ಬೆಳೆವಿಮೆ ಪರಿಹಾರ ಹಣ ಪಾವತಿಗೆ ಒತ್ತಾಯಿಸಿ ಧರಣಿ

ಹುಳಿಯಾರು:

              2016-17 ಮತ್ತು 2017–18 ನೇ ಸಾಲಿನಲ್ಲಿ ತಾಲೂಕಿನಲ್ಲಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಹೊಸಹಳ್ಳಿ ಚಂದ್ರಣ್ಣ ಬಣದ ರೈತರು ಹುಳಿಯಾರು ಸಮೀಪದ ಕಂದಿಕೆರೆ ಕಾವೇರಿ ಗ್ರಾಮೀಣ ಬ್ಯಾಂಕ್‍ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

               ಊರಿನ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬ್ಯಾಂಕ್ ಎದುರು ಜಮಾವಣೆಗೊಂಡ ಅಪಾರ ಸಂಖ್ಯೆಯ ರೈತರು ತಾಲೂಕು ಆಡಳಿತ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ಘೋಷಣೆ ಕೂಗಿದರು. ಎರಡು ಗಂಟೆಗೂ ಹೆಚ್ಚು ಕಾಲ ಬ್ಯಾಂಕ್‍ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

               ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಮಾತನಾಡಿ, 2016-17 ನೇ ಸಾಲಿನಲ್ಲಿ ಬರಗಾಲದಿಂದ ಬೆಳೆ ನಷ್ಟ ಅನುಭವಿಸಿದ ತಾಲೂಕಿನ ರೈತರಿಗೆ 95 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಪತ್ರಿಕೆಗಳಲ್ಲಿ ಓದಿದ್ದೇವೆ. ಆದರೆ ಚಿಕ್ಕನಾಯಕನಹಳ್ಳಿ ತಾಲೂಕು ಆಡಳಿತದ ವೈಫಲ್ಯದಿಂದಾಗಿ ತಾಲೂಕಿನ ರೈತರಿಗೆ ಬೆಳೆ ಪರಿಹಾರ ಹಣ ಪಾವತಿಸಿಲ್ಲ. ಪಾವತಿಸಿದರೂ ಸಮರ್ಪಕವಾಗಿ ಪಾವತಿಸದೆ ತಾರತಮ್ಯ ಮಾಡಿದ್ದರೆ. ರೈತರ ಪರವಾಗಿ ಹತ್ತಾರು ಬಾರಿ ಹೋರಾಟ ನಡೆಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

               2016-17 ರಲ್ಲಿ ಹಣ ಪಾವತಿಸದಿದ್ದರೂ 2017-18 ರಲ್ಲಿ ರೈತರು ಸರ್ಕಾರ ಮತ್ತು ಬ್ಯಾಂಕ್ ಮೇಲೆ ನಂಬಿಕೆಯಿಟ್ಟು ಮತ್ತೆ ವಿಮೆ ಕಟ್ಟಿದ್ದಾರೆ. ಆದರೆ ಮುಂಗಾರು ನಷ್ಟ ಸಂಭವಿಸಿದರೂ ವಿಮೆ ಪಾವತಿಸಿಲ್ಲ. ಹೀಗೆ ಎರಡ್ಮೂರು ವರ್ಷ ಬೆಳೆ ನಷ್ಟವಾದರೂ ವಿಮೆ ಪರಿಹಾರ ನೀಡದಿದ್ದರೆ ರೈತರು ಪುನಃ ಕೃಷಿ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರಲ್ಲದೆ. ರೈತರು ಈಗಾಗಲೇ ಸಾಲಸೂಲ ಮಾಡಿ ಕೃಷಿ ಮಾಡಿದ್ದು ಬೆಳೆ ನಷ್ಟದ ಪರಿಹಾರ ನೀಡದಿದ್ದರೆ ಆತ್ಮಹತ್ಯೆಯ ದಾರಿ ತುಳಿಯುತ್ತಾರೆ ಎಂದು ಎಚ್ಚರಿಸಿದ್ದಾರೆ.

                ರೈತರ ಸಂಘದ ಜಿಲ್ಲಾಧ್ಯಕ್ಷ ಈಶ್ವರಪ್ಪ ಅವರು ಮಾತನಾಡಿ ರೈತರು ತಮ್ಮ ಹೆಂಡ್ತಿ, ಮಗಳ ಒಡವೆ ಅಡ ಇಟ್ಟು ವಿಮೆ ಕಟ್ಟಿದ್ದಾರೆ. ಬಿತ್ತಿದ ಬೀಜ ಸಹ ಪುನಃ ಬಾರದೆ ಬೆಳೆ ಕೈಕೊಟ್ಟಿದೆ. ಒಡವೆಗಳು ಹರಾಜಿಗೆ ಬಂದಿದ್ದು ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆದರೂ ವಿಮಾ ಕಂಪೆನಿಯವರು ಬಿಡಿಗಾಸೂ ಕೊಡದೆ ರೈತರನ್ನು ಹಗಲು ದರೋಡೆ ಮಾಡ್ತಿದ್ದಾರೆ. ಮುಂಗಾರು ರಾಜ್ಯದಲ್ಲಿ ಎಲ್ಲಾ ಡ್ಯಾಂಗಳು ತುಂಬಿದ್ದರೂ ತಾಲೂಕಿನ ಬೋರನಕಣಿವೆ ಜಲಾಶಯಕ್ಕೆ ಅರ್ಧ ಅಡಿ ಸಹ ನೀರು ಬಂದಿಲ್ಲ. ತಾಲ್ಲೂಕಿನ ಹಳ್ಳ ಕೊಳ್ಳಗಳೂ ಸಹ ಬರಿದಾಗಿವೆ. ಈ ಸಂದರ್ಭದಲ್ಲಿ ರೈತನಿಗೆ ಆಸರೆಯಾಗಬೇಕಾದ ವಿಮೆ ಹಣ ಬಾರದಿರುವುದು ರೈತರನ್ನು ಮತ್ತೊಷ್ಟು ಸಂಕಷ್ಟಕ್ಕೆ ದೂಡಿದಂತ್ತಾಗಿದೆ ಎಂದರು.

