ಬೆಂಗಳೂರು:
ಪೆಟ್ರೋಲ್ ಮತ್ತು ಡೀಸೆಲ್ ದರವು ಪ್ರತಿದಿನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಸ್ ಪ್ರಯಾಣದ ದರವನ್ನು ಹೆಚ್ಚಿಸಲು ಚಿಂತನೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ಕೇಂದ್ರ ಸರ್ಕಾರವು ಪ್ರತಿದಿನ ತೈಲ ಬೆಲೆಯಲ್ಲಿ ಏರಿಕೆ ಮಾಡುತ್ತಿರುವ ಕಾರಣ ಕಳೆದ ಮೂರು ತಿಂಗಳಲ್ಲಿ ಡೀಸೆಲ್ ದರ ಏರಿಕೆಯಿಂದ 180 ಕೋಟಿ ರೂ.ಗಳು ಸಾರಿಗೆ ನಿಗಮವು ನಷ್ಟವನ್ನನುಭವಿಸಿದೆ. ಅಲ್ಲದೆ, ರಾಜ್ಯದ ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗಗಳೂ ನಷ್ಟ ಅನುಭವಿಸುತ್ತಿವೆ. ಇದರಿಂದಾಗಿ ಬಸ್‍ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಖಾಸಗಿ ಬಸ್‍ಗಳೂ ಸಹ ಪ್ರಯಾಣದ ದರವನ್ನು ಏರಿಕೆ ಮಾಡಲಿವೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಬಸ್ ದರ ಏರಿಕೆಯ ಪ್ರಸ್ತಾವನೆಯನ್ನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಂದಿಟ್ಟು ನಂತರ ಅವರೊಂದಿಗೆ ಚರ್ಚಿಸಿ, ಈ ಪ್ರಯಾಣದ ದರದಲ್ಲಿ ಶೇ.18 ರಷ್ಟು ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದರು.
ಸದ್ಯಕ್ಕೆ ಗೌರಿ-ಗಣೇಶ ಹಬ್ಬಕ್ಕೆ ಈ ಬೆಲೆ ಏರಿಕೆ ಮಾಡಲಾಗುವುದಿಲ್ಲ ಎಂದ ಅವರು, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಅಗತ್ಯವಿರುವ ಜಿಲ್ಲೆಗಳಿಗೆ ಸರ್ಕಾರದಿಂದಲೇ ಹೆಚ್ಚಿನ ಸರ್ಕಾರಿ ಬಸ್‍ಸೇವೆ ಕಲ್ಪಿಸಲು ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