ವಿಜಯಪುರ:
ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಬಿಜೆಪಿಯಲ್ಲಿ ಒಳಗೊಳಗೆ ಕುದಿಯುತ್ತಿದ್ದ ಅಸಹನೆ ಈಗ ಬೀದಿಗೆ ಬಂದಿದೆ. ಪಕ್ಷದ ನಾಯಕರು ವಿವಿಧ ಜಿಲ್ಲೆಗಳಲ್ಲಿ ನಡೆಸುತ್ತಿರುವ ಸಭೆಗಳಲ್ಲಿ ನಾಯಕರ ಕೆಸರೆರಚಾಟ ಮತ್ತು ಕಾರ್ಯಕರ್ತರ ಆಕ್ರೋಶ ತಾರಕಕ್ಕೇರಿದೆ.
ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಸೋಮವಾರ ನಡೆದ ಸಭೆಗಳಲ್ಲಿ ರಾಜ್ಯ ಬಿಜೆಪಿ ನಾಯಕರ ನಡುವೆ ಹೊಗೆಯಾಡುತ್ತಿರುವ ಭಿನ್ನಾಭಿಪ್ರಾಯ ಹಾಗೂ ಪಕ್ಷದೊಳಗಿನ ಗುಂಪುಗಾರಿಕೆ ಬಯಲಿಗೆ ಬಂದಿದೆ.
ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಸಮ್ಮುಖದಲ್ಲಿ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಾಗ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕೆಲ ದಿನಗಳ ಹಿಂದೆಯಷ್ಟೇ ಹಿರಿಯ ನಾಯಕರಾದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ಪ್ರತಾಪ್ ಸಿಂಹ, ಸಿ.ಟಿ.ರವಿ ಅವರು ವಿರೋಧ ಪಕ್ಷಗಳೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಯ್ತು ಎಂದು ಆರೋಪಿಸಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದವರಿಗೆ ಸಭೆಗೆ ಬರಲು ಅವಕಾಶ ನೀಡಬಾರದು ಎಂದು ಪಕ್ಷದ ಮುಖಂಡ ರಾಜು ರೇವಣಕರ್ ಒತ್ತಾಯಿಸಿದಾಗ ಗದ್ದಲ ಪ್ರಾರಂಭವಾಯಿತು.