ಕುಣಿಗಲ್
ತಾಲ್ಲೂಕಿನ ಗವಿಮಠ ಬೈಪಾಸ್ ಬಳಿ ಇರುವ ವಿಜಯಬ್ಯಾಂಕ್ ದರೋಡೆಗೆ ಗೋಡೆಯನ್ನು ಕೊರೆದು ನುಗ್ಗಿದ ಕಳ್ಳರು ಹಣ ಸಿಗದೇ ಕಂಪ್ಯೂಟರ್ ಕದ್ದು ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಪಟ್ಟಣದ ಹೊರವಲಯದ ಗವಿಮಠ ಬಳಿಯಿರುವ ವಿಜಯಬ್ಯಾಂಕ್ ಶಾಖೆಗೆ ಕಳ್ಳರು ಮಂಗಳವಾರ ಮಧ್ಯರಾತ್ರಿ ಬ್ಯಾಂಕ್ ಹಿಂಬದಿಯ ಗೋಡೆಯನ್ನ ಕೊರೆದು ಬ್ಯಾಂಕ್‍ನಲ್ಲಿರುವ ಹಣ ಒಡವೆಗಳನ್ನ ದೋಚಲು ಒಳನುಗ್ಗಿ ಸ್ಟ್ರಾಂಗ್ ರೂಂ ಒಡೆಯುವ ಪ್ರಯತ್ನದಲ್ಲಿದ್ದಾಗ ಶಬ್ದದಿಂದ ಎಚ್ಚರಗೊಂಡ ಗ್ರಾಮಸ್ಥರು ಪೋಲೀಸರಿಗೆ ಮಾಹಿತಿ ನೀಡುವುದರ ಜೊತೆಗೆ ಕಳ್ಳರನ್ನು ಹಿಡಿಯಲು ಗ್ರಾಮಸ್ಥರು ಒಂದಾಗಿ ಕೂಗಾಟ ಮಾಡುತ್ತಿದ್ದಂತೆ ದರೋಡೆಕೋರರು ಸ್ಥಳಿಯರ ಮೇಲೆ ಕಲ್ಲುತೂರಾಟ ನಡೆಸಿ ದರೋಡೆ ವಿಫಲವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಪೋಲೀಸರ ತಂಡ ಘಟನೆ ನಡೆದ ಬ್ಯಾಂಕ್ ಸ್ಥಳಕ್ಕೆ ತೆರಳಿ ಸುತ್ತಮುತ್ತ ಪ್ರದೇಶವನ್ನೆಲ್ಲ ಸ್ಥಳಿಯರ ಸಹಕಾರದೊಂದಿಗೆ ಆವರಿಸಿ ದಷ್ಕರ್ಮಿಗಳಿಗೆ ಹುಡುಕಾಟ ನಡೆಸಿದರು ಆದರೆ ಕಳ್ಳರು ಮಿಂಚಿನಂತೆ ಮಾಯವಾಗಿದ್ದಾರೆ. ನಂತರ ಬ್ಯಾಂಕ್ ವ್ಯವಸ್ತಾಪಕರೊಂದಿಗೆ ಬ್ಯಾಂಕ್‍ನ ಒಳಭಾಗ ಪರಿಶೀಲಿಸಲಾಗಿದೆ, ಹಣ ಮತ್ತು ಒಡವೆಗಳನ್ನು ಇಡುವ ಸ್ಟ್ರಾಂಗ್ ರೂಂ ಒಡೆಯುವ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ಬ್ಯಾಂಕ್‍ನವರು ಮಾಹಿತಿ ನೀಡುವ ಪ್ರಕಾರ ಮೂರು ಕಂಪ್ಯೂಟರ್ ಸಿಸ್ಟಮ್ ಹಾಗೂ ಸಿಸಿ ಕ್ಯಾಮರ ಹಾರ್ಡ್ ಡಿಸ್ಕ್‍ಗಳನ್ನ ಹೊತ್ತೊಯ್ದಿರುವುದು ಕಂಡುಬಂದಿದೆ ಎಂದು ವ್ಯವಸ್ಥಾಪಕ ತಿಳಿಸಿದ್ದಾರೆ. ದರೋಡೆಗೆ ಯತ್ನಿಸಿದ ಸ್ಥಳದಲ್ಲಿ ಗೋಡೆ ಒಡೆಯಲು ತಂದಿದ್ದ ಕೆಲವು ಸಲಕರಣೆಗಳು ಕಂಡುಬಂದಿದ್ದು ಸ್ಥಳಿಯರು ಮಾಹಿತಿ ನೀಡುವ ಪ್ರಕಾರ ಸುಮಾರು 10 ಜನರು ದರೋಡೆ ತಂಡದಲ್ಲಿದ್ದರು ಸ್ಥಳಕ್ಕೆ ತುಮಕೂರಿನಿಂದ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತುಮಕೂರು ಪೋಲೀಸ್‍ವರಿಷ್ಠಾಧಿಕಾರಿ ಡಾ. ದಿವ್ಯಗೋಪಿನಾಥ್, ಡಿ.ವೈ.ಎಸ್.ಪಿ ವೆಂಕಟೇಶ್, ಸಿ.ಪಿ.ಐ ಅಶೋಕ್‍ಕುಮಾರ್, ಪಿ.ಎಸ್.ಐ ಪುಟ್ಟೇಗೌಡ ಕುಣಿಗಲ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.