ಚಿಕ್ಕನಾಯಕನಹಳ್ಳಿ
ಸಹಕಾರ ಸಂಘಗಳಲ್ಲಿ ಕೆಲಸ ಮಾಡುವವರಿಗೆ ಬಹಳಷ್ಟು ಒತ್ತಡವಿರುತ್ತದೆ. ಆದರೂ ಎಲ್ಲರ ಸಹಕಾರ ಪಡೆದು ಕಾನೂನು ಪಾಲನೆಯ ಜೊತೆಗೆ ರೈತರಿಗೂ ಅನುಕೂಲ ಮಾಡಬೇಕು. ಇದರಲ್ಲಿ ಬುದ್ದಿವಂತಿಕೆಯ ಜೊತೆಗೆ ವಿಶ್ವಾಸ ಹೊಂದುವುದು ಮುಖ್ಯ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿರಾಜ್‍ಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ನೆಹರು ಸರ್ಕಲ್ ಬಳಿ ಇರುವ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿಗಳ ಕಚೇರಿಯಲ್ಲಿ ತುಮಕೂರು ಸಹಕಾರಿ ಸಂಘಗಳ ಉಪನಿಬಂಧಕರಾಗಿದ್ದ ಲಕ್ಷ್ಮೀನಾರಾಯಣ್ ವರ್ಗಾವಣೆಯಾದ ಹಾಗೂ ವಿಎಸ್‍ಎಸ್‍ಎನ್ ಕಾರ್ಯದರ್ಶಿ ಹನುಮಂತಪ್ಪ ನಿವೃತ್ತರಾದ ಹಿನ್ನೆಲೆಯಲ್ಲಿ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಾಗ ಮುತುವರ್ಜಿಯಿಂದ ರೈತರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹೆಚ್ಚಿನ ಶ್ರಮವಹಿಸಿ ಕೆಲಸ ನಿರ್ವಹಿಸಬೇಕು. ಸಾರ್ವಜನಿಕರು ನಿಮ್ಮನ್ನೇ ನಂಬಿಕೊಂಡು ಕಚೇರಿಗಳಿಗೆ ಬರುತ್ತಾರೆ ಎಂದ ಅವರು, ಸಹಕಾರಿ ಸಂಘಗಳಲ್ಲಿ ಸೇವೆ ಸಲ್ಲಿಸುವರಿಗೆ ಕಾನೂನು ತಿಳುವಳಿಕೆ ಅಗತ್ಯ. ಈ ನಿಟ್ಟಿನಲ್ಲಿ ಉಪನಿಬಂಧಕರಾಗಿದ್ದ ಲಕ್ಷ್ಮೀನಾರಾಯಣ್ ಉತ್ತಮ ಕಾನೂನು ಅರಿವು ಹೊಂದಿದ್ದರು. ಯಾವುದೇ ವಿಷಯವನ್ನು ಸುಗಮವಾಗಿ ಪರಿಹರಿಸುತ್ತಿದ್ದರು ಎಂದರು.
ವರ್ಗಾವಣೆಗೊಂಡ ಸಹಕಾರಿ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ 2 ವರ್ಷಗಳಿಂದ ಸೇವೆ ಸಲ್ಲಿಸಿದ್ದೇನೆ. ಇಲ್ಲಿ ಎಲ್ಲರ ಸಲಹೆ ಪಡೆದುದರಿಂದ ನನ್ನ ಸೇವೆಗೆ ಸಹಕಾರವಾಯಿತು. ತಾಲ್ಲೂಕಿನಲ್ಲಿದ್ದ ಸಿಡಿಓ ಕಚೇರಿ ಉಳಿಸಲು ಬಹಳಷ್ಟು ಶ್ರಮ ಪಟ್ಟಿದ್ದೆ, ಅದಕ್ಕಾಗಿ ಚಿ.ನಾ.ಹಳ್ಳಿ ತಾಲ್ಲೂಕಿನ ಸೊಸೈಟಿಗಳ ಎಲ್ಲರೂ ಸಹಕಾರ ನೀಡಿದ್ದರಿಂದ ಕಚೇರಿ ಉಳಿಯಿತು ಎಂದರು.
ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಂಗಸ್ವಾಮಿ ಮಾತನಾಡಿ, ಸೊಸೈಟಿಗಳ ಕಾರ್ಯದರ್ಶಿಗಳು ಹಿರಿಯರ, ಅನುಭವಸ್ಥರ ಮಾರ್ಗದರ್ಶನ ಪಡೆದು ಸೊಸೈಟಿ ಅಭಿವೃದ್ಧಿ ಮಾಡಿ ಎಂದರಲ್ಲದೆ, ಸಹಕಾರ ಇಲಾಖೆಯೂ ಸೊಸೈಟಿಗಳಲ್ಲಿ ಸೇವೆ ಸಲ್ಲಿಸುವವರಿಗೆ ತರಬೇತಿ ನೀಡಬೇಕು. ಬ್ಯಾಂಕ್, ಸಹಕಾರ ಇಲಾಖೆ ಎಲ್ಲಾ ಕಡೆಯಲ್ಲೂ ಸೇವೆ ಸಲ್ಲಿಸುವವರಿಗೆ ಕೆಲಸ ಮಾಡುವಾಗ ಕಾನೂನಿನ ಅರಿವು ತಿಳಿದಿರಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಕೊಡಗು ಸಂತ್ರಸ್ತರ ಪರಿಹಾರ ನಿಧಿಗೆ ನೀಡಲು 1.80 ಲಕ್ಷ ಹಣ ಒಟ್ಟುಗೂಡಿಸಿ ನೀಡಲಾಯಿತು.
ಈ ಸಂದರ್ಭದಲ್ಲಿ ನೂತನ ಸಹಕಾರಿ ಸಂಘಗಳ ಉಪನಿಬಂಧಕ ಕೆ.ಆರ್.ರಾಜು, ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಕುಮಾರಸ್ವಾಮಿ, ಕಸಬಾ ಸೊಸೈಟಿಯ ಸಿ.ಎನ್.ಮಧು ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