ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಒತ್ತುವಾರಿಯಾದ ಒಟ್ಟು 3-16. ಎಕರೆ ವಿಸ್ತೀರ್ಣದ ಸರ್ಕಾರಿ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳನ್ನು ಜೂನ್ 10 ರಂದು ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತೆರವುಗೊಳಿಸಲಾಗಿದೆ.
ಯಲಹಂಕ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಹಾಗೂ ಪೂರ್ವ ತಾಲ್ಲೂಕುಗಳಲ್ಲಿ ರೂ. 360.00 ಲಕ್ಷಗಳ ಮೌಲ್ಯದ ಒತ್ತುವರಿಯಾದ ಒಟ್ಟು 3-16.08 ಎಕರೆ ವಿಸ್ತೀರ್ಣದ ಸರ್ಕಾರಿ ಗುಂಡುತೋಪು, ಕಾಲುವೆ, ಖರಾಬು ಕುಂಟೆ, ರಾಜಕಾಲುವೆ, ಸರ್ಕಾರಿ ಗೋಮಾಳ ಪ್ರದೇಶವನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ವಡ್ಡರಪಾಳ್ಯ ಗ್ರಾಮದಲ್ಲಿ ರೂ. 15.00 ಲಕ್ಷ ಬೆಲೆಬಾಳುವ 0-10 ಎಕರೆ ವಿಸ್ತೀರ್ಣದ ಗುಂಡುತೋಪು ಹಾಗೂ ತಾವರೆಕೆರೆ ಹೋಬಳಿಯ ವರ್ತೂರು ಗ್ರಾಮದಲ್ಲಿ ರೂ. 75.00 ಲಕ್ಷ ಬೆಲೆಬಾಳುವ 1-00 ಎಕರೆ ವಿಸ್ತೀರ್ಣದ ಸರ್ಕಾರಿ ಗೋಮಾಳ ಒತ್ತುವರಿಯನ್ನು ತೆರೆವುಗೊಳಿಸಲಾಗಿದೆ, ಎಂದ ಅವರು ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ-1 ಹೋಬಳಿಯ ಅಗ್ರಹಾರ ಪಾಳ್ಯ ಹಾಗೂ ಕಡಬಗೆರೆ ಗ್ರಾಮದಲ್ಲಿ ಒತ್ತುವರಿಯಾದ ರೂ.135.00 ಲಕ್ಷ ಮೌಲ್ಯದ 0-38.00 ಎಕರೆ ವಿಸ್ತೀರ್ಣದ ಸರ್ಕಾರಿ ಗುಂಡುತೋಪು ಹಾಗೂ ಕಾಲುವೆ ಪ್ರದೇಶವನ್ನು ತೆರೆವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಖಾಜಿಸೊಣ್ಣೇನಹಳ್ಳಿ ಗ್ರಾಮದಲ್ಲಿ ಒತ್ತುವರಿಯಾದ ರೂ.120.00 ಲಕ್ಷ ಮೌಲ್ಯದ 0-38 ಎಕರೆ ವಿಸ್ತೀರ್ಣದ ರಾಜಕಾಲುವೆ ಪ್ರದೇಶವನ್ನು ತೆರೆವುಗೊಳಿಸಲಾಗಿದ್ದು, ಯಲಹಂಕ ತಾಲ್ಲೂಕಿನ ಹೆಸರುಘಟ್ಟ-2 ಹೋಬಳಿಯ ಚೊಕ್ಕನಹಳ್ಳಿ ಗ್ರಾಮದ ರೂ.15.00 ಲಕ್ಷ ಮೌಲ್ಯದ 0-10.08 ಎಕರೆ ವಿಸ್ತೀರ್ಣದ ಖರಾಬು ಕುಂಟೆ ತೆರೆವುಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
