ಬಿಬಿಎಂಪಿಯ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ “ಮುಖ್ಯ ಆಯುಕ್ತರ ನಡೆ ವಲಯದ ಕಡೆ”

ಸಾರ್ವಜನಿಕರಿಂದ ಅಹವಾಲು ಸ್ವೀಕಾರ : ಪರಿಹರಿಸಲು ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ
ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲಕ್ಕಾಗಿ “ಮುಖ್ಯ ಆಯುಕ್ತರ ನಡೆ ವಲಯದ ಕಡೆ” ಅಂಗವಾಗಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಪಶ್ಚಿಮ ವಲಯದ ಅಗ್ರಹಾರ ದಾಸರಹಳ್ಳಿ ವಾರ್ಡ್ ನ ಪಾಲಿಕೆ ಸೌಧದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ಸಾರ್ವಜನರಿಕರು ನೀಡಿದ ಅಹವಾಲುಗಳ ಬಗ್ಗೆ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮದ ಕುರಿತು ಮಾಹಿತಿ ಪಡೆದ ಮುಖ್ಯ ಆಯುಕ್ತರು, ಬಗೆಹರಿಸದ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಲು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳು ಒತ್ತುವರಿಯಾಗಿದ್ದರೆ ಕೂಡಲೆ ತೆರವುಗೊಳಿಸಬೇಕು. ಈ ಸಂಬಂಧ ಎಲ್ಲಾ ಅಧಿಕಾರಿಗಳು ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಯ ಡ್ರೈವ್ ಹಮ್ಮಿಕೊಳ್ಳಲು ವಲಯ ಆಯುಕ್ತರಿಗೆ ಸೂಚನೆ ನೀಡಿದರು.
ಜಂಟಿ ಆಯುಕ್ತರ ಕಛೇರಿ ಬಳಿ ನಡೆಯುತ್ತಿರುವ ರಾಜಕಾಲುವೆಯ ಬ್ರಿಡ್ಜ್ ಕಾಮಗಾರಿಯನ್ನು ಇನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು. ಅದಾದ ಬಳಿಕ ಹೆಚ್.ಆರ್.ಪಿ.ಸಿ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜಾಗದಲ್ಲಿ ಮಳೆ ನೀರು ನಿಲ್ಲದಂತೆ ಮಾಡಿ ಪಾದಚಾರಿಗಳು ರಸ್ತೆ ದಾಟಲು ಅನುಕೂಲವಾಗುವ ನಿಟ್ಟಿನಲ್ಲಿ ಜೀಬ್ರಾ ಕ್ರಾಸಿಂಗ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಮಾಡಿ:
ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಎಲ್ಲೂ ಬೀದಿ ದೀಪಗಳು ಹಾಳಾಗುವಂತಿಲ್ಲ. ದುರಸ್ತಿಯಿರುವ ಕಡೆ ಕೂಡಲೆ ದೀಪಗಳನ್ನು ಅಳವಡಿಸಿ ಸರಿಯಾಗಿ ನಿರ್ವಹಣೆ ಮಾಡಬೇಕು. ಈ ಪೈಕಿ ಪ್ರತಿ ಅಧಿಕಾರಿಗಳು ತಲಾ 50 ಪಾಯಿಂಟ್ ಗಳನ್ನು ಪರಿಶೀಲನೆ ಮಾಡಬೇಕು. ಅದಾದ ಬಳಿಕ ಮತ್ತೋರ್ವ ಅಧಿಕಾರಿಯಿಂದ ಬೀದಿ ದೀಪಗಳ ದುರಸ್ತಿಗೊಳಿಸಿರುವ ಬಗ್ಗೆ ಮೇಲ್ವಿಚಾರಣೆ ಮಾಡಿ ವರದಿ ನೀಡಬೇಕು ಎಂದು ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.
ಜಲಾವೃತವಾಗದಂತೆ ಕ್ರಮ ಕೈಗೊಳ್ಳಿ:
ಮಳೆಗಾಲದ ವೇಳೆ ರಸ್ತೆಗಳ ಮೇಲೆ ನೀರು ನಿಂತು ಜಲಾವೃತವಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ರಸ್ತೆ ಬದಿಯ ಸೈಡ್ ಡ್ರೈನ್ ಗಳನ್ನು ಸ್ವಚ್ಛಗೊಳಿಸಿ ಸೈಡ್ ಡ್ರೈನ್ ಗಳ ಮೂಲಕ ಸರಾಗವಾಗಿ ರಾಜಕಾಲುವೆಗೆ ಮಳೆ ನೀರು ಹರಿದು ಹೋಗುವಂತೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಫ್ಲೆಕ್ಸ್, ಬ್ಯಾನರ್ ಗಳ ತೆರವು ಕಾರ್ಯಾಚರಣೆ ಸರಿಯಾಗಿ ಆಗಬೇಕು:
 ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್ ಗಳ ಅಳವಡಿಕೆ ನಿಷೇಧವಿದ್ದರೂ ಕೂಡಾ ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಗಳ ಆವಳಿ ಕಡೆಮೆಯಾಗಿರುವುದಿಲ್ಲ. ಈ ಪೈಕಿ ಸಂಬಂಧಪಟ್ಟ ಅಧಿಕಾರಿಗಳು ಫ್ಲೆಕ್ಸ್ ಅಳವಡಿಸಿದ್ದರೆ ಅದನ್ನು ಕೂಡಲೆ ತೆರವುಗೊಳಿಸಿ ಸಂಬಂಧಪಟ್ಟವರಿಗೆ ದಂಡ ವಿಧಿಸಿ ಅವರ ಮೇಲೆ ಎಫ್.ಐ.ಆರ್ ದಾಖಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಾರ್ವಜನಿಕರಿಂದ ಸ್ವೀರಿಸಿದ ಅಹವಾಲುಗಳು:
ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಮರದ ಕೊಂಬೆಗಳನ್ನು ಕಟಾವು ಮಾಡುವ, ರಸ್ತೆ ಗುಂಡಿಗಳನ್ನು ಮುಚ್ಚುವ, ರಸ್ತೆ ಬದಿ ಬ್ಲಾಕ್ ಸ್ಪಾಟ್(ಕಸ ಸುರಿಯುವ ಸ್ಥಳ)ಗಳನ್ನು ತೆಗೆಯುವ, ರಸ್ತೆ ಮೇಲೆ ನೀರು ನಿಲ್ಲುವುದನ್ನು ತಪ್ಪಿಸುವ, ಸೈಡ್ ಡ್ರೈನ್ ಗಳಲ್ಲಿ ಹೂಳೆತ್ತುವ, ಬೀದಿ ನಾಯಿಗಳ ಆವಳಿ ತಪ್ಪಿಸುವ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಅಹವಾಲುಗಳು ಬಂದಿವೆ. ಈ ಪೈಕಿ ತ್ವರಿತಗತಿಯಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳಿಗೆ ಕೂಡಲೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ವಲಯ ಆಯುಕ್ತರಾದ ಡಾ. ದೀಪಕ್, ವಲಯ ಜಂಟಿ ಆಯುಕ್ತರಾದ ಶ್ರೀನಿವಾಸ್, ವಲಯ ಮುಖ್ಯ ಅಭಿಯಂತರರಾದ ದೊಡ್ಡಯ್ಯ, ಕಾರ್ಯಪಾಲಕ ಅಭಿಯಂತರರು, ವಲಯ ಆರೋಗ್ಯಾಧಿಕಾರಿ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap