ಬೆಂಗಳೂರು
ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಕಾಂಗ್ರೆಸ್ ಸರ್ಕಾರದ ನಿಯಮಕ್ಕೆ ಬಿಜೆಪಿ ತಡೆ ತಂದಿರುವುದನ್ನು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಕೆಲವರು ಸಾಮೂಹಿಕ ನಮಾಜ್ ಮಾಡಿದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿ, ನಮಾಜ್ ಅನ್ನು ಗರ್ಭಾ ನೃತ್ಯಕ್ಕೆ ಹೋಲಿಸಿದರು. ಇದು ಸಲ್ಲದು ಎಂದಾದರೆ ಅದು ಕೂಡ ಸಲ್ಲದು ಎಂದು ಹೇಳಿದರು.
ಏರ್‌ಪೋರ್ಟ್‌ಗಳಲ್ಲಿ ಪ್ರಾರ್ಥನೆಗೆ ಪ್ರತ್ಯೇಕ ಕೊಠಡಿಗಳು ಇರುತ್ತವೆ. ಎಲ್ಲ ಧರ್ಮದವರೂ ಅವರ ಆಚರಣೆಗಳಲ್ಲಿ ಅಲ್ಲಿ ಮಾಡಿಕೊಳ್ಳಲಿ. ಆದರೆ ಇಲ್ಲಿ ಸಾರ್ವಜನಿಕವಾಗಿ ನಮಾಜ್ ಮಾಡಿದ್ದಾರೆ ಎನ್ನಲಾಗಿದೆ. ಈಗ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತು ಗುಜರಾತ್ ಏರ್‌ಪೋರ್ಟ್‌ನಲ್ಲಿ ಗರ್ಭಾ ಡ್ಯಾನ್ಸ್ ಮಾಡಿದರು. ಅದು ಸರಿ ಎಂದು ಒಪ್ಪಿಕೊಳ್ತಾರಾ ಎಂದು ಖರ್ಗೆ ಪ್ರಶ್ನಿಸಿದರು.
ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬುದು ತಮ್ಮ ಸರ್ಕಾರದ ನಿಲುವು. ಬೆಂಗಳೂರಿನಲ್ಲಿ ಪ್ರತಿಭಟನೆಗಳಿಗೆ ಫ್ರೀಡಂ ಪಾರ್ಕ್ ಅನ್ನು ನಿಗದಿಪಡಿಸಲಾಗಿದೆ. ಅನುಮತಿ ಪಡೆಯಬೇಕು. ಸಾರ್ವಜನಿಕ ಗಣೇಶ ವಿಸರ್ಜನೆಗೂ ಅನುಮತಿ ಪಡೆಯಬೇಕು. ನಾವು ಕೂಡ ವೋಟ್ ಚೋರಿ ಅಭಿಯಾನ ಮಾಡಿದಾಗ ಅನುಮತಿ ಪಡೆದೇ ಮಾಡಿದ್ದೇವೆ. ಆದರೆ, ಇಡೀ ರಾಜ್ಯಕ್ಕೆ ಈ ನಿಯಮವನ್ನು ವಿಸ್ತರಿಸಿದಾಗ ಬಿಜೆಪಿ ತನ್ನ ಅಂಗ ಸಂಸ್ಥೆಗಳ ಮೂಲಕ ಧಾರವಾಡದಲ್ಲಿ ಮಧ್ಯಂತರ ತಡೆ ತಂದಿದ್ದೇಕೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಆರ್‌ಎಸ್‌ಎಸ್ ಆಗಲಿ ಅಥವಾ ನಮಾಜ್ ಆಗಲಿ, ಸಾರ್ವಜನಿಕವಾಗಿ ನಡೆಸಿದರೆ ಯಾವುದೇ ಕಾರ್ಯಕ್ರಮಕ್ಕೆ ಸರ್ಕಾರದ ಅನುಮತಿ ಅಗತ್ಯ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಿದ್ದರೆ, ಸಾರ್ವಜನಿಕರಿಗೆ ಕಷ್ಟವಾಗದಿದ್ದರೆ ಅನುಮತಿ ನೀಡಲಾಗುವುದು. ಈ ಬಗ್ಗೆ ಕಾನೂನನ್ನು ರಾಜ್ಯಾದ್ಯಂತ ವಿಸ್ತರಿಸಲು ಮುಂದಾದಾಗ ಬಿಜೆಪಿಯೇ ಅಲ್ಲವೇ ತಡೆ ತಂದಿದ್ದು ಎಂದು ಖರ್ಗೆ ಪ್ರಶ್ನಿಸಿದರು.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲವರು ಸಾಮೂಹಿಕ ನಮಾಜ್ ಮಾಡಿದ್ದರ ವಿಡಿಯೋ ಇಂದು ವೈರಲ್ ಆಗಿತ್ತು. ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಕೆಲವರು ಸಾಮೂಹಿಕವಾಗಿ ನಮಾಜ್ ಮಾಡಿದ್ದು, ಹಜ್ ಯಾತ್ರಿಕರನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಕೆಲವರು ನಮಾಜ್ ಮಾಡಿದ್ದಾರೆ ಎನ್ನಲಾಗಿದೆ. ಇದರ ವಿಡಿಯೋ ವೈರಲ್ ಆಗಿದ್ದು, ಹಲವರ ಆಕ್ರೋಶಕ್ಕೂ ಕಾರಣವಾಗಿದೆ.
ಬೆಂಗಳೂರು ವಿಮಾನ ನಿಲ್ದಾಣ ಆವರಣದಲ್ಲಿ ನಮಾಜ್ ಮಾಡಿರುವುದನ್ನು ಕರ್ನಾಟಕ ಬಿಜೆಪಿ ಟೀಕಿಸಿದ್ದು, ಹೆಚ್ಚಿನ ಭದ್ರತಾ ವಲಯದಲ್ಲಿ ಇಂತಹ ಕೆಲಸಕ್ಕೆ ಹೇಗೆ ಅವಕಾಶ ನೀಡಲಾಗಿದೆ ಎಂದು ಪ್ರಶ್ನಿಸಿದೆ. ಪಕ್ಷದ ವಕ್ತಾರ ವಿಜಯ್ ಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಈ ಘಟನೆಯ ಬಗ್ಗೆ ಸ್ಪಷ್ಟೀಕರಣವನ್ನು ಕೋರಿದ್ದಾರೆ.








