ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ಪ್ರಮುಖ ಜಂಕ್ಷನ್ ಗಳನ್ನು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರು ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್, ಪೊಲೀಸ್ ಆಯುಕ್ತರು, ಸೇರಿದಂತೆ ವಿವಿಧ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಶೀಘ್ರವಾಗಿ ಪರಿಹಾರ ಕೈಗೊಳ್ಳುವಂತೆ ಸೂಚಿಸಿದ್ದಾರೆ
ಸಾರಕ್ಕಿ ಜಂಕ್ಷನ್ ಪರಿಶೀಲನೆ :
ಸಿಂಧೂರ ರಸ್ತೆ ಕಡೆಯಿಂದ ಸಾರಕ್ಕಿ ಜಂಕ್ಷನ್ ಕಡೆಯ ರಸ್ತೆಯಲ್ಲಿ ಪಾಲಿಕೆ ವತಿಯಿಂದ ಅಳವಡಿಸಿರುವ ರಸ್ತೆಯ ನಾಮಫಲಕ, ಬೆಸ್ಕಾಂ ನವರು ಅಳವಡಿಸಿರುವ ಕಾಂಕ್ರೀಟ್ ಹಾಗೂ ಝೀರೋ ಟಾಲರೆನ್ಸ್ ಬೋರ್ಡ್‌ನ್ನು ಸ್ಥಳಾಂತರಿಸಿ ಪಾದಚಾರಿ ಮಾರ್ಗವನ್ನು ಸರಿಪಡಿಸಿ ಎಡಭಾಗಕ್ಕೆ ಹೋಗುವ ವಾಹನಗಳಿಗೆ ಸುಗಮವಾಗಿ ಚಲಿಸಲು ಅವಕಾಶ ಕಲ್ಪಿಸಬೇಕಾಗಿರುತ್ತದೆ. ಬಿ.ಎಂ.ಆರ್.ಸಿ.ಎಲ್ ಫಿಲ್ಲರ್‌ಗೆ ಅಳವಡಿಸಿರುವ ಸಿಗ್ನಲ್ ಲೈಟ್ ಎತ್ತರವನ್ನು ಇನ್ನೂ ಮೂರು ಅಡಿ ಎತ್ತರಕ್ಕೆ ಎತ್ತರಿಸಬೇಕಿದೆ.
ಸಾರಕ್ಕಿ ಜಂಕ್ಷನ್ ಕಡೆಯಿಂದ ಸಿಂಧೂರ ಜಂಕ್ಷನ್ ಕಡೆಗೆ ಚಲಿಸುವ ಕನಕಪುರ ರಸ್ತೆಯಲ್ಲಿ ಸಾರಕ್ಕಿ ಸಿಗ್ನಲ್‌ಗೆ ಹೊಂದಿಕೊಂಡಂತಿರುವ ಜೆ.ಪಿ.ನಗರ ಮೆಟ್ರೋ ನಿಲ್ದಾಣದ 14ನೇ ಇ ರಸ್ತೆಯಿಂದ ವಾಹನಗಳು ಪಾದಚಾರಿ ಮಾರ್ಗ ಮುಖೇನ ಕನಕಪುರ ರಸ್ತೆಗೆ ವೇಗವಾಗಿ ಬರುವುದರಿಂದ ಅಪಘಾತಗಳು ಉಂಟಾಗುತ್ತಿವೆ. ಈ ಪೈಕಿ 14ನೇ ಇ ಅಡ್ಡರಸ್ತೆ ಹಾಗೂ ಕನಕಪುರ ಮುಖ್ಯ ರಸ್ತೆಯ ಮಧ್ಯದಲ್ಲಿ ಪಾದಚಾರಿ ಮಾರ್ಗಕ್ಕೆ ಗ್ರೀಲ್ ಹಾಗೂ ಪಾದಚಾರಿ ಕಂಬಗಳನ್ನು ಅಳವಡಿಸಿ ಸುಗಮ ಸಂಚಾರಕ್ಕೆ ಹಾಗೂ ಪಾದಚಾರಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕಾಗಿರುತ್ತದೆ.
