ಕಾಂಗ್ರೆಸ್ ಶಾಸಕರ ಆಕ್ರೋಶ : ಕಾನೂನು ಹೋರಾಟಕ್ಕೆ ಸಿದ್ದ
ನಗರಾಭಿವೃದ್ಧಿ ಇಲಾಖೆ ಬಿಜೆಪಿ ರಬ್ಬರ್ ಸ್ಟಾಂಪ್ ಆಗಿದೆ. ಹಾಗೂ ಬಿಜೆಪಿ ಹಾಗೂ ಆರ್ ಎಸ್ಎಸ್ ಕಚೇರಿ : ಕಾಂಗ್ರೆಸ್ ಆರೋಪ
ಬೆಂಗಳೂರು : ನ್ಯಾಯಾಲಯವು 7 ದಿನಗಳ ಗಡುವು ಕೊಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದೆ. ಮೀಸಲಾತಿಯನ್ನು ಮಾಡಲು ಮಾರ್ಗಸೂಚಿ ಇದೆ. ಆದರೆ ಈ ಮಾರ್ಗಸೂಚಿ ಪ್ರಕಾರ ಮೀಸಲಾತಿ ಮಾಡಿಲ್ಲ. ಮಾರ್ಗಸೂಚಿಯನ್ನು ಸರ್ಕಾರಕ್ಕೆ ಕಳುಹಿಸಿದ್ದರೂ ಅದಕ್ಕೆ ಅನುಮೋದನೆ ಸಿಕ್ಕಿರಲಿಲ್ಲ. ಆದರೂ ಮೀಸಲಾತಿ ಮಾಡಿದ್ದಾರೆ. ಇದನ್ನು ಮಾರ್ಗಸೂಚಿ ಪ್ರಕಾರ ನಡೆಸಿಲ್ಲ ಎಂದು ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು.
ಬಿಬಿಎಂ ವಾರ್ಡ್ ಗಳ ಮರುವಿಂಗಡಣೆಯನ್ನು ಬಿಜೆಪಿ ಶಾಸಕರು ಹಾಗೂ ಸಂಸದರ ಅನುಕೂಲಕ್ಕೆ ತಕ್ಕಂತೆ ಮಾಡಿದ್ದಾರೆ. ವಾರ್ಡ್ ಗಳ ಮರುವಿಂಗಡಣೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇರಬೇಕು. ಇದನ್ನು ಕಂದಾಯ ಅಧಿಕಾರಿಗಳು ಗಡಿಗಳನ್ನು ಗುರುತಿಸಿ ಮಾರ್ಗಸೂಚಿಯಂತೆ ಮಾಡಬೇಕಿತ್ತು. ಆದರೆ ಈ ಬಾರಿ ಈ ಸಮಿತಿಯ ಮುಖ್ಯಸ್ಥರಾಗಿದ್ದ ಆಯುಕ್ತರು ಒಂದೇ ಒಂದು ಸಭೆ ಮಾಡದೇ ಬಿಜೆಪಿ ಶಾಸಕರು ಸಂಸದರ ಕಚೇರಿ, ಕೇಶವ ಕೃಪದಲ್ಲಿ ಮಾಡಿದ್ದಾರೆ ಎಂದು ಆರೋಪ ಮಾಡಿದರು.
3ಸಾವಿರಕ್ಕೂ ಹೆಚ್ಚು ಆಕ್ಷೇಪಣೆ :
ಬಿಬಿಎಂಪಿ ವಾರ್ಡ್’ಗೆ ಸಂಬಂಧಿಸಿದಂತೆ 3 ಸಾವಿರಕ್ಕೂ ಹೆಚ್ಚು ಆಕ್ಷೇಪ ಸಲ್ಲಿಕೆಯಾಗಿತ್ತು. ಆದರೆ ಇವುಗಳನ್ನು ಸರ್ಕಾರ ಪರಿಗಣಿಸದೇ ಬಿಜೆಪಿಯವರು ಮಾಡಿದ್ದಕ್ಕೆ ಒಪ್ಪಿಗೆ ನೀಡಿದರು. ಶಿವಜಿನಗರ, ಜಯನಗರ ಹಾಗೂ ಚಾಮಾರಜ ಪೇಟೆಯಲ್ಲಿ ಸಂಬಂಧವೇ ಇಲ್ಲದಂತೆ ವಾರ್ಡ್ ಮರುವಿಂಗಡಣೆ ಮಾಡಲಾಗಿದೆ. ನಗರಾಭಿವೃದ್ಧಿ ಇಲಾಖೆ ರಬ್ಬರ್ ಸ್ಟಾಂಪ್ ಆಗಿದೆ. ಅದು ಬಿಜೆಪಿ ಹಾಗೂ ಆರ್ ಎಸ್ಎಸ್ ಕಚೇರಿ ಆಗಿದೆ. ಸಿಎಂ ಕಚೇರಿಯಿಂದ ಬಂದಿದ್ದನ್ನು ನೋಡದೇ ಅನುಮೋದನೆ ನೀಡಿದ್ದಾರೆ. ಈಗ ಮೀಸಲಾತಿ ಪಟ್ಟಿಯನ್ನು ಅದೇ ರೀತಿ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ ಪ್ರಬಲ ಅಭ್ಯರ್ಥಿಗಳು ಸ್ಪರ್ಧೆ ಮಾಡಬಾರದು ಎಂದು ಮೀಸಲಾತಿ ಪಟ್ಟಿ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ 9 ವಾರ್ಡ್ ಗಳಲ್ಲಿ 8 ಮಹಿಳೆಯರ ಮೀಸಲಾತಿ ನೀಡಿದ್ದಾರೆ. ಜಯನಗರದಲ್ಲಿ 6ರಲ್ಲಿ 5 ಮಹಿಳೆಯರಿಗೆ ನೀಡಿದ್ದಾರೆ. ಗಾಂಧಿನಗರ ಕ್ಷೇತ್ರದಲ್ಲಿ 7ಕ್ಕೆ 7 ವಾರ್ಡ್ ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದಾರೆ. ಚಾಮರಾಜಪೇಟೆಯಲ್ಲಿ 6ರಲ್ಲಿ 5 ಮಹಿಳಾ ಮೀಸಲಾತಿ ನೀಡಿದ್ದಾರೆ. ಹೀಗೆ ಮನಸೋ ಇಚ್ಛೆ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಎಸ್ ಸಿ ಹಾಗೂ ಎಸ್ ಟಿ ಮೀಸಲಾತಿಯನ್ನು ಜನಸಂಖ್ಯೆ ಅನುಗುಣವಾಗಿ ಮಾಡಬೇಕಿತ್ತು. ಆದರೆ ಆ ರೀತಿ ಮಾಡದೇ ಮನಸ್ಸಿಗೆ ಬಂದಂತೆ ಮಾಡಿದ್ದಾರೆ. ಈ ರೀತಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮುಂದಾಗಿದೆ. ಇದು ಖಂಡನೀಯ. ನಾವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತೇವೆ. ಈ ಮೀಸಲಾತಿ ವಿರುದ್ಧ ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ.
65 ಸಾಮಾನ್ಯ ಕ್ಷೇತ್ರಗಳ ಪೈಕಿ 49 ಕ್ಷೇತ್ರಗಳು ಬಿಜೆಪಿ ಶಾಸಕರ ಕ್ಷೇತ್ರಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಇದನ್ನು ಸರ್ಕಾರ ಹಿಂಪಡೆಯಬೇಕು.
ಕಾಂಗ್ರೆಸ್ ಗೆಲ್ಲದಂತೆ ಬಿಜೆಪಿ ಕುತಂತ್ರ :
ಕಾಂಗ್ರೆಸ್ ಶಾಸಕರು, ಮಾಜಿ ಸದಸ್ಯರು ಗೆಲ್ಲದಂತೆ ಒಂದು ಕಡೆ ಕುತಂತ್ರ ಮಾಡಿದರೆ, ಮತ್ತೊಂದೆಡೆ ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ಅವರಿಂದ ಸ್ಪರ್ಧೆ ಎದುರಾಗುತ್ತದೆ ಎಂದು ಅವರನ್ನು ಮುಗಿಸಲು ಸಂಚು ರೂಪಿಸಲಾಗಿದೆ ಎಂದು ಹೇಳಿದರು.
