ಹುಳಿಯಾರು:
ಬೆಳೆವಿಮೆ ಪರಿಹಾರ ಹಣಕ್ಕೆ ಒತ್ತಾಯಿಸಿ ಸೆ.20 ರ ಗುರುವಾರ ಹುಳಿಯಾರಿನ ಕೆನರಾ ಬ್ಯಾಂಕ್ ಎದುರು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ರಾಜ್ಯ ರೈತ ಸಂಘದ (ಹೊಸಹಳ್ಳಿ ಚಂದ್ರಣ್ಣ ಬಣ) ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ತಿಳಿಸಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಬೆಳೆ ವಿಮೆ ಪಾವತಿಸಲು ರೈತರು ಸಾಲಸೂಲ ಮಾಡಿದ್ದಾರೆ. ಕೆಲವರು ಒಡವೆ ಒತ್ತೆಯಿಟ್ಟಿದ್ದಾರೆ . ಆದರೆ ಬೆಳೆ ನಷ್ಟವಾಗಿ ವರ್ಷ ಕಳೆದರೂ ತಾಲೂಕಿನ ರೈತರಿಗೆ ಪರಿಹಾರವಾಗಿ ವಿಮೆ ಹಣ ರೈತರ ಖಾತೆಗೆ ಜಮೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಜಿಲ್ಲೆಯ ರೈತರಿಂದ 2016-17 ಮತ್ತು 2017-18 ನೇ ವರ್ಷದಲ್ಲಿ ಕೋಟ್ಯಾಂತರ ರೂ. ಬೆಳೆ ವಿಮೆ ಕಟ್ಟಿಸಿಕೊಂಡು ಬೆಳೆ ನಷ್ಟದ ಪರಿಹಾರವಾಗಿ 95 ಕೋಟಿ ರೂ. ಘೋಷಿಸಿದೆ. ಅದರೆ ಇದರೂವರೆವಿಗೂ ಈ ಹಣ ಯಾವ ರೈತರ ಖಾತೆಗೆ ಜಮೆಯಾಗಿಲ್ಲ. ಬೆಳೆ ವಿಮೆ ಬರುವ ಭರವಸೆಯಿಂದ ಸಾಲಸೂಲ ಮಾಡಿರುವ ರೈತರ ಗೋಳು ಈಗ ಕೇಳುವವರಾರು ಇಲ್ಲದಾಗಿದ್ದಾರೆ ಎಂದಿದ್ದಾರೆ.
ಈ ಬಗ್ಗೆ ಬ್ಯಾಂಕ್ ಹಾಗೂ ಕೃಷಿ ಅಧಿಕಾರಿಗಳನ್ನೂ ಪ್ರಶ್ನಿಸಿದರೂ ಹಾರಿಕೆಯ ಉತ್ತರ ನೀಡುತ್ತಾರೆ. ಇನ್ನು ಜನಪ್ರತಿನಿಧಿಗಳು ಸಬೂಬು ಹೇಳಿ ಕಳಿಸುತ್ತಾರೆ. ಹಾಗಾಗಿ ವಿಮೆಯ ಪರಿಹಾರ ಹಣದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವ ನಿಟ್ಟಿನಲ್ಲಿ ಒತ್ತಡ ಏರುವ ಸಲುವಾಗಿ ಬ್ಯಾಂಕ್ ಮುತ್ತಿಗೆ ಕಾರ್ಯ ಹಮ್ಮಿಕೊಂಡಿದ್ದು ರೈತರು ಜಾತಿ, ಪಕ್ಷದ ಬಿಟ್ಟು ಸಹಸ್ತ್ರ ಸಂಖ್ಯೆಯಲ್ಲಿ ಸೇರಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