ಸಾರಕ್ಕಿ ಸಿಗ್ನಲ್ ನಿಂದ ಕನಕಪುರ ಮುಖ್ಯ ರಸ್ತೆಯಲ್ಲಿ ಜರಗನಹಳ್ಳಿ ಕಡೆಗೆ ಸಾಗುವಾಗ ರಸ್ತೆಯ ಎಡಭಾಗದಲ್ಲಿರುವ ಪಾದಚಾರಿ ಮಾರ್ಗವು ಸಂಪೂರ್ಣವಾಗಿ ಹಾಳಾಗಿದ್ದು, ಪಾದಚಾರಿ ಮಾರ್ಗವನ್ನು ಸರಿಪಡಿಸಿ ಗ್ರೀಲ್‌ಗಳನ್ನು ಸರಿಯಾಗಿ ಅಳವಡಿಸಿ ಪಾದಚಾರಿಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲಮಾಡಿಕೊಡಬೇಕಾಗಿರುತ್ತದೆ.
ಕೋಣನಕುಂಟೆ ಕಡೆಯಿಂದ ಬಂದ ವಾಹನಗಳಿಗೆ ಸಾರಕ್ಕಿ ಜಂಕ್ಷನ್ ಬಳಿ ರಿಂಗ್ ರಸ್ತೆ ಕಡೆಗೆ ಸಿಗ್ನಲ್ ಮುಕ್ತ ಎಡ ತಿರುವು ಕಲ್ಪಿಸುವಲು ತೀರ್ಮಾನ ಮಾಡಿದ್ದಾರೆ.
ಜಯದೇವ ಮೇಲುಸೇತುವೆ ಪರಿಶೀಲನೆ:
ಜಯದೇವ ಮೇಲುಸೇತುವೆ ಈಸ್ಟ್ ಎಂಡ್ ಮುಖ್ಯ ರಸ್ತೆಯ ಕಡೆಗೆ ರೋಡ್ ಸರ್ಪೇಸಿಂಗ್ ಸರಿಪಡಿಸಿ ವಿದ್ಯುತ್ ದೀಪಗಳನ್ನು ಅಳವಡಿಸಲು, ಕೆಳಸೇತುವೆಯಲ್ಲಿ ವಾಟರ್ ಲಾಗಿಂಗ್ ಆಗುತ್ತಿದೆ. ಅದಕ್ಕಾಗಿ ಡ್ರೈನೇಜ್ ಕಾಮಗಾರಿ ಪ್ರಗತಿಯಲ್ಲಿದ್ದು, ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಆಡಳಿತಗಾರರು ಮೆಟ್ರೊ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೆಟ್ರೋ ವತಿಯಿಂದ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕಿದ್ದು, ಕೂಡಲೆ ಅದನ್ನು ಮಾಡಬೇಕು. ಸರ್ವೀಸ್ ರಸ್ತೆಯ ಬದಿ ಕಟ್ಟಡ ಭಗ್ನಾವಶೇಷಗಳನ್ನು ಹಾಕಿದ್ದು, ಅದನ್ನು ತೆರವುಗೊಳಿಸಲು ಸೂಚಿಸಿದರು.
ಸಿಲ್ಕ್ ಬೋರ್ಡ್ ಜಂಕ್ಷನ್ ಪರಿಶೀಲನೆ:
ಬಿ.ಟಿ.ಎಂ ಲೇಔಟ್ – ಸಿಲ್ಕ್ ಬೋರ್ಡ್ ಕಡೆಗೆ ಎರಡು ಬದಿ ಚರಂಡಿ ಹಾಳಾಗಿರುವುದರಿಂದ ಮಳೆ ಬಂದಾಗ ಚರಂಡಿ ನೀರು ಮತ್ತು ಮಳೆ ನೀರು ಒಟ್ಟಾಗಿ ಸೇರಿ ರಾಜಕಾಲುವೆಯಿಂದ ಉಕ್ಕಿ ಹರಿಯುವುದರಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದ್ದು, ರಾಜಕಾಲುವೆ ವಿಭಾಗದಿಂದ ಕೂಡಲೆ ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆಯಾಗುವುದನ್ನು ತಪ್ಪಿಸಲು ಮುಖ್ಯ ಆಯುಕ್ತರು ಸೂಚಿಸಿದರು.
ಹೊಸೂರು ರಸ್ತೆ – ಬಿಟಿಎಂ ರಸ್ತೆಯಲ್ಲಿ ಸ್ಲ್ಯಾಬ್ ಅಳವಡಿಸಿರುವುದರಿಂದ ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಲ್ಕ್ ಬೋರ್ಡ್ ಕಡೆಯಿಂದ ಬಿ.ಟಿ.ಎಂ ಲೇಔಟ್, ಹೆಚ್.ಎಸ್.ಆರ್ ಲೇಔಟ್ ಸರ್ವಿಸ್ ರಸ್ತೆಯ ಕಡೆಗೆ ಪಾದಚಾರಿ ಮೇಲುಸೇತುವೆ ನಿರ್ಮಾಣ ಮಾಡುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಇಬ್ಬಲೂರು ಜಂಕ್ಷನ್ ಪರಿಶೀಲನೆ:
ಇಬ್ಬಲೂರು ಜಂಕ್ಷನ್‌ನಿಂದ ಸರ್ಜಾಪುರ ರಸ್ತೆ ಕಡೆಗೆ ವಾಟರ್ ಲಾಗಿಂಗ್ ಆಗದಿರಲು ತೆಗೆದುಕೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ. ಸರ್ಜಾಪುರ ರಸ್ತೆಯಿಂದ ಬಂದು ಹೊರ ವರ್ತುಲ ರಸ್ತೆಗೆ ಹೋಗುವ ಸಂಚಾರಕ್ಕೆ ಹೆಚ್ಚಿನ ಸ್ಥಳಾವಕಾಶವನ್ನು ಕಲ್ಪಿಸಲು ವೃತ್ತದಲ್ಲಿರುವ 2 ಐ ಲ್ಯಾಂಡ್ ಗಳನ್ನು ಮರು ವಿನ್ಯಾಸಗೊಳಿಸಬೇಕಾಗಿರುತ್ತದೆ. ಹರಳೂರು ಜಂಕ್ಷನ್‌ನಿಂದ ಇಬ್ಬಲೂರು ಜಂಕ್ಷನ್ ವರೆಗೆ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗಗಳನ್ನು ಅಭಿವದ್ಧಿಪಡಿಸುವುದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಗತ್ಯಕ್ರಮ ಕೈಗೊಳ್ಳಲು ಆಡಳಿತಗಾರರು ಸೂಚನೆ ನೀಡಿದರು.
ಈ ವೇಳೆ ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್, ಬಿಡಿಎ ಆಯುಕ್ತ ರಾಜೇಶ್ ಗೌಡ, ಜಲಮಂಡಳಿ ಅಧ್ಯಕ್ಷ ಜಯರಾಂ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ, ಸಂಚಾರಿ ಪೋಲಿಸ್ ಜಂಟಿ ಆಯುಕ್ತ ರವಿಕಾಂತೆ ಗೌಡ, ಸ್ಮಾರ್ಟ್ ಸಿಟಿ ಹಾಗೂ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಪಾಲಿಕೆ ವಲಯ/ವಿಶೇಷ ಆಯುಕ್ತರುಗಳು, ಬಿ.ಎಂ.ಆರ್.ಸಿ.ಎಲ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.