ಒಟ್ಟು ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ 87 ವಾರ್ಡ್ ಗಳಿದ್ದು, ಅದರಲ್ಲಿ 67 ವಾರ್ಡ್ ಗಳು ಮಹಿಳಾ ಮೀಸಲಾತಿ ನೀಡಲಾಗಿದೆ. ಜೆಡಿಎಸ್ 1 ವಿಧಾನಸಭಾ ಕ್ಷೇತ್ರದಲ್ಲಿ 12 ವಾರ್ಡ್ ಗಳಿಂದ 9 ಮಹಿಳಾ ಮೀಸಲಾತಿ ನೀಡಲಾಗಿದೆ. ಬಿಜೆಪಿ ಮಹಿಳಾ ಮೀಸಲಾತಿಗೆ ವಿರೋಧವಿದ್ದು, ಈ ಮೂಲಕ ಅದನ್ನು ವ್ಯಕ್ತಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ನಗರದ ಹಿತದೃಷ್ಟಿಯಲ್ಲಿ ಮಾಡಿಲ್ಲ. ಅವರ ಪಕ್ಷದ ಅಸ್ಥಿತ್ವ ಉಳಿಸಿಕೊಳ್ಳಲು ಮಾಡಿರುವ ಪ್ರಕ್ರಿಯೆ. ಇದರಿಂದ ಬೆಂಗಳೂರಿಗೆ ಒಳ್ಳೆಯದು ಆಗಲ್ಲ. ಮಾನದಂಡ, ಕಾನೂನು ಉಲ್ಲಂಘಿಸಿ ಈ ಪ್ರಕ್ರಿಯೆ ಮಾಡಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರ ಹಾಗೂ ಕಾಂಗ್ರೆಸ್ ಶಾಸಕರ ಕ್ಷೇತ್ರ ಹೋಲಿಕೆ ಮಾಡಿ ನೋಡಿ. 19 ಸಾವಿರ ಮತವಿರುವ ಒಂದು ವಾರ್ಡ್ ಸೃಷ್ಟಿಸಿದರೆ, ಅದರ ಪಕ್ಕದಲ್ಲಿ 45 ಸಾವಿರ ಮತವಿರುವ ವಾರ್ಡ್ ಮಾಡಲಾಗಿದೆ. ಇವರ ವೆಬ್ ಸೈಟ್ ನಲ್ಲಿ ಜನಸಂಖ್ಯೆಯನ್ನು ತಪ್ಪಾಗಿ ತೋರಿಸಲಾಗಿದೆ. 45 ಸಾವಿರ ಮತವಿದ್ದರೂ 37 ಸಾವಿರ ಜನಸಂಖ್ಯೆ ಇದೆ ಎಂದು ತೋರಿಸಲಾಗಿದೆ. ವೆಬ್ ಸೈಟ್ ನಲ್ಲಿ ಸುಳ್ಳು ಮಾಹಿತಿ ನೀಡಿ ಜನರ ದಾರಿ ತಪ್ಪಿಸಲಾಗುತ್ತಿದೆ.
– ರಿಜ್ವಾನ್ ಅರ್ಷದ್, ಶಾಸಕರು.
ಬಿಜೆಪಿಯು ಸೋಲಿನ ಭೀತಿಯಿಂದ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಮೀಸಲಾತಿ ಪಟ್ಟಿ ಮಾಡಿದೆ. ಆ ಮೂಲಕ ಇಡೀ ಬೆಂಗಳೂರು ನಗರದ ಜನರ ಅವಕಾಶ ವಂಚನೆ ಮಾಡಲು ತೀರ್ಮಾನಿಸಿದೆ. ಇದನ್ನು ಉಗ್ರವಾಗಿ ವಿರೋಧಿಸುತ್ತೇವೆ. ಇದರಲ್ಲಿ ಬೆಂಗಳೂರಿನ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿಗಳ ಕೈವಾಡ ಇದರಲ್ಲಿ ನೇರವಾಗಿದೆ. ಬೆಂಗಳೂರು ಬಿಜೆಪಿ ಶಾಸಕರ ಕೈಗೊಂಬೆಯಾಗಿ ಮುಖ್ಯಮಂತ್ರಿಗಳು ಕಾನೂನು ಉಲ್ಲಂಘಿಸಿ ಮೀಸಲಾತಿ ಆದೇಶ ಹೊರಡಿಸಿದ್ದಾರೆ. 7 ದಿನದಲ್ಲಿ ಗಡವು ನೀಡಿದ್ದರೂ ಇವರು ಕಾಂಗ್ರೆಸ್ ಪ್ರಬಲ ಕ್ಷೇತ್ರಗಳಲ್ಲಿ ಸೋಲಿಸಲು ರಾಜಕೀಯ ಉದ್ದೇಶದಿಂದ ಮೀಸಲಾತಿ ಘೋಷಿಸಿಸಿದ್ದಾರೆ.
-ಡಿ.ಕೆ ಸುರೇಶ್, ಸಂಸದರು.