ಬಾಲ್ಯ ವಿವಾಹ ನಿಷೇಧ ಕುರಿತ ಜಾಗೃತಿ

ತುಮಕೂರು:

              ಬಾಲ್ಯ ವಿವಾಹಗಳಿಂದ ವಿವಿಧ ರೀತಿಯ ದುಷ್ಪರಿಣಾಮಗಳು ಆಗುತ್ತಿದ್ದರೂ ನಮ್ಮ ಸಮಾಜದಲ್ಲಿ ಇಂದಿಗೂ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ಇದಕ್ಕಾಗಿ 2006 ನೇ ಇಸವಿಯಲ್ಲಿ ಒಂದು ನೂತನ ಕಾಯಿದೆಯನ್ನು ರಚಿಸಲಾಗಿತ್ತು. ಈ ಕಾಯ್ದೆ ಜಾರಿಗೆ ಬಂದ ನಂತರ ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಮೂಡಿಸುತ್ತಲೇ ಬರಲಾಗಿದೆ. ಕಾನೂನು ಕಠಿಣವಾಗಿದೆ. ಹೀಗಿದ್ದರೂ ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ.

             ಇಂತಹ ಬಾಲ್ಯ ವಿವಾಹಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತವೆ. ಅದರಲ್ಲೂ ವಿಶೇಷವಾಗಿ ಹಟ್ಟಿಗಳು, ತಾಂಡಗಳು, ಹಿಂದುಳಿದ ಪ್ರದೇಶಗಳ ಜನರೇ ವಾಸಿಸುವ ಸಮುದಾಯಗಳಲ್ಲಿ ಹೆಚ್ಚು ಜೀವಂತವಾಗಿದೆ. ಇವರಿಗೆ ಕಾನೂನಿನ ಜ್ಞಾನ ಅಷ್ಟಾಗಿ ಇರಲಾರದು. ಕಾನೂನಿನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದೂ ಇಲ್ಲ. ನಮ್ಮ ಹಿಂದಿನ ಪೂರ್ವಿಕರು ಮಕ್ಕಳಿಗೆ ಮದುವೆ ಮಾಡುತ್ತಿದ್ದರು. ಆಗ ಏನೂ ಆಗದ್ದು ಈಗ ಏನಾಗುತ್ತದೆ ಎಂಬ ಮನಸ್ಥಿತಿ ಕೆಲವರಲ್ಲಿ ಮನೆಮಾಡಿದೆ. ಇದನ್ನು ದೂರ ಮಾಡುವ ಸಲುವಾಗಿ ಅನೇಕ ಪ್ರಯತ್ನಗಳು ನಡೆಯುತ್ತಿದ್ದರೂ ಕೆಲವೊಂದು ಸಮುದಾಯಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಜೀವಂತವಾಗಿದೆ. ಅಲ್ಲಲ್ಲಿ ನಡೆಯುವ ಬಾಲ್ಯ ವಿವಾಹಗಳನ್ನು ಸಂಬಂಧಪಟ್ಟ ಇಲಾಖಾಧಿಕಾರಿಗಳು ಭೇಟಿ ನೀಡಿ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ.

             ಈ ಹಿನ್ನೆಲೆಯಲ್ಲಿ ಗೊಲ್ಲರಹಟ್ಟಿಗಳು, ಲಂಬಾಣಿ ತಾಂಡಗಳು, ಪರಿಶಿಷ್ಟ ಕೇರಿಗಳು, ಹಿಂದುಳಿದ ಸಮುದಾಯ ವಾಸಿಸುವ ಪ್ರದೇಶಗಳು ಸೇರಿದಂತೆ ವಿವಿಧ ವರ್ಗಗಳ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇನ್ನಿತರ ಇಲಾಖೆಗಳು ಸಂಯುಕ್ತವಾಗಿ ಹಮ್ಮಿಕೊಂಡಿವೆ. ಇದರ ಜೊತೆಯಲ್ಲಿ ಬಾಲ್ಯ ವಿವಾಹ ನಡೆಯುವ ಸ್ಥಳಗಳಾದ ಕಲ್ಯಾಣ ಮಂಟಪಗಳು, ವಿವಾಹ ನೆರವೇರಿಸುವ ಅರ್ಚಕರು, ಲಗ್ನಪತ್ರಿಕೆ ಮುದ್ರಿಸುವ ಮುದ್ರಣಾಲಯಗಳು ಇತ್ಯಾದಿ ವರ್ಗದವರಿಗೆ ಬಹುಮುಖ್ಯವಾಗಿ ಕಾನೂನಿನ ಜ್ಞಾನ ತಲುಪಬೇಕು ಎಂಬುದು ಇಲಾಖೆಗಳ ಗುರಿ.

             ಇದರ ಅಂಗವಾಗಿ ಆ.28 ರಂದು ಬೆಳಗ್ಗೆ 11 ಗಂಟೆಗೆ ತುಮಕೂರಿನ ಬಾಲ ಭವನ ಸಭಾಂಗಣದಲ್ಲಿ ಸುಮಾರು 450 ಜನರಿಗೆ ಇಂತಹ ಒಂದು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಆ ಮೂಲಕ ಬಾಲ್ಯ ವಿವಾಹಗಳನ್ನು ತಡೆಗಟ್ಟುವುದು ಮತ್ತು ಎಲ್ಲ ಸಮುದಾಯಗಳಲ್ಲಿ ಇದನ್ನು ನಿಯಂತ್ರಿಸುವ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap