ಬೆಂಗಳೂರು:
ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಕೂಡಲೇ ಬಂಧಿಸುವಂತೆ ಎಐಎಂಎಸ್‌ಎಸ್ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಐಎಂಎಸ್‌ಎಸ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಶೋಭಾ ಅವರು, ಕಳೆದ ಒಂದು ತಿಂಗಳಿನಿಂದ ದಿಲ್ಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಹೋರಾಟಕ್ಕೆ ಸ್ಪಂದಿಸದ ಕೇಂದ್ರ ಮಂತ್ರಿಗಳಿಗೆ ಕುಸ್ತಿಪಟುಗಳ ಸಮಸ್ಯೆಗಳನ್ನು ಗಮನಕ್ಕೆ ತರುವ ಉದ್ದೇಶದಿಂದ ನೂತನ ಸಂಸತ್ ಭವನದ ಎದುರು ಮಹಿಳಾ ಮಹಾ ಪಂಚಾಯತ್ ಕಾರ್ಯಕ್ರಮವನ್ನು ದಿಲ್ಲಿ ಎಐಎಂಎಸ್‌ಎಸ್ ಆಯೋಜಿಸಲಾಗಿತ್ತು.
ಇದರಿಂದ ಹೊಸ ಸಂಸತ್ ಭವನ ಉದ್ಘಾಟನೆಗೆ ಅಡ್ಡಿಯಾಗುತ್ತದೆ ಎಂಬ ಕಾರಣದಿಂದಾಗಿ ದಿಲ್ಲಿ ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ ರಿತು ಕೌಶಿಕ್ ಹಾಗೂ ವಿವಿಧ ಸಂಘಗಳ ನಾಯಕರನ್ನು ದಿಲ್ಲಿ ಪೋಲಿಸರು ಬಂಧಿಸಿರುವುದನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ಸರಕಾರದ ಈ ನಡೆಯನ್ನು ಖಂಡಿಸಿ ನ್ಯಾಯದ ಪರ ಹೋರಾಡುತ್ತಿರುವ ಮತ್ತು ಮಹಿಳಾ ಕುಸ್ತಿಪಟುಗಳಿಗೆ ಬೆಂಬಲವಾಗಿ ನಿಂತು, ಚಳವಳಿಗಳನ್ನು ನಡೆಸುತ್ತಿರುವ ಬಂಧಿತರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
