ಬಿಬಿಎಂಪಿ ಪ್ರಯೋಗಾಲಯದಲ್ಲಿ ಅಗ್ನಿ ಅವಘಡ : ಮುಖ್ಯ ಎಂಜಿನಿಯರ್ ಗೆ ನೊಟೀಸ್​

ಬೆಂಗಳೂರು:

     ಬಿಬಿಎಂಪಿ  ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರದಾರರಿಗೆ ಅಂದರೆ, ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರಿಗೆ ಹಲಸೂರು ಗೇಟ್ ಠಾಣಾ ಪೊಲೀಸರು ನೊಟೀಸ್​ ಜಾರಿ ಮಾಡಿದ್ದು, ಈ ಬೆಳವಣಿಗೆಗೆ ಮುಖ್ಯ ಎಂಜಿನಿಯರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    ಒಂಬತ್ತು ಸಿಬ್ಬಂದಿ ಸುಟ್ಟಗಾಯಗಳಾಗಿರುವ ಘಟನೆಯ ತನಿಖೆಯ ಜವಾಬ್ದಾರಿಯನ್ನು ಪ್ರಹ್ಲಾದ್ ಅವರಿಗೆ ನೀಡಲಾಗಿದೆ. ಆದರೆ, ಪೊಲೀಸರು ಪ್ರಹ್ಲಾದ್ ಅವರಿಗೇ ನೋಟಿಸ್ ಜಾರಿ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

    ಈ  ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಸಂಬಂಧ ನಾನೇ ಠಾಣೆಗೆ ದೂರು ನೀಡಿದ್ದೇನೆ. ಹೀಗಿರುವಾಗ ನನಗೆ ನೊಟೀಸ್ ನೀಡಿರುವುದು ಅಚ್ಚರಿ ತಂದಿದೆ. ಪೊಲೀಸರ ವರ್ತನೆ ಬಗ್ಗೆ ಪಾಲಿಕೆ ಮೇಲಾಧಿಕಾರಿಗಳ ಜೊತೆಗೆ ಮಾತನಾಡಿ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇನೆಂದು ಹೇಳಿದ್ದಾರೆ.

    ನೊಟೀಸ್ ನನಗೆ ತಲುಪಿಲ್ಲ. ನನ್ನ ಕಚೇರಿಗೂ ಬಂದಿಲ್ಲ. ಮಾಧ್ಯಮಗಳಲ್ಲಿ ವರದಿಯಾಗಿರುವ ಕುರಿತು ಮಾಹಿತಿ ಇದೆ. ನೊಟೀಸ್ ವಿಚಾರವನ್ನು ಸಾರ್ವಜನಿಕಗೊಳಿಸಲಾಗಿದೆ. ಇದು ಹೇಗೆ ಸಾಧ್ಯ ಎಂದೆಲ್ಲ ಕಾನೂನು ತಜ್ಞರ ಬಳಿ ಚರ್ಚಿಸಲಾಗುವುದು. ಪೊಲೀಸರು ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದಾರೆ. ಆದರೆ, ಅದನ್ನು ಸಾರ್ವಜನಿಕಗೊಳಿಸಬಾರದು. ಇದರಿಂದ ಜನರ ಮನಸ್ಸಿನಲ್ಲಿ ಅನುಮಾನಗಳು ಮೂಡುತ್ತವೆ ಎಂದು ತಿಳಿಸಿದ್ದಾರೆ.

    ಪೊಲೀಸರು ಘಟನೆ ನಡೆದ ಕಟ್ಟಡಕ್ಕೆ ಬೀಗ ಹಾಕಿದ್ದಾರೆ. ಇಂದು ಸಂಜೆಯ ನಂತರ ಬೀಗ ನೀಡುತ್ತಾರೆ. ಆ ಬಳಿಕ ಕಚೇರಿ ತೆರೆದು ಪರಿಶೀಲನೆ ಮಾಡಲಾಗುವುದು. ವಿಕ್ಟೋರಿಯಾ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಖಾಸಗಿ ಆಸ್ಫತ್ರೆಗೆ ಸೇರಿಸಲು ವೈದ್ಯರ ವರದಿ ಬಂದ ಬಳಿಕ ತೀರ್ಮಾನ ಮಾಡುತ್ತೇವೆ” ಎಂದು ಮಾಹಿತಿ ನೀಡಿದರು.

