ್ತಿರುವ ಬೆಳವಣಿಗೆಗಳು ಕಂಡುಬರುತ್ತಿವೆ.

    ಕಳೆದ 70 ವರ್ಷಗಳ ಚುನಾವಣೆಗಳನ್ನು ಮೀರಿಸುವ, ನೆರೆಯ ಆಂಧ್ರ ಪ್ರದೇಶ ಶೈಲಿಯ ಚುನಾವಣೆ ಇಲ್ಲಿ ನಡೆಯಬಹುದೆಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಬೆರಳೆಣಿಕೆಯ ಆಕಾಂಕ್ಷಿಗಳು ಕಂಡುಬರುತ್ತಿದ್ದರು. ಹೇಳಿಕೇಳಿ ಇದು ಬರಗಾಲ ಪೀಡಿತ ಪ್ರದೇಶ. ಕೂಲಿ ಕಾರ್ಮಿಕರೇ ಹೆಚ್ಚಿರುವ ಕ್ಷೇತ್ರ. ಇಂತಹ ಪ್ರದೇಶದಲ್ಲಿ ರಾಜಕೀಯ ಸಂಚಲನ ಹೆಚ್ಚು ತಾಂಡವವಾಡುತ್ತಿದೆ. ಅಲ್ಲಿ ಇಲ್ಲಿ ಹಣ ಮಾಡಿಕೊಂಡವರು, ಈಗಾಗಲೇ ದುಡಿದಿರುವವರು, ರಾಜಕೀಯ ಕ್ಷೇತ್ರದಲ್ಲಿ ಇರುವವರು ದಾಳ ಉರುಳಿಸುತ್ತಿದ್ದಾರೆ.

   ಎರಡು ರೀತಿಯ ಚಿತ್ರಣಗಳು ತಾಲ್ಲೂಕಿನಲ್ಲಿ ಕಂಡುಬರುತ್ತಿದೆ. ಕೆಲವು ಪಕ್ಷಗಳ ಆಕಾಂಕ್ಷಿಗಳು ತಮಗೆ ಬೇಕಾದ ಮುಖಂಡರ ಹಿಂದೆ ಸುತ್ತುತ್ತಿರುವುದು ಒಂದು ಕಡೆಯಾದರೆ, ಇನ್ನು ಕೆಲವರು ಈಗಾಗಲೇ ಕ್ಷೇತ್ರಾದ್ಯಂತ ಮತದಾರರನ್ನು ಭೇಟಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜನರ ಕುಂದುಕೊರತೆಗಳನ್ನು ಆಲಿಸುವ ಮೂಲಕ ಅವರ ಮನಸ್ಸು ಸೆಳೆಯುವ ಪ್ರಯತ್ನದಲ್ಲಿ ಹಲವು ಆಕಾಂಕ್ಷಿಗಳು ಗ್ರಾಮಗಳತ್ತ ಭೇಟಿ ನೀಡುತ್ತಿದ್ದಾರೆ. ಎಲ್ಲಿಯೇ ಸಭೆ ಸಮಾರಂಭ ನಡೆದರೂ ಅಂತಹ ಕಡೆಗಳಲ್ಲಿ ಇವರು ಹಾಜರಿರುತ್ತಾರೆ.

    ಕಳೆದ 70 ವರ್ಷಗಳಿಂದ ಇಲ್ಲಿ ಆಳ್ವಿಕೆ ಮಾಡಿದವರು ಶಾಶ್ವತ ಯೋಜನೆಗಳನ್ನು ಜಾರಿಗೆ ತಂದಿಲ್ಲ, ಕ್ಷೇತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಿಲ್ಲ. ಕೃಷಿ ಕೂಲಿ ಕಾರ್ಮಿಕರು ವಲಸೆ ಹೋಗುವುದು ತಪ್ಪಿಲ್ಲ. ನಿರುದ್ಯೋಗಿ ಯುವಕರಿಗಾಗಿ ಯಾವುದೇ ಶಾಶ್ವತ ಯೋಜನೆಗಳಿಲ್ಲ. ಇಷ್ಟಾದರೂ ಜನರಿಂದ ಗೆದ್ದ ಪ್ರತಿನಿಧಿಗಳು ಮಾತ್ರ ಅಭಿವೃದ್ಧಿ ಹೊಂದುತ್ತಿದ್ದಾರೆ. ಮತದಾರ ಮಾತ್ರ ಬವಣೆ ಅನುಭವಿಸುತ್ತಿದ್ದಾರೆ ಎಂಬ ಮಾತುಗಳು ಸಾರ್ವತ್ರಿಕವಾಗಿ ಕೇಳಿಬರುತ್ತಿವೆ.