                ಗ್ರಾಪಂ ಉಪಾಧ್ಯಕ್ಷ ರಾಜಣ್ಣ, ಸದಸ್ಯರುಗಳಾದ ನಾಗವೇಣಿರಂಗಸ್ವಾಮಿ, ದೇವರಾಜು, ಲಲಿತಮ್ಮ, ರೈತ ಸಂಘದ ಪಟೇಲ್ ನರಸಿಂಹಯ್ಯ, ಕರಿಯಪ್ಪ, ಕೆಂಚಲಿಂಗಪ್ಪ, ಕೆ.ಎನ್.ಮಲ್ಲಿಕಾರ್ಜುನಯ್ಯ, ಪುಟ್ಟಯ್ಯ, ತಿಮ್ಮಸ್ವಾಮಿ, ಕೃಷ್ಣಪ್ಪ, ಹೊನ್ನಪ್ಪ, ಜಯಣ್ಣ, ದೇವರಾಜಅರಸ್, ಕೆ.ರಂಗಯ್ಯ, ಕೆ.ಗೋವಿಂದಯ್ಯ, ಎಂ.ಪಂಚಾಕ್ಷರಿ, ಚನ್ನಪ್ಪ, ಅಚಿಜನಬೋವಿ, ಪುಷ್ಪಾಬಾಯಿ, ಸಾಕುಬಾಯಿ, ಚಂದ್ರಶೇಖರ್ ಮತ್ತಿತರರು ಇದ್ದರು.
—————————–
                  ವಿಮೆ ಮಾಡಿಸಿದ ಎಲ್ಲಾ ರೈತರಿಗೆ ಹಣ ಬರದೆ ಕೆಲವರಿಗೆ ಮಾತ್ರ ಬಂದಿದ್ದು ಅದರಲ್ಲೂ ಸಹ ಬ್ಯಾಂಕ್ ವ್ಯವಸ್ಥಾಪಕರು ಬಂದಿರುವ ವಿಮೆ ಹಣವನ್ನು ಸಾಲಕ್ಕೆ ವಜಾ ಮಾಡಿ, ರೈತರನ್ನು ಶೊಷಣೆ ಮಾಡುತ್ತಿರುವುದು ಅಧಿಕಾರಿಗಳ ದಬ್ಬಾಳಿಕೆಯಾಗಿದ್ದು ತಕ್ಷಣ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅವರಿಗೆ ಬಂದಿರುವ ವಿಮೆ ಹಣವನ್ನು ಸಂಪೂರ್ಣ ನೀಡಿ ರೈತರಿಗೆ ಅನುಕೂಲ ಮಾಡಿ ವಿಮೆ ಹಣ ಬರದಿರುವ ರೈತರಿಗೆ ತಕ್ಷಣ ವಿಮೆ ಹಣವನ್ನು ಪಾವತಿಸಿಬೇಕು ಹಾಗೂ ವಿಮೆ ಹಣ ಕೊಡದೆ ತಾರತಮ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಬ್ಯಾಂಕ್ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
—————————
                    ಸತತವಾಗಿ ಬರಗಾಲದಿಂದ ತೊಂದರೆ ಅನುಭವಿಸಿದ ಈ ಭಾಗದ ರೈತರಿಗೆ ಬೆಳೆ ವಿಮೆ ವರದಾನವಾಗಿಲ್ಲ. ರೈತನೇ ದೇಶದ ಬೆನ್ನೆಲುಬು ಎನ್ನುವ ಸರ್ಕಾರ ವಿಮೆ ಪಾವತಿ ಮಾಡಿದ ಕೆಲವು ಮಂದಿಗೆ ಮಾತ್ರ ವಿಮೆ ಹಣ ಜಮೆ ಮಾಡಿದೆ. ಉಳಿದ ರೈತರ ಖಾತೆಗೆ ಹಣ ಜಮೆ ಮಾಡುವಂತೆ ಒತ್ತಾಯಿಸಿ ಹಲವು ದಿನಗಳಿಂದ ಅನೇಕ ಕಚೇರಿಗಳಿಗೆ ಅಲೆದಾಡುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇನ್ನಾದರೂ ರೈತರ ಖಾತೆಗೆ ವಿಮೆ ಹಣ ಜಮಾ ಮಾಡಬೇಕು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap