ಚಳ್ಳಕೆರೆ
15 ನಗರದ ಹಳೆ ನಗರಸಭೆ ಬಳಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಆಧಾರ ಕಾರ್ಡ್ ಪಡೆಯಲು ಗ್ರಾಮಾಂತರ ಪ್ರದೇಶದಿಂದ ನೂರಾರು ಜನರು ಬ್ಯಾಂಕ್‍ಗೆ ಆಗಮಿಸಿ ಟೋಕನ್ ಪಡೆಯಲು ಬ್ಯಾಂಕ್‍ನ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಪುಟ್ಟಾಣಿ ಮಕ್ಕಳೊಂದಿಗೆ ಮಲಗುತ್ತಿದ್ದು, ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಟಿ.ಜೆ.ವೆಂಕಟೇಶ್ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯತೆಯನ್ನು ವಿರೋಧಿಸಿ ಶಾಸಕ ಟಿ.ರಘುಮೂರ್ತಿಯವರಿಗೆ ಇಲ್ಲಿನ ವಾಸ್ತವ ಸ್ಥಿತಿಯ ಬಗ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಶಾಸಕ ಟಿ.ರಘುಮೂರ್ತಿ ಬ್ಯಾಂಕ್ ವ್ಯವಸ್ಥಾಪಕರನ್ನು ಕರೆಸಿ ರಾತ್ರಿ ವೇಳೆ ಹೆಣ್ಣು ಮಕ್ಕಳು ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ಸೌಲಭ್ಯ, ರಕ್ಷಣೆ ಇಲ್ಲದೆ ಆಧಾರ ಕಾರ್ಡ್‍ಗಾಗಿ ಕಾಯುತ್ತಿರುವ ಬಗ್ಗೆ ತೀಷ್ಣವಾಗಿ ಪ್ರಶ್ನಿಸಿದರು. ಪ್ರತಿನಿತ್ಯ ಸಾರ್ವಜನಿಕರು ಈ ರೀತಿ ತೊಂದರೆ ಅನುಭವಿಸುತ್ತಿದ್ದರೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿ ಜನರಿಗೆ ಆಧಾರ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳಬೇಕಿತ್ತು.
ಈ ಕೂಡಲೇ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಯಾರಿಗೂ ತೊಂದರೆ, ವಿಳಂಭವಾಗದಂತೆ ಆಧಾರ ಕಾರ್ಡ್ ವಿತರಣೆಗೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಬ್ಯಾಂಕ್‍ನಲ್ಲಿ ಪ್ರತಿಯೊಂದು ಕಾರ್ಯಕ್ಕೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲವೆಂಬ ದೂರನ್ನು ಸಾರ್ವಜನಿಕರು ನೀಡಿದರು.
ಈ ಬಗ್ಗೆ ಶಾಸಕರಿಗೆ ಭರವಸೆ ನೀಡಿದ ಬ್ಯಾಂಕ್ ವ್ಯವಸ್ಥಾಪಕರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಆಧಾರ ಕಾರ್ಡ್ ಪಡೆಯಲು ಬರುವವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಜೆ.ವೆಂಕಟೇಶ್ ರವರೊಂದಿಗೆ ಮಾತನಾಡಿದ ಶಾಸಕ ಟಿ.ರಘುಮೂರ್ತಿ ಸಾರ್ವಜನಿಕ ಹಿತದೃಷ್ಠಿಯಿಂದ ಉತ್ತಮ ಕೆಲಸ ಮಾಡಿದ್ದೀರಿ, ಮುಂದಿನ ದಿನಗಳಲ್ಲಿ ಇಂತಹ ಸಂಕಷ್ಟಗಳನ್ನು ಜನತೆ ಎದುರಿಸುವ ಪ್ರಶ್ನೆ ಉದ್ಭವಿಸದು ಎಂದರು. ಕರ್ನಾಟಕ ರಕ್ಷಣಾ ವೇದಿಕೆಯ ಜನಪರ ಕಾಳಜಿಯ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್ ಇನ್ನಿತರರು ಇದ್ದರು.