    ಹಲಸೂರು ಗೇಟ್ ನ ಹಿರಿಯ ಪೊಲೀಸ್ ಅಧಿಕಾರಿಗಳು ಮಾತನಾಡಿ, ಪ್ರಹ್ಲಾದ್ ಇಂಜಿನಿಯರ್ ಇನ್ ಚೀಫ್ ಆಗಿರುವುದರಿಂದ ಅವರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

    ಪ್ರಯೋಗಾಲಯದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಇದರಿಂದಾಗಿ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಹೀಗಾಗಿ ಲ್ಯಾಬ್ ನಲ್ಲಿ ಯಾವ ರೀತಿಯ ಪರೀಕ್ಷೆಗಲನ್ನು ನಡೆಸಲಾಗುತ್ತಿದ್ದು, ಸುರಕ್ಷತಾ ಕ್ರಮಗಳನ್ನು ಯಾವ ರೀತಿಯಲ್ಲಿ ಅನುಸರಿಸಲಾಗುತ್ತಿದ್ದು, ಪರೀಕ್ಷೆಗಳ ಸಮಯದಲ್ಲಿ ಮೇಲ್ವಿಚಾರಣಾ ಅಧಿಕಾರಿಗಳು, ಅಗ್ನಿ ಸುರಕ್ಷತಾ ಕ್ರಮಗಳು ಮತ್ತು ಇತರ ವಿವರಗಳ ಬಗ್ಗೆ ನೋಟಿಸ್ ನಲ್ಲಿ ಕೇಳಲಾಗಿದೆ. ಅವರು ತನಿಖಾ ಅಧಿಕಾರಿಯ ಮುಂದೆ ಹಾಜರಾಗಿ ಹೇಳಿಕೆಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ.

   ಈ ನಡುವೆ ನೋಟಿಸ್ ಸಂಬಂಧ ಪ್ರಹ್ಲಾದ್ ಅವರು ಅಸಮಾಧಾನಗೊಂಡಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

   ತನಿಖಾ ಪ್ರಕ್ರಿಯೆಯು ನೋಟಿಸ್ ನೀಡುವುದನ್ನು ಒಳಗೊಂಡಿರುತ್ತದೆ. ತನಿಖಾ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಅಧಿಕಾರಿಗಳಿಗೆ ನೋಟಿಸ್ ನಲ್ಲಿ ಸೂಚಿಸಲಾಗುತ್ತದೆ. ಪೊಲೀಸರು ನೋಟಿಸ್‌ನಲ್ಲಿ ನನ್ನ ಹೆಸರನ್ನು ನಮೂದಿಸಿದ್ದಾರೆ. ಹೀಗಾಗಿ ನನಗೆ ಅಥವಾ ನನ್ನ ಕಚೇರಿಗೆ ನೋಟಿಸ್ ನ್ನು ನೀಡಬಹುದಿತ್ತು. ಅದಕ್ಕೆ ನಾನು ಉತ್ತರಿಸುತ್ತಿದ್ದೆ, ಆದರೆ, ಅದನ್ನು ಸಾರ್ವಜನಿಕಗೊಳಿಸುವುದು ಸಾರ್ವಜನಿಕ ಮನಸ್ಸಿನಲ್ಲಿ ಅನುಮಾನಗಳನ್ನು ಉಂಟುಮಾಡುತ್ತದೆ, ”ಎಂದು ಪ್ರಹ್ಲಾದ್ ಅವರು ಹೇಳಿಕೊಂಡಿದ್ದಾರೆ.

    ಈ ನಡುವೆ ಗಾಯಾಳುಗಳ ಆರೋಗ್ಯ ಸ್ಥಿತಿ ಕುರಿತು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್-ನಿರ್ದೇಶಕ ಡಾ.ರಮೇಶ್ ಕೃಷ್ಣ ಅವರು ಮಾಹಿತಿ ನೀಡಿದ್ದಾರೆ.

    ಗಾಯಾಳುಗಳ ಆರೋಗ್ಯ ಸ್ಥಿರವಾಗಿದ್ದು ದ್ರವ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದಾರೆ. ಮೂಗಿನ ಕ್ಯಾತಿಟರ್ಗಳನ್ನು ಅಳವಡಿಸಲಾಗಿದೆ. ಉರಿಯೂತದ ಕಾರಣ ಮೂಗಿನ ಕ್ಯಾತಿಟರ್‌ಗಳನ್ನು ಅಳವಡಿಸಲಾಗಿದೆ. ಆದರೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap