ಚಿಕ್ಕನಾಯಕನಹಳ್ಳಿ
ಬಲಿಜ ಸಮಾಜವು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗವಾಗಿದ್ದು, ಸಮಾಜವನ್ನು ಪ್ರವರ್ಗ 2ಎ ಗೆ ಸೇರಿಸಬೇಕು ಎಂದು ತಾಲ್ಲೂಕು ಬಲಿಜ ಸಂಘದ ಗೌರವಾಧ್ಯಕ್ಷ ರಮೇಶ್‍ಕುಮಾರ್ ಹೇಳಿದರು.
ಪಟ್ಟಣದ ಧರ್ಮಾವರ ಬೀದಿಯಲ್ಲಿರುವ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಶ್ರೀ ಯೋಗಿನಾರಾಯಣ ತಾಲ್ಲೂಕು ಬಲಿಜ ಸಂಘದ ವತಿಯಿಂದ ಯೋಗಿನಾರಾಯಣ ಜಯಂತೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುವಂತೆ ಮಾಜಿ ಪ್ರಧಾನಿ ಮಂತ್ರಿ ಎಚ್.ಡಿ.ದೇವೇಗೌಡ ಅವರಲ್ಲಿ ಮನವಿ ಮಾಡಲಾಗುವುದು. ಶ್ರೀ ಯೋಗಿನಾರಾಯಣ ಯತೀಂದ್ರರೆ ಕೈವಾರ ತಾತಯ್ಯ ಹೆಸರಿನಲ್ಲಿ ಖ್ಯಾತರಾಗಿದ್ದು, ಅವರ ಕಾಲಜ್ಞಾನ ಜಗತ್ತಿನಲ್ಲಿ ಪ್ರಖ್ಯಾತಿ ಹೊಂದಿದೆ. ಎಮ್.ಎಸ್.ರಾಮಯ್ಯ ಅವರು ಸಮಾಜದ ಏಳಿಗೆಗಾಗಿ ಉತ್ತಮ ಕೆಲಸವನ್ನು ಮಾಡಿದ್ದು, ಬೆಂಗಳೂರಿನ ವೈದ್ಯಕೀಯ ಕಾಲೇಜನ್ನು ತೆರೆದು ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಜನಾಂಗದ ಬಡ ವಿದ್ಯಾರ್ಥಿಗಳಿಗೆ ನೆರವಾಗಿ ಎಂದರು.
ಕಾರ್ಯಕ್ರಮದಲ್ಲಿ ಯೋಗಿ ನಾರಾಯಣ ಬಲಿಜ ಸಂಘದ ಅಧ್ಯಕ್ಷ ಲಕ್ಷ್ಮಣಪ್ಪ ಮಾತನಾಡಿ, ರಮೇಶ್‍ಕುಮಾರ್ ತಾಲ್ಲೂಕಿನ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಬಲಿಜ ಸಮಾಜದ ಅಭಿವೃದ್ದಿಗಾಗಿ ರೂ.10 ಕೋಟಿ ಹಣವನ್ನು ಕೊಡಿಸಿದ್ದಾರೆ. ಸಮಾಜವು ಸಂಘಟನಾತ್ಮಕವಾಗಿ ಬೆಳೆಯುತ್ತಿದ್ದು, ಪ್ರತಿ ವರ್ಷ ಯೋಗಿನಾರಾಯಣ ಜಯಂತಿಯನ್ನು ಅದ್ದೂರಿಯಾಗಿ ನಡೆಸಿಕೊಂಡು ಬರಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಎ.ಪಿ.ಎಮ್.ಸಿ ಸುರೇಶ್, ಅಮರನಾಥ್, ಮಂಜುನಾಥ್, ಪೇಟೆ ನರಸಿಂಹಯ್ಯ, ಸಿ.ಪಿ.ಚಂದ್ರಶೇಖರ್ ಶೆಟ್ಟಿ, ತೊಟ್ಟಿಮನೆ ಪಾಪಯ್ಯ, ಜಿಲ್ಲಾ ಸಂಘದ ಸದಸ್ಯ ರಂಗಸ್ವಾಮಿ, ಎಚ್.ಎಮ್.ಟಿ ಜಯರಾಮ್, ಪುಟ್ಟಯ್ಯ ಹಾಜರಿದ್ದರು.