ಕಾಂಗ್ರೆಸ್‍ನಲ್ಲಿ ಫೈಟ್

    ಮಾಜಿ ಸಚಿವರು, ಹಾಲಿ ಶಾಸಕ ವೆಂಕಟರಮಣಪ್ಪ ಅವರ ಮಗ ಹೆಚ್.ವಿ.ವೆಂಕಟೇಶ್ ಕಾಂಗ್ರೆಸ್‍ನಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಬಹಳ ದಿನಗಳಿಂದ ತಯಾರಿ ನಡೆಸಿದ್ದಾರೆ. ಹೆಚ್.ವಿ.ವೆಂಕಟೇಶ್ ಪರ ಕೆಲ ಕಾರ್ಯಕರ್ತರು ಬ್ಯಾಟಿಂಗ್ ಆಡುತ್ತಿದ್ದರೆ, ಇನ್ನು ಕೆಲವರು ಈ ಕುಟುಂಬ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡಬೇಕು, ಹೊಸಬರಿಗೂ ಅವಕಾಶ ಸಿಗಲಿ ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಆದರೆ ವೆಂಕಟರವಣಪ್ಪ ಕಾಂಗ್ರೆಸ್ ಪಕ್ಷವನ್ನು ಬೆಳೆಸಿಕೊಂಡು ಬಂದಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ನೀಡಲಿ ಎಂಬ ಮಾತುಗಳೂ ಸಹ ಅಲ್ಲಲ್ಲಿ ಕೇಳಿಬರುತ್ತಿವೆ.

   ಕಾಂಗ್ರೆಸ್ ಪಕ್ಷದಿಂದ ಹೆಚ್ಚಿಗೆ ಸ್ಪರ್ಧಿಸಿರೋದು ವೆಂಕಟರವಣಪ್ಪ ಮಾತ್ರ. ಮಾದಿಗ ಜನಾಂಗದಲ್ಲಿ ಅಂಜಿನಪ್ಪ ಎರಡು ಸಲ ಬಿಟ್ಟರೆ ಕೆಂಚಪ್ಪ, ಕೆ.ಆರ್.ತಿಮ್ಮರಾಯಪ್ಪ ಒಂದೊಂದು ಅವಧಿಗೆ ಮಾತ್ರ ಶಾಸಕರಾಗಿದ್ದಾರೆ. ನಂತರ ಇವರಿಬ್ಬರೂ ರಾಜಕೀಯ ಕ್ಷೇತ್ರದಲ್ಲಿ ಬೆಳೆದಿಲ್ಲ. ಕ್ರಾಂತಿರಂಗ ಪಕ್ಷದಿಂದ ಉಗ್ರ ನರಸಿಂಹಪ್ಪ ಆಯ್ಕೆಯಾಗಿದ್ದರು. ಇವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್‍ಗಾಗಿ ಹೋರಾಟ ನಡೆಸಿದ್ದರೂ ಕೂಡ ಇದುವರೆಗೂ ಇವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗಲೇ ಇಲ್ಲ. ಪಾವಗಡ ತಾಲ್ಲೂಕಿನಲ್ಲಿ ಪರಿಶಿಷ್ಟ ಜನಾಂಗದಲ್ಲಿ ಮಾದಿಗರ ಮತದಾರರು ಹೆಚ್ಚಿಗೆ ಇದ್ದಾರೆ. ಆದರೂ ಸಹ ಕಾಂಗ್ರೆಸ್ ಪಕ್ಷದಲ್ಲಿ ಈ ಸಮುದಾಯಕ್ಕೆ ಟಿಕೆಟ್ ನೀಡದೆ ತಮ್ಮನ್ನು ಕಡೆಗಣಿಸುತ್ತಿದ್ದು, ತಮ್ಮ ಜನಾಂಗದ ಆಕಾಂಕ್ಷಿಗಳಿಗೆ ಟಿಕೆಟ್ ನೀಡಬೇಕೆಂದು ಈ ವರ್ಗ ಒತ್ತಾಯಿಸುತ್ತಿದೆ.

   ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಗಳಾಗಿ ಲೋಕಸಭಾ ಮಾಜಿ ಸದಸ್ಯ ಚಂದ್ರಪ್ಪ, ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಕೆಂಚಮಾರಯ್ಯ, ಮಾಜಿ ಶಾಸಕ ಸೋಮ್ಲಾನಾಯ್ಕ್ ಮಗಳಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗಾಯತ್ರಿಬಾಯಿ, ಕೋರ್ಟ್ ನರಸಪ್ಪ ಇವರುಗಳು ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧಾ ಆಕಾಂಕ್ಷಿಗಳಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ಟಿಕೆಟ್‍ಗಾಗಿ ಆಕಾಂಕ್ಷಿಗಳ ಪೈಪೋಟಿ

    ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಕೆಲ ಪ್ರಮುಖ ಮುಖಂಡರು ಹೊಸಬರಿಗೆ ಟಿಕೆಟ್ ನೀಡಬೇಕೆಂದು ರಾಜ್ಯದ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮನವಿ ಪತ್ರ ಸಲ್ಲಿಸಿದ್ದರು. ಸಂಭಾವ್ಯ ಪಟ್ಟಿಯಲ್ಲಿ ಎಚ್.ವಿ.ವೆಂಕಟೇಶ್ ಹೆಸರು ಪ್ರಚಾರಗೊಂಡಿದ್ದರೂ ಇವರೆ ಅಂತಿಮವಲ್ಲ. ರಾಷ್ಟ್ರಿಯ ಪಕ್ಷಗಳಲ್ಲಿ ಆಕಾಂಕ್ಷಿಗಳ ಬೇಡಿಕೆಯಂತೆ ಯಾರನ್ನಾದರೂ ಅಭ್ಯರ್ಥಿಯನ್ನಾಗಿಸುವ ತೀರ್ಮಾನ ಹೈಕಮಾಂಡ್ ಕೈಯಲ್ಲಿ ಇರುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರು ಹೇಳುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ.

   ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಗೊಂಡ ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ಮನವೊಲಿಸದೆ ಇರುವ ಕಾರಣ ಕಾಂಗ್ರೆಸ್ ಪಕ್ಷದಲ್ಲಿ ಎರಡು ಗುಂಪುಗಳಾಗಿದೆ. ಟಿಕೆಟ್ ಹೊಸಬರಿಗೆ ಕೊಟ್ಟರೆ ಶ್ರಮ ವಹಿಸುತ್ತೇವೆ ಎಂಬ ಕೂಗೂ ಕೇಳಿ ಬರುತ್ತಿದೆ.ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಮಾಜಿ ಸಚಿವ ವೆಂಕಟರವಣಪ್ಪ ಹಾಗೂ ಎಚ್.ವಿ.ವೆಂಕಟೇಶ್ ಛಲಬಿಡದೆ ಕಾರ್ಯಕರ್ತರನ್ನು ಒಗ್ಗೂಡಿಸುತಿದ್ದಾರೆ. ಬೇರೆ ಪಕ್ಷದಲ್ಲಿ ಅಸಮಾಧಾನಗೊಂಡಿರುವ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಘೋಷಣೆ

   ಪಂಚರತ್ನ ರಥಯಾತ್ರೆ ವೇಳೆ ಹೆಚ್.ಡಿ.ಕುಮಾರಸ್ವಾಮಿ ಅವರು ಕೆ.ಎಂ.ತಿಮ್ಮರಾಯಪ್ಪ ಅವರೇ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದ್ದರು. ಇದು ಎಲ್ಲ ಕಡೆ ಕೇಳಿಬರುತ್ತಿರುವ ಅಭಿಪ್ರಾಯ. ಆದರೂ ಕೆಲವರು ಹೊಸಬರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ.

   ಜೆ.ಡಿ.ಎಸ್ ಪಕ್ಷದಿಂದ ನೇರಳಕುಂಟೆ ನಾಗೇಂದ್ರ ಕುಮಾರ್‍ಗೆ ಟಿಕೆಟ್ ಕೊಡಲು ಪಕ್ಷದ ಕೆಲಮುಖಂಡರು ಒತ್ತಾಯ ಮಾಡಿದ್ದಾರೆ. ಆದರೆ ಟಿಕೆಟ್ ಸಿಗುವುದು ಕಷ್ಟಕರ. ಈ ಹಿನ್ನೆಲೆಯಲ್ಲಿ ನಾಗೇಂದ್ರ ಕುಮಾರ್ ಹಾಗೂ ಅಸಮಾಧಾನಗೊಂಡ ಕೆಲ ಜೆಡಿಎಸ್ ಕಾರ್ಯಕರ್ತರು ಜೊತೆಗೂಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಟಿಕೆಟ್‍ನ್ನು ನಾಗೇಂದ್ರ ಕುಮಾರ್‍ಗೆ ಕೊಡಬೇಕೆಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯನ್ನು ಭೇಟಿ ಮಾಡಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ. ಅಸಮಾಧಾನಿತರನ್ನು ಸಮಾದಾನಪಡಿಸುವ ಕೆಲಸದಲ್ಲಿ ತಿಮ್ಮರಾಯಪ್ಪ ಮಗ್ನರಾಗಿದ್ದಾರೆ.

