ದಾವಣಗೆರೆ :
ಇಷ್ಟು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಿದ್ದ ಬಡ ಜನರು ಬ್ಯಾಂಕಿಂಗ್ ಸೇವೆ ಪಡೆಯಲು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸಹಕಾರಿಯಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್‍ನಲ್ಲಿ ಶನಿವಾರ ‘ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್’ ದಾವಣಗೆರೆ ಶಾಖೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಇನ್ನೂ ಬ್ಯಾಂಕಿಂಗ್ ಸೇವೆಯಿಂದ ವಂಚಿತರಾಗಿರುವ ಬಡ ಜನರು ಬ್ಯಾಂಕ್ ಸೇವೆ ಪಡೆಯಲು ಹಾಗೂ ಅಲ್ಪ ಪ್ರಮಾಣದಲ್ಲಿ ಬ್ಯಾಂಕಿಂಗ್ ಸೇವೆ ಹೊಂದಿರುವ ವರ್ಗಕ್ಕೆ ಪೂರ್ಣ ಪ್ರಮಾಣದ ಬ್ಯಾಂಕಿಂಗ್ ಸೇವೆ ಒದಗಿಸುವುದೇ ಈ ಯೋಜನೆಯ ಮೂಲ ಧ್ಯೇಯವಾಗಿದೆ ಎಂದರು.
ಕೇವಲ ಆಧಾರ್‍ಕಾರ್ಡ್ ಸಂಖ್ಯೆ ನೀಡುವ ಮೂಲಕ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‍ನಲ್ಲಿ ಖಾತೆ ತೆರೆಯಬಹುದಾಗಿದೆ. ಹೀಗಾಗಿ ಜಿಲ್ಲೆಯ ರೈತರು, ಜನಸಾಮಾನ್ಯರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಎಲ್ಲರೂ ಈ ಯೋಜನೆಯಡಿ ಖಾತೆ ತೆರೆದು ವ್ಯವಹರಿಸುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ವ್ಯವಹಾರ, ಕಾಗದರಹಿತ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಜಿಲ್ಲೆಯ ನಾಗರೀಕರು ಈ ಯೋಜನೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಯೋಜನೆಯನ್ನು ಬಳಕೆಯಲ್ಲಿ ಜಿಲ್ಲೆ ಮೊದಲ ಸ್ಥಾನಕ್ಕೆ ಬರುವಂತೆ ಮಾಡಬೇಕು. ಜನಸಾಮಾನ್ಯರ ಬಾಗಿಲಿಗೇ ಬ್ಯಾಂಕಿಂಗ್ ಸೇವೆ ತಲುಪಿಸುವ ‘ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್’ ವ್ಯವಸ್ಥೆಯನ್ನು ಇಂದು ದೇಶಾದ್ಯಂತ ಪ್ರಾರಂಭಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಕನಸಿನ ಡಿಜಿಟಲ್ ಇಂಡಿಯಾ ಯೋಜನೆ ಸಾಕಾರಗೊಳಿಸಿದ್ದಾರೆ ಎಂದರು.
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ವ್ಯವಸ್ಥೆಯನ್ನು ಭಾರತ ಸರ್ಕಾರದ ಅಂಚೆ ಇಲಾಖೆಯ ಮೂಲಕ ಜಾರಿಗೊಳಿಸಲಾಗುತ್ತಿದ್ದು, ಜನಸಾಮಾನ್ಯರ ಕೈಗೆಟುಕುವ, ಸರಳ ವ್ಯವಹಾರದ ಮತ್ತು ನಂಬಿಕಾರ್ಹ ಬ್ಯಾಂಕಿಂಗ್ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆ ಅಡಿಯಲ್ಲಿ ದೇಶಾದ್ಯಂತ 3 ಲಕ್ಷ ಅಂಚೆ ಸಿಬ್ಬಂದಿಗಳು ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಾರೆ ಎಂದರು.
ಇಂದು ದಾವಣಗೆರೆ, ಚಿತ್ರದುರ್ಗದಲ್ಲೂ ಈ ಬ್ಯಾಂಕ್ ಶಾಖೆಗಳನ್ನು ಆರಂಭೀಸಲಾಗಿದ್ದು, ದಾವಣಗೆರೆ ಶಾಖೆಯ ದಾವಣಗೆರೆ, ಗುತ್ತೂರು, ಹನಗವಾಡಿ, ಹರಿಹರ, ಬಾರ್‍ಲೈನ್ ರಸ್ತೆ ಇಲ್ಲಿ ಆಕ್ಸೆಸ್ ಪಾಯಿಂಟ್‍ಗಳನ್ನು ಸ್ಥಾಪಿಸಲಾಗಿದೆ ಎಂದ ಅವರು, ವಿಮೆಯಿಂದ ಸುರಕ್ಷತೆ ಕಲ್ಪಿಸುವುದು, ಹಣದಿಂದ ಹಣ ವೃದ್ಧಿಸುವುದು ಮತ್ತು ಸಣ್ಣ ಉಳಿತಾಯದಿಂದ ಉಜ್ವಲ ಭವಿಷ್ಯ ರೂಪಿಸುವ ಜೊತೆಗೆ ನಗದು ಬಳಸದೇ, ಡಿಜಿಟಲ್ ಪೇಮೆಂಟ್ ಮೂಲಕ ನಗದು ರಹಿತ ವ್ಯವಹಾರ ನಡೆಸುವ ಕುರಿತು ಜಾಗೃತಿ ಮೂಡಿಸುವಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು, ಮಹಿಳೆಯರು, ಕಿರಾಣಿ ಅಂಗಡಿಯವರು, ಸಣ್ಣ ವ್ಯಾಪಾರಿಗಳು, ಹಿರಿಯ ನಾಗರೀಕರು, ಬಡಜನತೆ, ವಲಸೆ ಜನತೆ ಈ ಯೋಜನೆ ಮೂಲಕ ಠೇವಣಿ, ಹಣ ವರ್ಗಾವಣೆ, ಬಿಲ್ಲುಗಳ ಪಾವತಿ, ಇಂಟರ್‍ನೆಟ್ ಬ್ಯಾಂಕಿಂಗ್ ವ್ಯವಹಾರವನ್ನು ಸುಲಭವಾಗಿ ತಮ್ಮ ಮೊಬೈಲ್‍ನಲ್ಲಿ ಐಪಿಪಿಬಿ ಆ್ಯಪ್ ಮೂಲಕವೇ ನಡೆಸಬಹುದಾಗಿದೆ ಎಂದರು.
ಶಾಸಕ ಎಸ್.ಎ.ರವೀಂದ್ರನಾಥ ಮಾತನಾಡಿ, ಸಾಮಾನ್ಯ ಜನತೆಯ ಹಿತದೃಷ್ಟಿಯಿಂದ ಹಾಗೂ ಸುಲಭ ವ್ಯವಹಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಮಂತ್ರಿಗಳು ಈ ಬ್ಯಾಂಕ್ ಜಾರಿಗೆ ತರಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶೀಲ ಕೆ.ಆರ್ ಮಾತನಾಡಿ, ತಾಂತ್ರಿಕತೆ ಬೆಳೆಯುವ ಮುನ್ನ ಎಲ್ಲರೂ ಎದುರು ನೋಡುತ್ತಿದ್ದಂತಹ ಸೇವೆ ಅಂಚೆ ಇಲಾಖೆಯದ್ದಾಗಿತ್ತು. ಇಂದು ಅದೇ ಇಲಾಖೆ ಮೂಲಕ ಸುಲಭವಾಗಿ ವ್ಯವಹರಿಸುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷಕ ಶಿವರಾಜ್ ಕಿಂಡೀಮಠ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯ ಪರಿಣಾಮಕಾರಿ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಹಕರಿಗೆ ಉಳಿತಾಯ ಖಾತೆ, ಚಾಲ್ತಿ ಖಾತೆ, ಹಣ ಸಂದಾಯ, ಹಣ ವರ್ಗಾವಣೆ, ಫಲಾನುಭವಿಗಳಿಗೆ ನೇರ ವರ್ಗಾವಣೆ ವ್ಯವಸ್ಥೆ, ಬಿಲ್ ಪಾವತಿ, ಉದ್ಯಮಿಗಳಿಗೆ ಮತ್ತು ವ್ಯಾಪಾರಿಗಳಿಗೆ ಹಣ ಪಾವತಿ ಸೇವೆಗಳನ್ನು ಒದಗಿಸಲಾಗುವುದು. ಭಾರತೀಯ ಅಂಚೆ ಇಲಾಖೆಯಡಿ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ 1.5 ಲಕ್ಷಕ್ಕೂ ಹೆಚ್ಚಿನ ಅಂಚೆ ಕಚೇರಿಗಳಿದ್ದು ಪೋಸ್ಟ್‍ಮ್ಯಾನ್, ಗ್ರಾಮೀಣ ಡಾಕ್ ಸೇವಕ್ ಮತ್ತು ಇತರ ಸಿಬ್ಬಂದಿ ಮೂಲಕ ಮನೆ-ಮನೆಗೂ ಬ್ಯಾಂಕಿಂಗ್ ಸೌಲಭ್ಯ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಧಾನಮಂತ್ರಿಗಳ ಐಪಿಪಿಬಿ ಉದ್ಘಾಟನಾ ಕಾರ್ಯಕ್ರಮದ ನೇರಪ್ರಸಾರದ ವೀಕ್ಷಣೆ ಮಾಡಲಾಯಿತು. ಉದ್ಘಾಟನಾ ಕಾರ್ಯಕ್ರಮದ ನಂತರ ಸಂಸದ ಜಿ ಎಂ ಸಿದ್ದೇಶ್ವ, ಶಾಸಕ ಎಸ್.ಎ.ರವೀಂದ್ರನಾಥ್, ಜಿ.ಪಂ ಅಧ್ಯಕ್ಷೆ ಕೆ.ಆರ್.ಜಯಶೀಲ ಬಯೋಮೆಟ್ರಿಕ್ಸ್ ಪಡೆದು ಐಪಿಪಿಬಿ ಖಾತೆ ತೆರೆದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಪೋಸ್ಟ್ ಮಾಸ್ಟರ್ ಕೆಂಪ ಲಕ್ಕಮ್ಮ ಉಪಸ್ಥಿತರಿದ್ದರು. ಈಶ್ವರಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ನಾಡಗೀತೆ ಹಾಡಿದರು.