ವೈ.ಎನ್.ಹೊಸಕೋಟೆ:
ಬಾಗಿಲಿಗೆ ಚರಂಡಿ ನೀರು ನುಗ್ಗಿ ಶೇಖರಣೆಗೊಳ್ಳುತ್ತಿರುವುದರಿಂದ ಬೇಸತ್ತ ಕುಟುಂಬ ಮನೆಯನ್ನು ಖಾಲಿ ಮಾಡಿರುವ ಘಟನೆ ಗ್ರಾಮದ ನೆಹರೂ ಬಡಾವಣೆಯಲ್ಲಿ ನಡೆದಿದೆ.
ನೆಹರೂ ಬಡಾವಣೆಯ ನಿವಾಸಿಗಳಿಗೆ ಅನುಕೂಲವಾಗುವಂತೆ ಪಂಚಾಯಿತಿ ವತಿಯಿಂದ ನಿರ್ಮಾಣವಾಗಿರುವ ಚರಂಡಿ ನೀರಿಗೆ ಅಡ್ಡಲಾಗಿ ಖಾಸಗಿ ವ್ಯಕ್ತಿಯೊಬ್ಬರು ತನ್ನ ನಿವೇಶನಗಳನ್ನಾಗಿ ವಿಂಗಡಿಸಿರುವ ಜಮೀನಿನಲ್ಲಿ ಮಣ್ಣನ್ನು ಅಡ್ಡಲಾಗಿ ತುಂಬಿದ್ದಾರೆ. ಪರಿಣಾಮವಾಗಿ ಚರಂಡಿ ನೀರು ಮುಂದೆ ಹೋಗಲು ಸಾಧ್ಯವಾಗದೆ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.
ಈ ಪ್ರದೇಶದಲ್ಲಿ ವಾಸವಿರುವ ನಾಗರಿಕರಿಗೆ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿವೆ. ಇದನ್ನು ಸಹಿಸಲಾಗದ ಇಲ್ಲಿನ ವಾಸಿಗಳು ಮನೆ ಖಾಲಿ ಮಾಡಿದ್ದಾರೆ. ಇದು ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲನಿಯಾಗಿದ್ದು, ಸುಮಾರು 100-120 ಕುಟುಂಬಗಳು ವಾಸ ಮಾಡುತ್ತಿವೆ. ಇದಕ್ಕೆ ಹೊಂದಿಕೊಂಡೆ ಚರಂಡಿ ನೀರಿನ ಸಂಗ್ರಹ ಆಗುತ್ತಿರುವುದರಿಂದ ಕೊಳಗೇರಿಯಾಗಿ ಪರಿಣಮಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಪಿರ್ಯಾದು ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸುತ್ತಾರೆಯಾದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.
ಖಾಸಗಿಯವರು ನಮ್ಮ ಜಮೀನು ನಮ್ಮ ಇಷ್ಟ ಎಂಬಂತೆ ವರ್ತಿಸುತ್ತಿದ್ದಾರೆ. ಒಟ್ಟಾರೆ ಇಲ್ಲಿನ ವಾಸಿಗಳಿಗೆ ದುರ್ನಾತದ ನಡುವೆಯೇ ಜೀವಿಸುವುದು ಅನಿವಾರ್ಯವಾಗಿದೆ. ಈಗಲಾದರೂ ಸಂಬಂಧಿಸಿದ ತಾಲ್ಲೂಕು ಮತ್ತು ಜಿಲ್ಲಾಡಳಿತ ಈ ಬಗ್ಗೆಗಮನ ಹರಿಸಿ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದು ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನನ್ನ ನಿವೇಶನಗಳಿಗೆ ಚರಂಡಿ ನೀರು ಹರಿದು ಬರುತ್ತಿತ್ತು. ಹಾಗಾಗಿ ನನ್ನ ಜಾಗದಲ್ಲಿರುವ ಕುಣಿಗೆ ನಾನು ಮಣ್ಣು ಹೊಡೆದಿದ್ದೇನೆ. ನನ್ನಲ್ಲಿ ನಿವೇಶನ ಕೊಂಡವರಿಗೆ ಸಮಸ್ಯೆ ಉಂಟಾದರೆ ನಾನು ಜವಾಬ್ದಾರಿ. ಇತರರ ಸಮಸ್ಯೆಗೆ ನಾನು ಜವಾಬ್ದಾರನಲ್ಲ.
– ಹೆಚ್.ಆರ್.ಶ್ರೀನಿವಾಸ ಮೂರ್ತಿ, ನಿವೇಶನಗಳ ಜಮೀನಿನ ಮಾಲಿಕ, ವೈ.ಎನ್.ಹೊಸಕೋಟೆ
ಎಚ್.ಆರ್.ಶ್ರೀನಿವಾಸಮೂರ್ತಿ ಜಮೀನನ್ನು ಅವೈಜ್ಞಾನಿಕವಾಗಿ ನಿವೇಶನಗಳನ್ನಾಗಿ ಪರಿವರ್ತಿಸಿದ್ದಾರೆ. ಚರಂಡಿ ಮತ್ತು ರಸ್ತೆ ವ್ಯವಸ್ಥೆ ಇಲ್ಲ. ನಿವೇಶನಗಳ ನಕಾಶೆÉ ಯಾರಿಗೂ ತೋರಿಸುತ್ತಿಲ್ಲ. ನಿವೇಶನ ಮತ್ತು ರಸ್ತೆಗಳು ಯಾವುವು ಎಲ್ಲಿವೆ ಎಂಬುದು ತಿಳಿದು ಬರುತ್ತಿಲ್ಲ. ಇದರ ಬಗ್ಗೆ ಮಾಹಿತಿ ಕೇಳಿದರೆ, ಇದನ್ನು ಪ್ರಶ್ನಿಸುವುದಕ್ಕೆ ನೀನು ಯಾರು ಎಂದು ದರ್ಪದ ಮಾತುಗಳನ್ನಾಡುತ್ತಾರೆ. ಇ-ಸ್ವತ್ತು ಇಲ್ಲದೆ ನಿವೇಶನಗಳ ಮಾರಾಟ ಆಗುತ್ತಿರುವುದರಿಂದ ಇಷ್ಟೆಲ್ಲಾ ಅನಾಹುತಗಳಾಗುತ್ತಿವೆ. ಇದರಿಂದಾಗಿ ಸಾರ್ವಜನಿಕರಿಗೆ ಮೋಸ ಆಗುತ್ತಿದೆ.
– ವೆಂಕಟೇಶ್, ಗ್ರಾಮಪಂಚಾಯಿತಿ ಸದಸ್ಯರು, ವೈ.ಎನ್.ಹೊಸಕೋಟೆ
ಸ್ಥಳ ಪರಿಶೀಲನೆ ನಡೆಸಿದಾಗ ಚರಂಡಿ ಸಮಸ್ಯೆ ಇರುವುದು ಕಂಡು ಬಂದಿದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲೂ ಚರ್ಚಿಸಲಾಗಿದೆ. ಚರಂಡಿ ನೀರಿಗೆ ಅಡ್ಡಿ ಉಂಟುಮಾಡಿರುವ ಮಾಲಿಕರಿಗೆ ಈಗಾಗಲೇ ನೋಟೀಸು ನೀಡಲಾಗಿದೆ. ಅವರು ಅದು ನನ್ನ ಜಾಗ ಎಂದು ತಿಳಿಸುತ್ತಿದ್ದಾರೆ. ಸಮಸ್ಯೆ ಬಗೆಹರಿಯುವವರೆಗೆ ಅವರ ನಿವೇಶನಗಳ ಖಾತೆ ಮಾಡದೆ ನಿಲ್ಲಿಸುತ್ತೇವೆ.
– ಎಚ್.ಅರ್.ಜುಂಜೇಗೌಡ, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ವೈ.ಎನ್.ಹೊಸಕೋಟೆ
ಈ ಹಿಂದೆ ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ್ದ ಅಂಗನವಾಡಿ ಕಟ್ಟಡವು ನನ್ನ ಜಾಗದಲ್ಲಿದೆ ಎಂದು ಎಚ್.ಆರ್.ಶ್ರೀನಿವಾಸಮೂರ್ತಿ ಸದರಿ ಕಟ್ಟಡವನ್ನು ತನ್ನ ಸುಪರ್ದಿಗೆ ಪಡೆದು ಬಾಡಿಗೆಗೆ ನೀಡಿದ್ದಾರೆ. ಹಲವು ಮನೆಗಳನ್ನು ಕೆಡವಿದ್ದಾರೆ. ಈಗ ಮತ್ತೊಂದು ಸಾಲು ಮನೆಗಳನು ನನಗೆ ಸೇರುತ್ತವೆ ಎಂದು ನೋಟೀಸು ಕಳಿಸಿದ್ದಾರೆ. ಇವರಲ್ಲಿ ನಾನು ಕೊಂಡಿರುವ ನಿವೇಶನಕ್ಕೆ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಸೂಚಿಸಿಲ್ಲ.
– ಕ್ಯಾತಗಾನಕೆರೆ ರವಿ, ನೆಹರೂ ಬಡಾವಣೆ ನಿವಾಸಿ, ವೈ.ಎನ್.ಹೊಸಕೋಟೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