ಖಾತೆ ತೆರೆಯದ ಬಿಜೆಪಿ ಪಕ್ಷ

   ಬಿ.ಜೆ.ಪಿ ಪಕ್ಷದ ಟಕೆಟ್ ಆಕಾಂಕ್ಷಿಗಳು 2-3 ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದ್ದರು. ಅಂತಹ ಅಭ್ಯರ್ಥಿಗಳನ್ನು ಬಿಟ್ಟು, ವಲಸೆ ಬಂದಂತವರಿಗೆ ಟಿಕೆಟ್ ನೀಡಿ, ಸ್ಥಳೀಯರಿಗೆ ಅನ್ಯಾಯ ಮಾಡುತ್ತಿರುವುದೇ ಪಕ್ಷ ಹೀನಾಯವಾಗಿ ಸೋಲಲು ಕಾರಣವಾಗಿದೆ. ಸ್ಥಳೀಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ ಆಕಾಂಕ್ಷಿಗಳಿಗೆ ಟಿಕೆಟ್ ನೀಡಿದರೆ ಮಾತ್ರ ಗೆಲ್ಲುವ ಹಂತಕ್ಕೆ ಹೋಗಲು ಸಾಧ್ಯ ಎಂದು ಮುಖಂಡರು ನೋವನ್ನು ತೋಡಿಕೊಂಡಿರುವುದೂ ಬೆಳಕಿಗೆ ಬಂದಿದೆ.

ಬಿಜೆಪಿಯಲ್ಲಿ ಟಿಕೆಟ್‍ಗಾಗಿ ಪೈಪೋಟಿ

   ಬಿಜೆಪಿ ಪಕ್ಷದ ಆಕಾಂಕ್ಷಿಗಳಾಗಿ ಕೊತ್ತೂರು ಹನುಮಂತರಾಯಪ್ಪ, ಕೃಷ್ಣನಾಯ್ಕ್, ಸಾಕೇಲ್‍ಶಿವಕುಮಾರ್ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಯಾರಿಗೆ ಪಕ್ಷದ ವರಿಷ್ಠರು ಮಣೆ ಹಾಕುತ್ತಾರೊ ನೋಡಬೇಕು. ಇಲ್ಲವಾದರೆ ವಲಸೆ ಬಂದಂತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಾರೋ ಗೊತ್ತಿಲ್ಲ. ಹೋಬಳಿ ಮಟ್ಟದಲ್ಲಿ ಮನೆ ಮನೆಗೆ ಹೋಗಿ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ತಿಳಿಸುವ ಪ್ರಚಾರದಲ್ಲಿ ಟಿಕೆಟ್ ಆಕಾಂಕ್ಷಿಗಳು ಮತ್ತು ಮುಖಂಡರು ತೊಡಗಿದ್ದಾರೆ.

   ಪಾವಗಡ ಮೀಸಲು ಕ್ಷೇತ್ರದಲ್ಲಿ ಮೂರು ಪಕ್ಷಗಳಲ್ಲಿಯೂ ಭಿನ್ನಮತ ಎದ್ದು ಕಾಣುತ್ತಿದೆ. ಯಾರು ಯಾವ ಪಕ್ಷಕ್ಕೆ ಒಲವು ತೋರಿಸುತ್ತಾರೋ ಗೊತ್ತಿಲ್ಲ. ಚುನಾವಣೆ ಸಮೀಪದಲ್ಲಿ ಯಾವ ಪಕ್ಷದ ಮುಖಂಡ, ಯಾವ ಪಕ್ಷಕ್ಕೆ ಜಿಗಿಯುತ್ತನೋ ಕಾದು ನೋಡಬೇಕಾಗಿದೆ.

   ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿ ತನಕ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಪಕ್ಷಗಳು ಮಾತ್ರ ಆಡಳಿತ ಚುಕ್ಕಾಣಿ ಹಿಡಿದಿದ್ದು, ಇದುವರೆಗೂ ಬಿಜೆಪಿ ಪಕ್ಷದ ಅಭ್ಯರ್ಥಿ ಜಯಗಳಿಸಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತ ಇರುವುದರಿಂದ ಒಂದಷ್ಟು ಮತಗಳನ್ನು ಸೆಳೆಯಲು ಅವಕಾಶವಾಗಲೂಬಹುದು.

  ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗೇಂದ್ರಕುಮಾರ್ ಟಿಕೆಟ್ ಕೈ ತಪ್ಪಿದ ನಂತರ ಬಳ್ಳಾರಿಯ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯ ನೂತನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಲಾಂಚ್‍ನಲ್ಲಿ ಭಾಗವಹಿಸಿದ್ದರು. ಪಾವಗಡ ಮೀಸಲು ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಕೊಡಿ ಎಂದು ರೆಡ್ಡಯನ್ನು ಕೇಳಿರುವುದಾಗಿ ತಿಳಿದು ಬಂದಿದೆ.

Recent Articles

spot_img

Related Stories

Share via
Copy link
Powered by Social Snap