ತುರುವೇಕೆರೆ:
ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಮತ್ತು ಹೇಮಾವತಿ ನೀರು ಹರಿಸಿ ತಾಲ್ಲೂಕಿನ ಎಲ್ಲಾ ಕೆರೆ ಕಟ್ಟೆಗಳನ್ನು ತುಂಬಿಸಬೇಕೆಂದು ಅಗ್ರಹಿಸಿ ಇದೇ 25 ರಂದು ತುರುವೇಕೆರೆ ಬಂದ್ ನಡೆಸಲಾಗುವುದು ಎಂದು ತಾ|| ರೈತಸಂಘದ ಅಧ್ಯಕ್ಷ ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಸಕಾಲಕ್ಕೆ ಮಳೆ ಬಾರದೆ ಬಿತ್ತಿದ ಬೆಳೆಗಳು ನಾಶವಾಗಿ ರೈತರು ತೀವ್ರ ಬರಗಾಲಕ್ಕೆ ತುತ್ತಾಗಿದ್ದಾರೆ. ಕಳೆದ ಐದಾರು ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿ ಮಳೆ ಬಾರದ ಕಾರಣ 1000 ದಿಂದ 1500 ಅಡಿ ಆಳ ಕೊರೆದರೂ ಕುಡಿಯಲು ನೀರು ಸಿಗದೆ ಅಂತರ್ಜಲ ಕುಸಿದಿದೆ. ತಾಲ್ಲೋಕಿಗೆ ನೀರು ಹರಿಸಲು ಜಿಲ್ಲಾಡಳಿತ ಮೀನ ಮೇಷ ಎಣಿಸುತ್ತಿದೆ. ಇಲ್ಲಿಯವರೆವಿಗೂ 2 ಟಿಎಂಸಿ ನೀರೂ ಸಹಾ ತಾಲ್ಲೂಕಿಗೆ ಹರಿದಿಲ್ಲ.
ಕೂಡಲೇ ತಾಲ್ಲೂಕಿನ ಕೆರೆಕಟ್ಟೆಗಳಿಗೆ ಹೇಮೆ ನೀರು ಹರಿಸಬೇಕು. ಹಾಗು ನಿಗದಿತ ಸಮಯದಲ್ಲಿ ಮಳೆಬಾರದೆ ಅಲ್ಪ ಸ್ವಲ್ಪ ರೈತರು ಸಾಲ ಶೂಲಾ ಮಾಡಿ ಬಿತ್ತಿದ ಬೆಳೆಗಳು ಮಳೆ ಬಾರದೆ ಹಿಂಗಾರು ವಿಫಲವಾಗಿದೆ. ಆದರೂ ತುಮಕೂರು ಜಿಲ್ಲೆಯಲ್ಲಿ 9 ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು ತುರುವೇಕೆರೆ ತಾಲ್ಲೂಕನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಕೂಡಲೇ ತುರವೇಕೆರೆ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಇದೆ 25 ರ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ, ಎಲ್ಲಾ ಜನಪರ ಸಂಘ ಸಂಸ್ಥೆಗಳು ಹಾಗು ಜನಪರ ಹಿತಚಿಂತಕರು ಪಕ್ಷಾತೀತವಾಗಿ ಒಗ್ಗೂಡಿ ತುರುವೇಕೆರೆ ಬಂದ್ ಗೆ ಕರೆ ನೀಡಿದ್ದು ಅಂದು ಸಾವಿರಾರು ಸಂಖ್ಯೆಯಲ್ಲಿ ರೈತರು, ನಗರ ವಾಸಿಗಳು, ವಿಧ್ಯಾರ್ಥಿ ವೃಂದ, ಸ್ತ್ರೀ ಶಕ್ತಿ ಸಂಘಗಳು ಬಾಗವಹಿಸುವಂತೆ ತಿಳಿಸಿದ್ದಾರೆ ಹಾಗು ಅಂದು ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಶಾಂತಿಯಿಂದ ಬಂದ್ ಆಚರಿಸಲು ಪಟ್ಟಣದ ವ್ಯಾಪಾರಿಗಳು, ಹೋಟೆಲ್ ಹಾಗು ವಾಹನ ಮಾಲೀಕರು, ವಿಧ್ಯಾಸಂಸ್ಥೆಗಳು, ಸರ್ಕಾರಿ ಹಾಗೂ ಖಾಸಗಿ ಇಲಾಖೆಗಳು, ವಕೀಲರು ತಮ್ಮ ತಮ್ಮ ವಹಿವಾಟುಗಳನ್ನು ನಿಲ್ಲಿಸಿ ಬಂದ್‍ನಲ್ಲಿ ಪಾಲ್ಗೊಳ್ಳಲು ವಿನಂತಿಸಿದ್ದಾರೆ.
ಈ ಸಂಧರ್ಭದಲ್ಲಿ ತಾ|| ಗೌರವಾಧ್ಯಕ್ಷ ಅಸ್ಲಾಂ ಪಾಷ, ರೈತ ಮುಖಂಡರುಗಳಾದ ರಹಮತ್, ಭೈರಪ್ಪ, ನಾಗರಾಜು, ಎಂ.ಬಿ.ಶಿವಬಸವಯ್ಯ, ಸುನಿಲ್, ಚಂದ್ರಪ್ಪ, ಕುಮಾರ್, ಪರಮೇಶ್ವರಯ್ಯ, ಗಿರಿಯಪ್ಪ, ಸಿದ್ದರಾಜು, ರಾಜಣ್ಣ, ಶಿವಕುಮಾರ್, ದೇವರಾಜು sಸೇರಿದಂತೆ ಇತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
