ಚಿತ್ರದುರ್ಗ:
ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ವಯ ಪ್ರತಿಯೊಬ್ಬ ಅಧಿಕಾರಿಗೂ ಬಾಲ್ಯ ವಿವಾಹ ತಡೆಯುವ ಅಧಿಕಾರವಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.. ಸತ್ಯಭಾಮ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹೋಗದೊಂದಿಗೆ ಬಾಲ್ಯ ವಿವಾಹ ಕಾಯ್ದೆ, ಪೋಕ್ಸೋ ಕಾಯ್ದೆ, ಜೆ.ಜೆ. ಕಾಯ್ದೆ-2015, ಐಸಿಪಿಎಸ್ ಕಾರ್ಯಕ್ರಮ ಹಾಗೂ ಮಮತೆಯ ತೊಟ್ಟಿಲು ಕುರಿತು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳಿಗೆ ಮಂಗಳವಾರ ಏರ್ಪಡಿಸಲಾದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿರುವ ಕುರಿತು ದೂರುಗಳು ವ್ಯಾಪಕವಾಗಿದೆ. ಜಿಲ್ಲೆಯ ಕೆಲವೆಡೆ ಬಾಲ್ಯ ವಿವಾಹ ನಡೆಯುವುದು ಅಧಿಕಾರಿಗಳ ಗಮನಕ್ಕೆ ಕಂಡು ಬಂದರೆ ಬಾಲ್ಯ ವಿವಾಹಗಳನ್ನು ತಡೆಯಬೇಕು. ಬಾಲ್ಯ ವಿವಾಹದ ಬಗ್ಗೆ ಯಾವುದೇ ಮಾಹಿತಿ ದೊರೆತರೂ ಅಧಿಕಾರಿಗಳು ಕೂಡಲೆ ಸ್ಪಂದಿಸಿ, ಅದನ್ನು ತಡೆಯಲು ಮುಂದಾಗಬೇಕು. ಬಾಲ್ಯ ವಿವಾಹದಿಂದ ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಣಿಯಾಗಿ ಹೆರಿಗೆ ಸಮಯದಲ್ಲಿ ತಾಯಿ ಮತ್ತು ಶಿಶು ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ. ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಮಾನಸಿಕ ದೌರ್ಬಲ್ಯತೆಗೆ ಒಳಗಾಗಿ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಾರೆ. ಬಾಲ್ಯ ವಿವಾಹವು ಮಕ್ಕಳ ಭವಿಷ್ಯವನ್ನೇ ಅಂಧಕಾರಕ್ಕೆ ಸಿಲುಕಿಸುವ ಅನಾಗರಿಕ ಕಾರ್ಯವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ನರಳುವ ಮಕ್ಕಳು ಹೆಚ್ಚಾಗಿದ್ದು, ಅಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಕೊಡಸಲು ಸಿಡಿಪಿಓ ಅಧಿಕಾರಿಗಳು ಜವಾಬ್ದಾರಿಯನ್ನು ವಹಿಸಬೇಕು. ಮಕ್ಕಳಿಗೆ ಪ್ರೌಢಶಾಲೆಯಲ್ಲಿ ಪ್ರತಿ ದಿನ ಪ್ರಾರ್ಥನೆ ಮುಗಿದ ನಂತರ ಮಕ್ಕಳಿಗೆ ಬಾಲ್ಯ ವಿವಾಹದಿಂದಾಗುವ ಪರಿಣಾಮಗಳ ಬಗ್ಗೆ, ಸಮಾಜದಲ್ಲಿ ನಡೆಯುವ ಶೋಷಣೆಗಳು ಹಾಗೂ ಆ ದೌರ್ಜನ್ಯಗಳನ್ನು ಧೈರ್ಯದಿಂದ ಎದುರಿಸುವ ಮತ್ತು ತಡೆಗಟ್ಟುವ ಮಾರ್ಗಗಳ ಬಗ್ಗೆ ಶಿಕ್ಷಕರು ತಿಳುವಳಿಕೆ ನೀಡಬೇಕು. ಅದೇ ರೀತಿ ಸ್ವಚ್ಚತೆ, ಪರಿಸರ ನೈರ್ಮಲ್ಯದ ಬಗ್ಗೆ ತಿಳುವಳಿಕೆ ನೀಡಿ ಮಕ್ಕಳಿಗೆ ಜವಾಬ್ದಾರಿ ನೀಡಬೇಕು. ಶಾಲೆಗಳಲ್ಲಿ 1ನೇ ತರಗತಿಯಿಂದ 5 ನೇ ತರಗತಿಯ ಮಕ್ಕಳು ಒಂದು ಗಿಡವನ್ನು ನೆಡವುದು, 5ನೇ ತರಗತಿಯ ನಂತರದ ಮಕ್ಕಳು ಎರಡು ಗಿಡಗಳನ್ನು ನೆಡುವಂತೆ ತಿಳಿಸುವುದರ ಮೂಲಕ ಪರಿಸರ ಕಾಳಜಿ ವಹಿಸಬೇಕು ಎಂದರು.
ಮಕ್ಕಳ ಹಕ್ಕು ಮತ್ತು ರಕ್ಷಣೆಯ ಬಗ್ಗೆ ಹೆಚ್ಚಿನ ಕಾಯ್ದೆಗಳು ಇದ್ದು ಅವುಗಳನ್ನು ಅನುಷ್ಠಾನಕ್ಕೆ ತರವುದು ಅಗತ್ಯವಾಗಿದೆ. ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬಾಲ್ಯ ವಿವಾಹದ ಬಗ್ಗೆ ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಮಾಡಿದರೆ, ಬಾಲ್ಯ ವಿವಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಅಲ್ಲದೆ, ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಅಭಿವೃದ್ಧಿಯಾಗುತ್ತಾರೆ ಹಾಗೂ ಸಮಾಜ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಮಹಿಳಾ ಕಲ್ಯಾಣ ಸಮಿತಿ ಅಧ್ಯಕ್ಷ ಡಾ. ಪ್ರಭಾಕರ್ ಮಾತನಾಡಿ ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಎಲ್ಲಾ ಇಲಾಖೆಗಳಿಗೆ ಮಹತ್ವದ ಪಾತ್ರವಿದೆ. ಪ್ರಮುಖವಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯು ಸಿಡಿಪಿಓ, ಮೇಲ್ವಿಚಾರಕರ ಜೊತೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕೈ ಜೋಡಿಸಿದರೆ ಮಾತ್ರ ಬಾಲ್ಯ ವಿವಾಹ ಮುಕ್ತ ಜಿಲ್ಲೆ, ಗ್ರಾಮವನ್ನಾಗಿ ಮಾಡಬಹುದು. ಬಾಲ್ಯ ವಿವಾಹಗಳು ನಡೆಯುವ ಮಾಹಿತಿ ಸಿಡಿಪಿಓ ಗಳ ಗಮನಕ್ಕೆ ಬಂದಾಗ ನಿರ್ಲಕ್ಷ್ಯ ವಹಿಸದೆ, ಯಾವುದೇ ಪ್ರಭಾವಗಳಿಗೂ ಒಳಗಾಗದೆ, ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಹಳ್ಳಿಗಳಲ್ಲಿ ಬಾಲ್ಯ ವಿವಾಹದ ಬಗ್ಗೆ ಅರಿವು ಇರುವುದಿಲ್ಲ, ಅಂತಹ ಹಳ್ಳಿಗಳಲ್ಲಿ ಬಾಲ್ಯ ವಿವಾಹದ ದುಷ್ಪರಿಣಾಮಗಳು ಹಾಗೂ ಬಾಲ್ಯ ವಿವಾಹಕ್ಕೆ ಕಾರಣರಾದವರಿಗೆ ಶಿಕ್ಷೆ ಕಾದಿದೆ ಎಂಬುದರ ಅರಿವು ಮೂಡಿಸಬೇಕು, ಅದನ್ನು ಮೀರಿ ಅವರು ಬಾಲ್ಯ ವಿವಾಹ ಮಾಡಲು ಮುಂದಾದರೆ ಅವರ ಮೇಲೆ ಎಫ್.ಐ.ಆರ್ ದಾಖಲು ಮಾಡಿಸಬೇಕು, ಹೀಗಾದಲ್ಲಿ ಮಾತ್ರ ಜನರಲ್ಲಿ ಭಯ ಬಂದು, ಜನರು ಬಾಲ್ಯ ವಿವಾಹ ಮಾಡಲು ಹಿಂದೇಟು ಹಾಕುತ್ತಾರೆ ಎಂದು ಹೇಳಿದರು.
ಮಕ್ಕಳಿಗೆ ಮಮತೆಯ ತೊಟ್ಟಿಲು ಕಾರ್ಯಕ್ರಮವಿದ್ದು, ಪೋಷಕರಿಗೆ ಮಕ್ಕಳು ಬೇಡವಾದಲ್ಲಿ ರಸ್ತೆ, ಕಸದ ತೊಟ್ಟಿಯಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಬಿಸಾಡುವುದರಿಂದ ನವಜಾತು ಶಿಶುಗಳು, ವಿಷ ಜಂತುಗಳಿಂದ, ಬೀದಿ ನಾಯಿಗಳಿಂದ ತೊಂದರೆಗೆ ಒಳಗಾಗುತ್ತವೆ. ಬೇಡವಾದ ಮಕ್ಕಳನ್ನು ಪೋಷಕರು ಎಲ್ಲೆಂದರಲ್ಲಿ ಬಿಸಾಡದೆ ಮಮತೆಯ ತೊಟ್ಟಿಲಲ್ಲಿ ಹಾಕಿ ಒಂದು ಜೀವವನ್ನು ಉಳಿಸಿ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರಾಧಾ ಕೆ ಮಾತನಾಡಿ, ಓದುವ ವಯಸ್ಸಿನ ಮಕ್ಕಳು ಅನೇಕ ಸಮಸ್ಯೆಗಳಿಂದ ಬೀದಿಗಳಲ್ಲಿ ಭಿಕ್ಷೆ ಬೇಡಿಕೊಂಡು ಜೀವಿಸುತ್ತಾರೆ, ಇನ್ನೂ ಕೆಲವು ಮಕ್ಕಳು ಬೇರೆಯವರ ಮನೆಗಳಲ್ಲಿ ಬಾಲ ಕಾರ್ಮಿಕರಾಗಿ ಕೂಲಿ ಕೆಲಸಗಳನ್ನು ಮಾಡುತ್ತಾರೆ ಹಾಗು ಮಾಲಿಕರ ದೌರ್ಜನ್ಯಗಳಿಗೆ ಒಳಗಾಗಿರುತ್ತಾರೆ, ಇಂತಹ ಮಕ್ಕಳು ಕಂಡುಬಂದರೆ ನಾಗರೀಕರು ಅವರುಗಳನ್ನು ರಕ್ಷಿಸಿ ಸರ್ಕಾರಿ ಬಾಲಮಂದಿರಗಳಿಗೆ ಸೇರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಬಾಸ್ಕೋ ಸಂಸ್ಥೆಯ ಬಸವರಾಜ್ ಅವರು, ಬಾಲ್ಯ ವಿವಾಹ ಕಾಯ್ದೆ ಪೋಕ್ಸೋ ಜೆ.ಜೆ ಕಾಯ್ದೆ -2015 ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ಕುರಿತು ಉಪನ್ಯಾಸ ನೀಡಿದರು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
