ದಾವಣಗೆರೆ :
ಮಳೆಯ ಕೊರತೆಯಿಂದ ರೈತರು ಬೆಳೆದಿರುವ ಬೆಳೆ ಒಣಗಿರುವ ಹಿನ್ನೆಲೆಯಲ್ಲಿ ದಾವಣಗೆರೆಯನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಬೇಕು ಹಾಗೂ ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಯದೆವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ತಾಲ್ಲೂಕಿನ ಕೆಲ ಭಾಗದಲ್ಲಿ ಮಾತ್ರ ಭದ್ರಾ ನಾಲೆ ಹಾದು ಹೋಗಿದ್ದು, ಕೆಲ ಪ್ರದೇಶಗಳ ಬೆಳೆಗೆ ಮಾತ್ರ ಈ ನಾಲೆಯ ನೀರು ಲಭ್ಯವಾಗಲಿದೆ. ಆದರೆ, ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಸಾಲಸೋಲ ಮಾಡಿ ಬೆಳೆದಿರುವ ಮೆಕ್ಕೆಜೋಳ, ರಾಗಿ, ಹತ್ತಿ, ಶೇಂಗಾ ಮತ್ತಿತರೆ ಬೆಳೆಗಳು ಮಳೆಯ ಕೊರತೆಯಿಂದ ಸಂಪೂರ್ಣ ಒಣಗಿ ಹೋಗಿವೆ. ಹೀಗಾಗಿ ಮಳೆಯಾಶ್ರಿತ ಪ್ರದೇಶದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆಂದು ಆರೋಪಿಸಿದರು.
ತಾಲೂಕಿನಲ್ಲಿ ಬೆಳೆ ನಷ್ಟ ಆಗಿರುವ ಬಗ್ಗೆ ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಮುಖಾಂತರ ವರದಿ ಪಡೆದುಕೊಂಡು ಸರ್ಕಾರಕ್ಕೆ ಕೂಡಲೇ ವರದಿ ಸಲ್ಲಿಸಿ, ದಾವಣಗೆರೆ ತಾಲೂಕನ್ನು ಕನ್ನು ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಆಗ್ರಹಿಸಿದರು.
ಸುಮಾರು ಕಳೆದ ಮೂರು ದಶಕಗಳಿಂದ ತಾಲೂಕಿನಲ್ಲಿ ಸಾವಿರಾರು ರೈತರು ಬಗರ್ಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿ ನಡೆಸಿಕೊಂಡು ಬಂದಿದ್ದಾರೆ. ಈ ಸಾಗುವಳಿದಾರರು ಹಲವು ವರ್ಷಗಳಿಂದ ಸತತವಾಗಿ ಹಕ್ಕು ಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದರು. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇವರಿಗೆ ಹಕ್ಕುಪತ್ರ ನೀಡದ ಕಾರಣ ಇವರುಗಳಿಗೆ ಸರ್ಕಾರದಿಂದ ಬೆಳೆ ನಷ್ಟ ಪರಿಹಾರ ಅಥವಾ ವಿಮಾ ಸೌಲಭ್ಯ ಇವರಿಗೆ ಅನ್ವಯಿಸುವುದಿಲ್ಲ. ಆದ್ದರಿಂದ, ಇವರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಕೂಡಲೇ ಹಕ್ಕು ಪತ್ರ ವಿತರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸೇನೆಯ ಜಿಲ್ಲಾಧ್ಯಕ್ಷ ಅರಸನಾಳ್ ಸಿದ್ದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ್, ತಾಲ್ಲೂಕು ಅಧ್ಯಕ್ಷ ಆಲೂರು ಪರಶುರಾಮ್, ಹುಚ್ಚವ್ವನಹಳ್ಳಿ ಪ್ರಕಾಶ್, ಧರಣೇಶ್, ಸಾಧಿಕ್, ಹನುಮಂತಪ್ಪ, ಗುಮ್ಮನೂರ್ ಕೃಷ್ಣಮೂರ್ತಿ, ನಾಗನೂರು ನಾಗೇಂದ್ರಪ್ಪ, ಪಮೇನಹಳ್ಳಿ ಗೌಡ್ರ ಶೇಖರಪ್ಪ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
